ರಾಮ್ಗೋಪಾಲ್ ವರ್ಮಾ ನಿರ್ಮಾಣ ಮಾಡಿರೋ ಭೈರವಗೀತಾ ಮುಂದಿನ ವಾರ ತೆರೆಕಾಣಲು ಮುಹೂರ್ತ ನಿಗಧಿಯಾಗಿದೆ. ರಕ್ತಸಿಕ್ತವಾದೊಂದು ರಗಡ್ ಕಥಾನಕ, ಅದರಲ್ಲಿಯೇ ಮಿಳಿತವಾಗಿರೋ ಪ್ರೇಮಕಾವ್ಯ ಹೊಂದಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ್ ನಟನೆ ಎಂಥಾದ್ದೆಂಬುದು ಟ್ರೈಲರ್ ಮೂಲಕವೇ ಜಾಹೀರಾಗಿದೆ. ಇದೇ ಹೊತ್ತಿನಲ್ಲಿ ಡಾಲಿ ತೆಲುಗು ಭಾಷೆಗೂ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಪಕ್ಕದ ತೆಲುಗು ಭಾಷೆಯಲ್ಲಿಯೂ ಈ ಚಿತ್ರದ ಟ್ರೈಲರ್ ಇದೀಗ ಟ್ರೆಂಡಿಂಗ್ನಲ್ಲಿದೆ.
ಸೂರಿ ನಿರ್ದೇಶನದ ಟಗರು ಚಿತ್ರದ ಡಾಲಿ ಪಾತ್ರ ಧನಂಜಯ್ಗೆ ಭಾರೀ ಹೆಸರು ತಂದು ಕೊಟ್ಟಿತ್ತಲ್ಲಾ? ಅದೇ ಖದರ್ ಹೊಂದಿರೋ ಪಾತ್ರ ಭೈರವಗೀತಾ ಚಿತ್ರದಲ್ಲಿಯೂ ಅನೂಜಚಾನವಾಗಿ ಮುಂದುವರೆದಿದೆ. ರಾಮ್ಗೋಪಾಲ್ ವರ್ಮಾ ಹೇಳಿಕೇಳಿ ರಿಯಲಿಸ್ಟಿಕ್ ಕಥಾನಕಗಳಿಗೇ ಸಿನಿಮಾ ಚೌಕಟ್ಟು ಹಾಕೋದರಲ್ಲಿ ಸಿದ್ಧಹಸ್ತರು. ಅಂಥಾ ವರ್ಮಾ ಈ ಚಿತ್ರದ ಒಟ್ಟಾರೆ ಕಥೆಯನ್ನು ಡಾಲಿ ಧನಂಜಯ್ ಅವರ ತಾಕತ್ತಿಗೆ ತಕ್ಕ ಹಾಗೆಯೇ ಆಯ್ಕೆ ಮಾಡಿದ್ದಾರೆ.
ಸಿದ್ಧಾರ್ಥ ತಟೋಲು ನಿರ್ದೇಶನದ ಈ ಚಿತ್ರ ಏಕಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ. ಟಗರು ಚಿತ್ರದ ನಂತರದಲ್ಲಿ ಕನ್ನಡದಲ್ಲಿಯಂತೂ ಧನಂಜಯ್ ಅವರ ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರರಾಗಿದ್ದಾರೆ. ಇಲ್ಲಿ ಈ ಚಿತ್ರ ಗೆಲ್ಲೋದರಲ್ಲಿ ಯಾವ ಸಂಶಯಗಳೂ ಉಳಿದಿಲ್ಲ. ಆದರೀಗ ಟ್ರೈಲರ್ ಮೂಲಕ ಭೈರವಬ ಗೀತಾ ತೆಲುಗು ಭಾಷೆಯಲ್ಲಿಯೂ ಭಾರೀ ಕ್ರೇಜ್ ಹುಟ್ಟು ಹಾಕಿದೆ. ಸಿನಿಮಾ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿರುವ ತೆಲುಗಿನಲ್ಲಿ ಭೈರವ ಡಾಲಿ ಮನೆ ಮಾತಾಗಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿದ್ದರೆ ಅಲ್ಲಿಯೂ ಭೈರವ ಗೀತಾ ಚಿತ್ರ ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸೋದು ಪಕ್ಕಾ!
ಡಾಲಿ ಪಾತ್ರದ ಪ್ರಭೆಯಲ್ಲಿಯೇ ಧನಂಜಯ್ ಅವರಿಗೆ ಕನ್ನಡದಲ್ಲಿ ದಂಡಿ ದಂಡಿ ಅವಕಾಶಗಳಿವೆ. ಇದೇ ಹೊತ್ತಿನಲ್ಲಿ ಅವರು ತೆಲುಗಿನಲ್ಲಿಯೂ ಭಾರೀ ಸದ್ದು ಮಾಡುತ್ತಿದ್ದಾರೆ. ಬಹುಶಃ ಭೈರವ ಗೀತಾ ತೆರೆ ಕಂಡ ನಂತರದಲ್ಲಿ ಅವರು ತೆಲುಗಿನಲ್ಲಿಯೂ ಬೇಡಿಕೆಯ ಹೀರೋ ಆಗಿ ಹೊರ ಹೊಮ್ಮಬಹುದೇನೋ…
#
No Comment! Be the first one.