ದೊರೈ – ಭಗವಾನ್, ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರಭಾವಿ ನಿರ್ದೇಶಕದ್ವಯರು. ಸದಭಿರುಚಿಯ ಮತ್ತು ಕಾದಂಬರಿ ಆಧರಿಸಿದ ಚಿತ್ರಗಳ ಟ್ರೆಂಡ್ ಗಟ್ಟಿಗೊಳಿಸಿದ ಖ್ಯಾತಿ ಇವರದು. ಮೂಲತಃ ಛಾಯಾಗ್ರಾಹಕರಾದ ದೊರೈ ಸಿನಿಮಾ ಜೀವನ ಶುರುವಾಗಿದ್ದು ’ಶಶಿಧರನ್’ ಮಲಯಾಳಂ ಚಿತ್ರದೊಂದಿಗೆ. ’ಸೋದರಿ’ ಚಿತ್ರದ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿದರು. ದೊರೈ-ಭಗವಾನ್ ಜೋಡಿ ಜತೆಯಾಗಿ ನಿರ್ದೇಶಿಸಿದ ಮೊದಲ ಸಿನಿಮಾ ’ಜೇಡರ ಬಲೆ’. ಇದು ಕನ್ನಡದ ಮೊದಲ ಬಾಂಡ್ ಸಿನಿಮಾ. ಮುಂದೆ ಇವರ ನಿರ್ದೆಶನದಡಿ ಸಾಲು, ಸಾಲು ಯಶಸ್ವೀ ಸಿನಿಮಾಗಳು ತಯಾರಾದವು. ದೊರೈ – ಭಗವಾನ್ ಚಿತ್ರಗಳೊಂದಿಗೆ ಹತ್ತಾರು ಪ್ರತಿಭಾವಂತ ನಟ, ನಟಿಯರು ಹಾಗೂ ತಂತ್ರಜ್ಞರು ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ನಿನ್ನೆ (೨೦) ದೊರೈ ಅಗಲಿದ ದಿನ. ನಿರ್ದೇಶಕ ಭಗವಾನ್ ಒಂದು ಅಪರೂಪದ ಪ್ರಸಂಗದ ಮೂಲಕ ತಮ್ಮ ಆತ್ಮೀಯ ಸ್ನೇಹಿತನನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.
—–
ಎಚ್.ಎಲ್.ಎನ್.ಸಿಂಹ ನಿರ್ದೇಶನದ ‘ಅಬ್ಬಾ ಆ ಹುಡುಗಿ’ (೧೯೫೯) ಸಿನಿಮಾ ತಯಾರಾಗುತ್ತಿದ್ದ ಸಂದರ್ಭ. ಮದ್ರಾಸ್‌ನ ವಾಹಿನಿ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಸಿಂಹ ಅವರಿಗೆ ನಾನು ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ದೊರೈರಾಜ್ ಚಿತ್ರದ ಕ್ಯಾಮರಾಮನ್. ಈ ಚಿತ್ರದೊಂದಿಗೆ ರಾಜಾಶಂಕರ್ ಮತ್ತು ಲೀಲಾಂಜಲಿ, ನಾಯಕ – ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆಗಿನ್ನೂ ಛಾಯಾಗ್ರಾಹಣ ಮಾಡುತ್ತಿದ್ದ ದೊರೈ ತಮ್ಮದೇ ಆದ ವಿಶಿಷ್ಟ ಕ್ಯಾಮರಾ ತಂತ್ರಗಳಿಗೆ ಹೆಸರಾಗಿದ್ದರು. ಸ್ಪೆಷಲ್ ಲೈಟಿಂಗ್‌ನಲ್ಲಿ ಅವರು ಸೆರೆಹಿಡಿಯುತ್ತಿದ್ದ ಕ್ಲೋಸ್‌ಅಪ್ ಶಾಟ್‌ಗಳು ಗಮನ ಸೆಳೆಯುತ್ತಿದ್ದವು.

ಚಿತ್ರೀಕರಣ ಆರಂಭವಾಗಿ ಕೆಲವು ದಿನಗಳಾತ್ತಷ್ಟೆ. ಛಾಯಾಗ್ರಾಹಕ ದೊರೈ, ನೂತನ ನಟಿ ಲೀಲಾಂಜಲಿ ಅವರಲ್ಲಿ ಅನುರಕ್ತರಾಗಿದ್ದರು! ಆಗ ಅವರು ನಟಿಯ ಕ್ಲೋಸ್‌ಅಪ್ ಶಾಟ್‌ಗಳನ್ನು ತೆಗೆದz ತೆಗೆದದ್ದು! ನಟಿ ಲೀಲಾಂಜಲಿ ಅವರ ಮನೆ ಮದರಾಸಿನ ಪಟೇಲ್ ಸ್ಟ್ರೀಟ್‌ನಲ್ಲಿತ್ತು. ಸಂಜೆ ಶೂಟಿಂಗ್ ಮುಗಿಯುತ್ತಲೇ ದೊರೈ, ಪಟೇಲ್ ಸ್ಟ್ರೀಟ್‌ನತ್ತ ಹೆಜ್ಜೆ ಹಾಕುತ್ತಿದ್ದರು! ಒಂದಷ್ಟು ದಿನ ಈ ಒನ್‌ವೇ ಪ್ರೀತಿ ಹೀಗೇ ಮುಂದುವರೆಯಿತು. ಅದೊಂದು ದಿನ ದೊರೈ ಧೈರ್ಯ ಮಾಡಿ ಲೀಲಾಂಜಲಿ ಅವರಿಗೆ ತಮ್ಮ ಪ್ರೀತಿ ನಿವೇದಿಸಿಕೊಂಡರು. ಮೈಸೂರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವರು ಲೀಲಾಂಜಲಿ. ಅವರಿಗೆ ಕೂಡ ಸಿನಿಮಾದಲ್ಲಿ ಮುಂದುವರೆಯುವುದು ಇಷ್ಟವಿರಲಿಲ್ಲ. ಅಲ್ಲದೆ ದೊರೈಗೆ ಆಗ ಒಳ್ಳೆಯ ಹೆಸರಿತ್ತು. ಒಳ್ಳೆಯ ಘಳಿಗೆಯೊಂದರಲ್ಲಿ ದೊರೈ ಪ್ರೀತಿಯನ್ನು ಲೀಲಾಂಜಲಿ ಒಪ್ಪಿಕೊಂಡರು. ಹಾಗೆ, ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ದೊರೈ ಲವ್‌ಸ್ಟೋರಿಯೂ ಸುಖಾಂತ್ಯಗೊಂಡಿತು.

ಮುಂದೆ ಇವರಿಬ್ಬರಿಗೂ ಮದುವೆ ಮಾಡಿಸಬೇಕಾದ ಜವಾಬ್ದಾರಿ ನಮ್ಮ ಹೆಗಲೇರಿತು. ದೊರೈಗೆ ಮದುವೆ ಮಾಡಿಕೊಳ್ಳುವ ಧೈರ್ಯವೇನೋ ಇತ್ತು. ಆದರೆ ಹಣಕಾಸಿನ ಅನುಕೂಲತೆ ಇರಲಿಲ್ಲ. ಆಗ ನಮಗೆಲ್ಲಾ ಮಾರ್ಗದರ್ಶಕರಾಗಿದ್ದ ನಿರ್ದೇಶಕ ಜಿ.ವಿ.ಅಯ್ಯರ್ ನೆರವಿಗೆ ಧಾವಿಸಿದರು. ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿಸುವುದೆಂದು ತೀರ್ಮಾನವಾಯ್ತು. ತಿರುಪತಿಯ ಛತ್ರದಲ್ಲಿ ಪುರೋಹಿತರ ಸಮPಮದೊಂದಿಗೆ ದೊರೈ – ಲೀಲಾಂಜಲಿ ವಿವಾಹ ನೆರವೇರಿತು. ‘ಅಬ್ಬಾ ಆ ಹುಡುಗಿ’, ನಟಿ ಲೀಲಾಂಜಲಿ ಅವರ ಮೊದಲ ಮತ್ತು ಕಡೆಯ ಚಿತ್ರವಾಯ್ತು. ಮುಂದೆ ದೊರೈ – ಲೀಲಾಂಜಲಿ ಆದರ್ಶ ದಂಪತಿಯಾಗಿ ಬಾಳ್ವೆ ನಡೆಸಿದರು.

ದೊರೈರಾಜ್: ದೊರೈ ಮೂಲತಃ ಸಿನಿಮಾ ಛಾಯಾಗ್ರಾಹಕರು. ’ಶಶಿಧರನ್’ ಮಲಯಾಳಂ ಚಿತ್ರದೊಂದಿಗೆ ದೊರೈ ಸ್ವತಂತ್ರ್ಯ ಛಾಯಾಗ್ರಾಹಕರಾದರು. ’ಸೋದರಿ’ ಚಿತ್ರದೊಂದಿಗೆ ಕನ್ನಡಕ್ಕೆ ಪ್ರವೇಶವಾಯ್ತು. ಮುಂದೆ ರಾಯರಮಗಳು, ಜಗಜ್ಯೋತಿ ಬಸವೇಶ್ವರ, ಬಂಗಾರಿ, ತಾಯಿಕರುಳು, ಕವಲೆರಡು ಕುಲವೊಂದು, ಅಬ್ಬಾ ಆ ಹುಡುಗಿ ಮತ್ತಿತರೆ ಚಿತ್ರಗಳಿಗೆ ದೊರೈರಾಜ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರು. ಕನ್ನಡದ ಪ್ರಥಮ ಬಾಂಡ್ ಸಿನಿಮಾ ’ಜೇಡರ ಬಲೆ’ (೧೯೬೮) ದೊರೆ-ಭಗವಾನ್ ಜೋಡಿ ನಿರ್ದೇಶನದ ಮೊದಲ ಸಿನಿಮಾ. ಮುಂದೆ ಗೋವಾದಲ್ಲಿ ಸಿಐಡಿ ೯೯೯, ಆಪರೇಷನ್ ಜಾಕ್‌ಪಾಟ್, ಕಸ್ತೂರಿ ನಿವಾಸ, ಪ್ರತಿಧ್ವನಿ, ಎರಡು ಕನಸು, ಗಿರಿಕನ್ಯೆ, ಆಪರೇಷನ್ ಡೈಮಂಡ್ ರಾಕೆಟ್, ಚಂದನದ ಗೊಂಬೆ, ನಾನೊಬ್ಬ ಕಳ್ಳ, ವಸಂತ ಗೀತಾ, ಗಾಳಿಮಾತು, ಹೊಸಬೆಳಕು, ಬೆಂಕಿಯ ಬಲೆ, ಸಮಯದ ಗೊಂಬೆ, ಯಾರಿವನು, ಗಗನ, ನೀರನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ ಮುಂತಾದ ಚಿತ್ರಗಳು ಈ ಜೋಡಿಯಿಂದ ತಯಾರಾದವು. ದೊರೈ-ಭಗವಾನ್ ನಿರ್ದೇಶನದ ಚಂದನದ ಗೊಂಬೆ, ಮುನಿಯನ ಮಾದರಿ, ಜೀವನ ಚೈತ್ರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ದೊರೈ ೨೦೦೦, ಫೆಬ್ರವರಿ ೨೦ರಂದು ಅಗಲಿದರು.

ನಿರೂಪಣೆ: ಶಶಿಧರ ಚಿತ್ರದುರ್ಗ

CG ARUN

ಮಿಸ್ಟರ್ ಲೋಕನ್ ಟೀಸರ್ ಔಟ್; ಶಿವಕಾರ್ತಿಕೇಯನ್, ನಯನತಾರಾ ಕೋಳಿಜಗಳ!

Previous article

ಶ್ರೀಮಂತ ಯುವತಿ, ಬಡ ಯುವಕ, ನಂಬಲರ್ಹ ಪ್ರೇಮಕತೆ ’ಫೋಟೋಗ್ರಾಫರ್’

Next article

You may also like

Comments

Leave a reply

Your email address will not be published. Required fields are marked *