ಆರು ವರ್ಷಗಳ ಹಿಂದಿನ ಮಾತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರ ಮೊದಲ ಚಿತ್ರ ಜಾಗ್ವಾರ್ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಂಡ್ಯದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ, ಕುಮಾರಣ್ಣ ತಮ್ಮ ಮಗನನ್ನು ವೇದಿಕೆಯ ಮೇಲೆ ಕರೆದರು. ನಿಖಿಲ್ ಕಾಣದಿದ್ದಾಗ, ‘ಎಲ್ಲಿದ್ದೀಯಪ್ಪಾ ನಿಖಿಲ್?’ ಎಂದರು. ಆದರೆ, ಇದು ಆಗ ಅಷ್ಟು ಸದ್ದು ಮಾಡಲಿಲ್ಲ. ಯಾವಾಗ ನಿಖಿಲ್, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ವಿರುದ್ಧ ಸ್ಪರ್ಧಿಸಿದರೋ, ಆ ನಂತರ ಅವರ ವಿರುದ್ಧ ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂಬ ಟ್ರೋಲ್ ಹೆಚ್ಚಾಯಿತು. ಅದರಲ್ಲೂ ಆ ಚುನಾವಣೆಯಲ್ಲಿ ಅವರು ಸೋತ ಮೇಲಂತೂ ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂದು ಟ್ರೋಲ್ ಇನ್ನಷ್ಟು ಹೆಚ್ಚಾಯಿತು.
ಈಗ ಚುನಾವಣೆಗಳು ಮುಗಿದು ಮೂರು ವರ್ಷಗಳಾಗಿವೆ. ಮಂಡ್ಯದ ಜನ ಸಹ ಇದನ್ನು ಮರೆತಿದ್ದಾರೆ. ಹೀಗಿರುವಾಗ, ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ. ಈ ಬಾರಿ ಇಂಥ ಪ್ರಶ್ನೆ ಕೇಳುತ್ತಿರುವುದು ಮಂಡ್ಯದ ಮತದಾರರಲ್ಲ. ಕರ್ನಾಟಕದ ಜನತೆ ಎಂಬುದು ಗೊತ್ತಿರಲಿ.
ನಿಖಿಲ್ ರಾಜಕಾರಣದಲ್ಲಿ ಸೋತ ನಂತರ ಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಂಡರು. ಒಂದಿಷ್ಟು ಚಿತ್ರಗಳಲ್ಲಿ ಅವರು ನಟಿಸಬಹುದು ಎಂಬ ಮಾತು ಕೇಳಿಬಂತು. ಅದಕ್ಕೆ ಸರಿಯಾಗಿ, ಅವರು ‘ರೈಡರ್’ ಎಂಬ ಚಿತ್ರದಲ್ಲಿ ನಟಿಸಿದರು. ಆ ನಂತರ ‘ಯದುವೀರ’ ಎಂಬ ಚಿತ್ರವೂ ಶುರುವಾಯಿತು. ಮುಂದೆ ಇನ್ನಷ್ಟು ಚಿತ್ರಗಳಲ್ಲಿ ಅವರು ನಟಿಸಬಹುದು ಎಂಬ ನಂಬಿಕೆ ಸುಳ್ಳಾಗಿದೆ. ‘ಯದುವೀರ’ ಚಿತ್ರವು ಅರ್ಧಕ್ಕೇ ನಿಂತಿದೆ. ಅದನ್ನು ಹೊರತುಪಡಿಸಿದರೆ ನಿಖಿಲ್ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಕಳೆದ ವರ್ಷ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮೂರ್ನಾಲ್ಕು ಚಿತ್ರಗಳು ಘೋಷಣೆಯಾಗಿದ್ದವು. ಆದರೆ, ಯಾವ ಚಿತ್ರವೂ ಇನ್ನೂ ಶುರುವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಅವರು ಏನು ಮಾಡುತ್ತಾರೆ ಅಥವಾ ಮಾಡಬಹುದು ಎಂಬ ವಿಷಯವಾಗಿ ಯಾವುದೇ ಸ್ಪಷ್ಟತೆ ಇಲ್ಲ.
ಹೌದು, ನಿಖಿಲ್ ಸದ್ಯಕ್ಕೆ ಚಿತ್ರರಂಗದಲ್ಲೂ ಇಲ್ಲ. ಆ ಕಡೆ ರಾಜಕೀಯದಲ್ಲೂ ಇಲ್ಲ. ಮಗನನ್ನು ಆಟವಾಡಿಸಿಕೊಂಡು ಮನೆಯಲ್ಲಿ ಇದ್ದಾರೆ. ಅವರ ಮುಂದಿನ ನಡೆ ಏನು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ನಟನೆ ಬಿಟ್ಟು ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾರಾ? ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ತೊಡಗಸಿಕೊಳ್ಳುತ್ತಾರಾ? ಎಂಬ ಪ್ರಶ್ನೆಗಳಿವೆ. ಆದರೆ, ಸದ್ಯಕ್ಕೆ ಉತ್ತರ ಸಿಗುತ್ತಿಲ್ಲ ಅಷ್ಟೇ. ನಿಖಿಲ್ ಚುನಾವಣೆ ಸ್ಪರ್ಧಿಸಿದರೂ ಅಷ್ಟರಲ್ಲಿ ಒಂದಿಷ್ಟು ಚಿತ್ರಗಳನ್ನು ಮಾಡಬಹುದು. ಆದರೆ, ಅವರು ಅದನ್ನೂ ಮಾಡುತ್ತಿಲ್ಲ. ಹೋಗಲಿ ರಾಜಕೀಯದಲ್ಲಾದರೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರಾ ಎಂದರೆ ಅದೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರ ಇಲ್ಲ. ಆಗಾಗ ರಾಮನಗರದ ಯಾವುದಾದರೂ ಸಭೆ-ಸಮಾರಂಭದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ ಎನ್ನುವುದು ಬಿಟ್ಟರೆ, ಅವರ ಬಗ್ಗೆ ಹೆಚ್ಚು ಸುದ್ದಿ ಇಲ್ಲ. ಅದೇ ಕಾರಣಕ್ಕೆ, ಕನ್ನಡಿಗರು ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂದು ಕೇಳುತ್ತಿದ್ದಾರೆ.
ಆದರೆ, ನಿಖಿಲ್ ಎಲ್ಲಿ?
No Comment! Be the first one.