ಆರು ವರ್ಷಗಳ ಹಿಂದೆ ತೆರೆಕಂಡ ರಿತೇಶ್ ಬಾತ್ರಾ ನಿರ್ದೇಶನದ ’ಲಂಚ್ಬಾಕ್ಸ್’ ಹಿಂದಿ ಸಿನಿಮಾ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರೀಗ ’ಫೋಟೋಗ್ರಾಫರ್’ ಚಿತ್ರದೊಂದಿಗೆ ತೆರೆಗೆ ಮರಳಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಸಾನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ವಿಶಿಷ್ಟ ಕಥಾವಸ್ತುವಿನಿಂದಾಗಿ ಗಮನಸೆಳೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.
ಮುಂಬಯಿ ಫೋಟೊಗ್ರಾಫರ್ ರಫಿ ಮತ್ತು ವಿದ್ಯಾರ್ಥಿನಿ ಮಿಲೋನಿ ಮಧ್ಯೆಯ ಸ್ನೇಹ, ಪ್ರೀತಿ ಚಿತ್ರದ ಕಥಾವಸ್ತು. ಶೀಘ್ರ ಮದುವೆಯಾಗುವಂತೆ ರಫಿಯನ್ನು ಅವನ ಅಜ್ಜಿ ಸದಾ ಒತ್ತಾಯಿಸುತ್ತಿರುತ್ತಾಳೆ. ಈ ಬೇಡಿಕೆ ಒಡ್ಡಿ ಅದೊಮ್ಮೆ ಔಷಧಿ ಬಿಟ್ಟು ಧರಣಿ ಕೂರುತ್ತಾಳೆ. ಇದರಿಂದ ಪಾರಾಗಲು ರಫಿ ತನಗೆ ಪರಿಚಯವಾದ ವಿದ್ಯಾರ್ಥಿನಿ ಮಿಲೋನಿ ಮೊರೆ ಹೋಗುತ್ತಾನೆ. ಅಜ್ಜಿ ಎದುರು ತಾನು ಮದುವೆಯಾಗುವ ಹುಡುಗಿಯಾಗಿ ನಟಿಸುವಂತೆ ಕೋರುತ್ತಾನೆ. ರಫಿ ಬೇಡಿಕೆಗೆ ಮಣಿಯುವ ಮಿಲೋನಿ, ಆನಂತರ ಇಬ್ಬರ ಬದುಕಿನಲ್ಲಾಗುವ ಬೆಳವಣಿಗೆಗಳು ಚಿತ್ರದ ಕಥಾವಸ್ತು.
“ಇದು ಶ್ರೀಮಂತ ಯುವತಿ, ಬಡ ಯುವಕನ ಕತೆ. ಎಲ್ಲರೂ ನಂಬಬಹುದಾದ, ಪ್ರೇಕ್ಷಕರು ಕನ್ವಿನ್ಸ್ ಆಗುವಂತಹ ಕತೆ ಆಗಿರಲಿದೆ” ಎನ್ನುತ್ತಾರೆ ನಿರ್ದೇಶಕ ರಿತೇಶ್ ಬಾತ್ರಾ. ರಫಿ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರೇ ಇರಬೇಕು ಎಂದು ಪಾತ್ರ ಸೃಷ್ಟಿಸುವಾಗಲೇ ಅವರು ಅಂದುಕೊಂಡಿದ್ದರಂತೆ. ’ದಂಗಲ್’ ಚಿತ್ರದಲ್ಲಿ ನಟಿಸಿದ್ದ ಸಾನ್ಯಾ ಮಲ್ಹೋತ್ರಾ ಇಲ್ಲಿ ಸಿದ್ದಿಕಿಗೆ ಗೆಳತಿಯಾಗಿ ನಟಿಸಿದ್ದಾರೆ. ಅಜ್ಜಿಯಾಗಿ ಫರೂಕ್ ಜಾಫರ್ ಅಭಿನಯಿಸಿದ್ದು, ಸಚಿನ್ ಖೇಡೇಕರ್, ಗೀತಾಂಜಲಿ ಕುಲಕರ್ಣಿ, ಜಿಮ್ ಸರ್ಬ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್ ೧೫ರಂದು ಸಿನಿಮಾ ತೆರೆಕಾಣಲಿದೆ.
No Comment! Be the first one.