ಒಂದೇನಾದರೂ ಇಶ್ಯೂ ಸಿಕ್ಕರೆ ಅದನ್ನೇ ಕೆದಕಿ ಬೆದಕೋದು ಕೆಲ ಮಾಧ್ಯಮ ಮಂದಿಗೆ ಚಟವಾಗಿ ಬಿಟ್ಟಿದೆ. ಹೀಗೆ ಮಾಡುತ್ತಾ ಹೋದಾಗೆಲ್ಲ ಯಾರದ್ದೋ ಬದುಕಿಗೆ ಸಮಸ್ಯೆಯಾಗುತ್ತದೆ ಎನ್ನುವ ಕನಿಷ್ಠ ಖಬರೂ ಇಲ್ಲದ ಇಂಥವರ ದೃಷ್ಟಿ ದುನಿಯಾ ವಿಯ್ ಅವರತ್ತ ಹೊರಳಿಕೊಂಡು ಅದೆಷ್ಟೋ ದಿನಗಳಾಗಿವೆ. ಆದರೆ ವಿಜಯ್ ಅವರ ಮೇಲಿರೋ ಈ ಮಾಧ್ಯಮಗಳ ರಣ ಕುತೂಹಲ ಮಾತ್ರ ಒಂದಿನಿತೂ ಕಡಿಮೆಯಾದಂತಿಲ್ಲ!
ದುನಿಯಾ ವಿಜಯ್ ಅರೆಸ್ಟ್ ವಾರೆಂಟ್, ವಿಜಿಗೆ ವರ್ಷಗಟ್ಟಲೆ ಜೈಲು ಗ್ಯಾರೆಂಟಿ ಅಂತೆಲ್ಲ ಪುಂಖಾನುಪುಂಖವಾಗಿ ಸುದ್ದಿಗಳು ಬರುತ್ತಲೇ ಇವೆಯಲ್ಲ? ಅದೆಲ್ಲವೂ ಕಪೋಲ ಕಲ್ಪಿತ ಸುಳ್ಳಿನ ಸರಮಾಲೆಗಳೇ. ಅದ್ಯಾಕೋ ವಿಜಿ ಸುತ್ತಮುತ್ತ ಇರೋ ದುಷ್ಟ ಶಕ್ತಿಗಳಿಗೆ ಮತ್ತು ಕೆಲ ಮಾಧ್ಯಮ ಮಂದಿಗೆ ಇಂಥಾ ಸುಳ್ಳುಗಳನ್ನು ಸಾರದಿದ್ದರೆ ಉಂಡ ಅನ್ನ ಅರಗೋದಿಲ್ಲವೇನೋ…
ಅಷ್ಟಕ್ಕೂ ದುನಿಯಾ ವಿಜಯ್ ಮೇಲೆ ಅರೆಸ್ಟ್ ವಾರೆಂಟ್ ಆಗಿದ್ದರೆ ಅದದ ಬಗ್ಗೆ ಈ ಜನ ಹೇಗೆ ಊರಿಗಿಂತ ಮೊದಲೇ ಬಾಯಿ ಬಡಿದುಕೊಳ್ಳಲು ಸಾಧ್ಯ. ಪೊಲೀಸರೇನಾದರೂ ವಿಜಯ್ಗೆ ಅರೆಸ್ಟ್ ವಾರೆಂಟ್ ಬಂದಿದೆ ಅಂತ ಮಾಧ್ಯಮಗಳಿಗೆ ಮೊದಲೇ ವರದಿ ಒಪ್ಪಿಸಲು ಸಾಧ್ಯವಾ? ಇದನ್ನು ಅರ್ಥ ಮಾಡಿಕೊಳ್ಳದಷ್ಟು ಜನ ದಡ್ಡರೆಂದುಕೊಂಡಿದ್ದಾರಾ ಕೆಲ ಮಂದಿ? ಅಂತೂ ಈಗ ಹೇಗಾಗಿದೆಯೆಂದರೆ, ವಿಜಿ ಅವರ ವಿರುದ್ಧ ಸಂಚು ಹೂಡಲೇಬೇಕೆಂದು ದುಷ್ಟ ಶಕ್ತಿಗಳು ಶಪಥ ಮಾಡಿದಂತಿದೆ. ದುರಂತವೆಂದರೆ, ಈ ಬಗ್ಗೆ ಸತ್ಯ ಹೇಳ ಬೇಕಾದ ಮಾಧ್ಯಮಗಳೇ ಸುಳ್ಳು ಒದರುತ್ತಿವೆ!
ಅಷ್ಟ ದಿಕ್ಕುಗಳಿಂದಲೂ ಇಂಥಾ ನೆಗೆಟೀವ್ ಹುನ್ನಾರಗಳೇ ರಾಚುತ್ತಿರೋವಾಗ ನಿಜಕ್ಕೂ ದುನಿಯಾ ವಿಜಯ್ ಈಗೇನು ಮಾಡುತ್ತಿದ್ದಾರೆಂದು ನೋಡ ಹೋದರೆ ಬೇರೆಯದ್ದೇ ಲೋಕವೊಂದು ಅನಾರವಣಗೊಳ್ಳುತ್ತೆ. ಆ ಜಗತ್ತಿನಲ್ಲಿ ವಿಜಯ್ ಸಿನಿಮಾ ಧ್ಯಾನದಲ್ಲಿಯೇ ಕಳೆದು ಹೋಗಿದ್ದಾರೆ. ಅವರೀಗ ಒಂದು ಸಮರ್ಥವಾದ ಟೀಮು ಕಟ್ಟಿಕೊಂಡು ಮತ್ತೆ ಸೌಂಡು ಮಾಡುವಂಥಾ ಸಿನಿಮಾಗಾಗಿ ಅಣಿಗೊಳ್ಳುತ್ತಿದ್ದಾರೆ.
ಇತ್ತ ವಿಜಯ್ ಹೀಗೆ ದಿನ ಕಳೆಯುತ್ತಿದ್ದರೆ ಅತ್ತ ಅವರ ಬಗ್ಗೆ ಸುಳ್ಳು ಸುದ್ದಿ ಹರಡಿಸೋ ದುಷ್ಟತನವೂ ವ್ಯಾಪಕವಾಗಿಯೇ ನಡೆಯುತ್ತಿದೆ. ತಪ್ಪು-ಸರಿಗಳೇನೇ ಇದ್ದರೂ, ಓರ್ವ ವ್ಯಕ್ತಿಯನ್ನು ವರ್ಷಗಟ್ಟಲೆ ಅದಕ್ಕೇ ಕಟ್ಟಿ ಹಾಕಿ ಕೊಳೆಯುವಂತೆ ಮಾಡೋದು ಎಷ್ಟು ಸರಿ? ಎಲ್ಲದರಿಂದ ಹೊರ ಬಂದು ಹೊಸಾ ಬದುಕು ಕಟ್ಟಿಕೊಳ್ಳಲು ಹೆಣಗುವ ವ್ಯಕ್ತಿಯೊಬ್ಬರನ್ನು ವಿನಾ ಕಾರಣ ಯಾವ್ಯಾವುದೋ ಆರೋಪಗಳಿಗೆ ಗೋಣು ಕೊಡುವಂತೆ ಮಾಡೋದು ರಾಕ್ಷಸತ್ವವಲ್ಲದೇ ಮತ್ತಿನ್ನೇನು?
ಈಗ ವಿಜಯ್ ಬಗ್ಗೆ ಹರಿದಾಡುತ್ತಿರೋ ಸುದ್ದಿಗಳ ಅಸಲೀಯತ್ತು ಜನಸಾಮಾನ್ಯರಿಗೂ ಅರ್ಥವಾಗಿದೆ. ಸದ್ಯ ವಿಜಿ ಮತ್ತೆ ಮೈಕೊಡವಿಕೊಂಡು, ಎಲ್ಲ ಕಿಸುರಿಂದಲೂ ಕಳಚಿಕೊಂಡು ಮೇಲೇಳೋ ಛಲದೊಂದಿಗೆ ತಯಾರಾಗುತ್ತಿದ್ದಾರೆ. ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುವವರು ವಿಜಯ್ ಅವರ ಶ್ರಮ, ಶ್ರದ್ಧೆ ಮತ್ತು ಪ್ರಾಮಾಣಿಕವಾದ ಕನಸುಗಳಿಗಾದರೂ ಬೆಲೆ ಕೊಡಬೇಕಿದೆ.
#