ಕದಿಯೋದಾದ್ರೆ ವಿದ್ಯೆ ಕದಿ ಅನ್ನೋ ಗಾದೆಯನ್ನು ನಮ್ಮ ಸಿನಿಮಾ ಮಂದಿ ಕದಿಯೋದಾದ್ರೆ ವಿದ್ಯೆಗೆ ಸಂಬಂಧಿಸಿದ ಸಿನಿಮಾವನ್ನು ಕದಿಯಬೇಕು ಅಂತಾ ಅರ್ಥೈಸಿಕೊಂಡಂತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಪರಭಾಷೆಯ ಸಿನಿಮಾಗಳನ್ನು ಒಬ್ಬರಾದ ಮೇಲೊಬ್ಬರು ಎತ್ತುವಳಿ ಮಾಡಿ ಸಿಕ್ಕಿಬೀಳುತ್ತಿದ್ದಾರೆ!
ದ್ರೋಣ ಅನ್ನೋ ಸಿನಿಮಾ ಶುರುವಾದಾಗಿನಿಂದ ಹಿಡಿದು ಮೊನ್ನೆ ರಿಲೀಸಾಗೋತನಕ ಇದು ತಮಿಳಿನ ರಿಮೇಕ್ ಸಿನಿಮಾ ಅಂತಾ ಸಿನಿಬಜ಼್ ಅನುಮಾನವ್ಯಕ್ತಪಡಿಸುತ್ತಲೇ ಬಂದಿತ್ತು. ಅದೀಗ ಅಕ್ಷರಶಃ ನಿಜವಾಗಿದೆ. ತಮಿಳಿನ ಸಾಟ್ಟೈ ಚಿತ್ರವನ್ನು ಯಥಾವತ್ತು ಭಟ್ಟಿ ಇಳಿಸಿ ತಮ್ಮದೇ ಕತೆ, ಚಿತ್ರಕತೆ, ಸಂಭಾಷಣೆ ಇತ್ಯಾದಿಯಾಗಿ ಬರೆದುಕೊಂಡಿರುವ ಪರಮೋದ್ ಚಕ್ರವರ್ತಿ ಅವರ ಧೈರ್ಯ ದೊಡ್ಡದು!
ಸಮುದ್ರಖನಿ ನಟನೆಯಲ್ಲಿ ಬಂದಿದ್ದ ಸಾಟ್ಟೈ ಶಿಕ್ಷಣ ವ್ಯವಸ್ಥೆಯನ್ನು ತಿವಿದಿತ್ತು. ಆ ಚಿತ್ರದಲ್ಲಿ ಎತ್ತಲಾಗಿದ್ದ ಒಂದೊಂದು ಪ್ರಶ್ನೆ ಕೂಡಾ ಸರ್ಕಾರಿ ಶಾಲೆಯ ಇವತ್ತಿನ ಸ್ಥಿತಿಯ ಉತ್ತರದಂತಿತ್ತು. ಅದೇ ಚಿತ್ರವನ್ನೇ ಈಗ ದ್ರೋಣ ಹೆಸರಿನಲ್ಲಿ ಕನ್ನಡಕ್ಕೆ ತಂದಿರುವುದು.
ಒಬ್ಬ ಆದರ್ಶ ಶಿಕ್ಷಕ. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಂಡು, ಅವರನ್ನು ಎಲ್ಲ ಬಗೆಯಲ್ಲೂ ಸಾಧನೆಯತ್ತ ಕರೆದೊಯ್ಯುವ ಗುರು. ಇಂಥಾ ಗುರುವಿಗೆ ತನ್ನದೇ ಶಾಲೆಯಲ್ಲಿ ಎದುರಾಗುವ ದರಷ್ಟರ ಕೂಟ. ಈತನ ವಿರುದ್ಧ ಎದುರಾಗುವ ಆರೋಪ. ಅದೆಲ್ಲದರಿಂದ ಮೇಷ್ಟ್ರು ಹೇಗೆ ಹೊರಬರುತ್ತಾರೆ? ಶಾಲೆ ಮತ್ತು ಅಲ್ಲಿನ ಮಕ್ಕಳು ಗುರುಗೆ ಹೇಗೆ ಸ್ಪಂದಿಸುತ್ತಾರೆ ಅನ್ನೋದು ಚಿತ್ರದ ಕಥಾವಸ್ತು.
ತಮಿಳಿನ ಸಾಟ್ಟೈ ಭಾವತೀವ್ರತೆಯಿಂದ ಕೂಡಿತ್ತು. ಆದರೆ ಕನ್ನಡದಲ್ಲಿ ನಿರ್ದೇಶನವೇ ಜಾಳು ಜಾಳಾಗಿರುವುದರಿಂದ ಜನಕ್ಕೆ ಹತ್ತಿರವಾಗಬೇಕಾದ ದೃಶ್ಯಗಳೇ ಮಂಕಾಗಿವೆ. ಶಿವರಾಜ್ ಕುಮಾರ್ ಒಬ್ಬರ ನಟನೆ ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತದೆ. ರಂಗಾಯಣ ರಘು ಕೂಡಾ ತಮಿಳಿನಲ್ಲಿ ಇದೇ ಪಾತ್ರವನ್ನು ನಿರ್ವಹಿಸಿದ್ದ ತಂಬಿ ರಾಮಯ್ಯ ಅವರಂತೆಯೇ ಸ್ಕೋರು ಮಾಡುತ್ತಾರೆ. ಸ್ವಾತಿ, ಮೈಸೂರು ಸುಧಿ ಮುಂತಾದ ನಟರು ಕೂಡಾ ಚೆಂದಗೆ ನಟಿಸಿದ್ದಾರೆ. ದ್ರೋಣ ಚಿತ್ರದಲ್ಲಿ ಎಲ್ಲವೂ ಇದ್ದು ಏನೋ ಇಲ್ಲದಂತೆ ಭಾವ ಕಾಡುತ್ತದೆ. ತಮಿಳು ಸಿನಿಮಾವನ್ನು ಕನ್ನಡೀಕರಿಸುವಲ್ಲಿ ಆಗಿರುವ ಯಡವಟ್ಟುಗಳೇ ಇದಕ್ಕೆ ಕಾರಣವಿರಬಹುದು. ಆದರೂ ಶಿವಣ್ಣನ ಅಭಿಮಾನಕ್ಕಾದರೂ ಒಮ್ಮೆ ನೋಡಬಹುದಾದ ಸಿನಿಮಾ ದ್ರೋಣ!