ಸಿನಿಮಾದಲ್ಲಿ ನಟಿಸಬೇಕು ಅನ್ನೋ ಬಯಕೆ ಹೊತ್ತು ಹತ್ತನ್ನೆರಡು ವರ್ಷಗಳ ಹಿಂದೆ ಬೆಂಗಳೂರು ಸೇರಿದ ಹುಡುಗ ದಿವಾಕರ್. ಎಷ್ಟೋ ಜನ ಅವಕಾಶ ಹುಡುಕೋ ನೆಪದಲ್ಲಿ ಬದುಕಿಗಾಗಿ ದುಡಿಮೆ ಮಾಡೋದನ್ನೇ ಮರೆತುಬಿಡುತ್ತಾರೆ. ಆದರೆ ದಿವಾಕರ್ ಹಾಗೆ ಮಾಡಲಿಲ್ಲ. ಅವಕಾಶದ ಹುಡುಕಾಟದ ಜೊತೆಜೊತೆಗೇ ಒಂದಷ್ಟು ಪ್ರಾಟಕ್ಟುಗಳ ಸೇಲ್ಸು, ಮಾರ್ಕೆಟಿಂಗಿನ ಜವಾಬ್ದಾರಿ ವಹಿಸಿಕೊಂಡು ಜೀವನ ಕಟ್ಟಿಕೊಂಡರು. ಮದುವೆಯಾಯ್ತು, ಮಗನೂ ಹುಟ್ಟಿದ. ಆ ನಂತರ ಬಿಗ್ ಬಾಸ್ ಮನೆಗೆ ಹೋಗುವ ಛಾನ್ಸೂ ಗಿಟ್ಟಿಸಿಕೊಂಡರು. ಕಾಮನ್ ಮ್ಯಾನ್ ಕೋಟಾದಲ್ಲಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟರು!
ಬಿಗ್ ಬಾಸ್ ಪ್ರೋಗ್ರಾಮಿಗೆ ಹೋಗಿಬಂದವರಲ್ಲಿ ಒಂದಷ್ಟು ಜನರ ತಲೆ ಕುತ್ತಿಗೆ ಮೇಲೆ ನಿಲ್ಲೋದೇ ಇಲ್ಲ. ಇಂದ್ರಲೋಕ-ಚಂದ್ರಲೋಕವನ್ನು ಸುತ್ತಿಬಂದವರಂತೆ ಪೋಸು ಕೊಡುತ್ತಾರೆ. ಈ ಹುಡುಗ ದಿವಾಕರ್ ಅಂಥಾ ಯಾವ ಭ್ರಮೆಗಳನ್ನೂ ನೆತ್ತಿಗೇರಿಸಿಕೊಳ್ಳಲಿಲ್ಲ. ಯಥಾ ಪ್ರಕಾರ ತಾನಾಯಿತು ತನ್ನ ಮಾರ್ಕೆಟಿಂಗ್ ಕೆಲಸವಾಯಿತು ಅಂತಾ ತೊಡಗಿಕೊಂಡರು. ಈ ನಡುವೆ ಒಂದಿಷ್ಟು ಸಿನಿಮಾ ಅವಕಾಶಗಳೂ ಬಂದವು. ಗೀತಸಾಹಿತಿ ಶಿವು ಜಮಖಂಡಿ ನಿರ್ದೇಶನದ ಗುಲಾಲ್ ಡಾಟ್ ಕಾಮ್ ಸಿನಿಮಾ ಈಗ ಪೂರ್ತಿಯಾಗಿದೆ. ಅದಾಗುತ್ತಿದ್ದಂತೇ ಮತ್ತೆರಡು ಸಿನಿಮಾಗಳೂ ಆರಂಭವಾಗಲಿವೆಯಂತೆ. ಸದ್ಯ ಲಾಕ್ ಡೌನ್ ಟೈಮಲ್ಲೂ ಸುಮ್ಮನೇ ಕೂರದೆ ಸೊಪ್ಪುಸದೆ, ಔಷಧ ಸಾಮಗ್ರಿಗಳು, ಮಾಸ್ಕು ಮತ್ತು ಸ್ಯಾನಿಟೈಸರುಗಳನ್ನೆಲ್ಲಾ ಮಾರುವ ಕಾಯಕ ಮಾಡುತ್ತಿದ್ದಾರೆ. ಸುಮ್ಮನೇ ಕೂರದೇ ಏನಾದರೊಂದು ಮಾಡುತ್ತಿರಬೇಕು ಎಂದು ಬಯಸುವ, ಸಿನಿಮಾರಂಗದಲ್ಲಿ ಸಾಧಿಸಬೇಕು ಅಂತಾ ಚಡಪಡಿಸುವ ದಿವಾಕರ್ ಬಾಳಲ್ಲಿ ದೊಡ್ಡ ಖುಷಿಯೊಂದು ಜೊತೆಯಾಗಿದೆ. ತಿಂಗಳ ಹಿಂದೆ ದಿವಾಕರ್ ಮನೆಗೆ ಮುದ್ದು ಮಗಳು ಬಂದಿದ್ದಾಳೆ.
ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದ ದಿವಾಕರ್ ರನರ್ ಅಪ್ ಅನ್ನಿಸಿಕೊಂಡಿದ್ದರು. ಗಾಯಕ ಚಂದನ್ ಶೆಟ್ಟಿ ವಿನ್ನರ್ ಆಗಿದ್ದರು. ಈ ಇಬ್ಬರ ನಡುವೆ ಆ ಮನೆಯೊಳಗೆ ಒಂದೊಳ್ಳೆ ಬಾಂಧವ್ಯ ಬೆಸೆದುಕೊಂಡಿತ್ತು. ಹೊರಬಂದಮೇಲೂ ಅದು ಹಾಗೇ ಮುಂದುವರೆದಿದೆ. ಮೊನ್ನೆ ದಿನ ದಿವಾಕರ್ ಮಗಳಿಗೆ ಹೆಸರಿಟ್ಟಿರೋದು ಕೂಡಾ ಚಂದನ್ ಶೆಟ್ಟಿಯೇ. ಮನೆಯಲ್ಲೇ ಸಿಂಪಲ್ಲಾಗಿ ನೆರವೇರಿದ ನಾಮಕರಣದಲ್ಲಿ ʻಹರ್ಮಿಳʼ ಎನ್ನುವ ಚೆಂದದ ಹೆಸರಿಡಲಾಗಿದೆ. ಹರ್ಮಿಳಾ ಆಗಮನದಿಂದ ದಿವಾಕರ್ ಪಾಲಿನ ಹಳೆಯ ಹರಕೆಗಳೆಲ್ಲಾ ಈಡೇರಲಿ. ವ್ಯಾಪಾರ, ವಹಿವಾಟಿನ ಜೊತೆಗೆ ಸಿನಿಮಾರಂಗ ಕೂಡಾ ಕೈ ಹಿಡಿಯಲಿ…