ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್… ಇನ್ನು ಒಂದು ವರ್ಷ ಕಳೆದರೆ ಇವರಿಗೆ ವಯಸ್ಸು ಎಂಭತ್ತಾಗುತ್ತದೆ. ಸಿನಿಮಾವನ್ನೇ ಉಸಿರಾಗಿಸಿಕೊಂಡು, ದುಡಿಮೆಯಿಂದ ಬಂದದ್ದನ್ನೆಲ್ಲಾ ಚಿತ್ರನಿರ್ಮಾಣಕ್ಕೆ ವ್ಯಯಿಸಿದವರು ದ್ವಾರ್ಕಿ. ಸಿನಿಮಾಗಳಿಂದ ಅಪಾರವಾಗಿ ಗಳಿಸಿದ ಮತ್ತು ಎಲ್ಲವನ್ನೂ ಕಳೆದುಕೊಂಡು ಬರಿದಾಗಿ, ಪಡಬಾರದ ಪಾಡು ಪಡುತ್ತಾ ಬಂದವರು ದ್ವಾರಕೀಶ್. ಕಳೆದುಕೊಂಡ ಜಾಗದಲ್ಲೇ ಪಡೆದುಕೊಂಡ ಅಪರೂಪದ ವ್ಯಕ್ತಿ ಕೂಡಾ. ಇನ್ನು ದ್ವಾರಕೀಶ್ ಕತೆ ಮುಗೀತು ಅಂತಾ ಜನ ಅಂದುಕೊಳ್ಳುತ್ತಿದ್ದಂತೇ ಮತ್ತೆ ಮತ್ತೆ ಎದ್ದು ನಿಂತ ಅಸಾಧ್ಯ ಕುಳ್ಳ ಈತ.
ದ್ವಾರಕೀಶ್ ಚಿತ್ರ ಸಂಸ್ಥೆ ಆರಂಭಿಸಿ ಕಳೆದ ಐವತ್ತೆರಡು ವರ್ಷಗಳಲ್ಲಿ ಐವತ್ತೆರಡು ಸಿನಿಮಾಗಳನ್ನು ನಿರ್ಮಿಸಿದ ಹಿರಿಮೆ ಕೂಡಾ ಇವರದ್ದು. ಇಷ್ಟು ಸುದೀರ್ಘ ವರ್ಷಗಳಲ್ಲಿ, ಇಷ್ಟೊಂದು ಸಿನಿಮಾ ನಿರ್ಮಿಸಿದ ಕನ್ನಡದ ಮತ್ತೊಬ್ಬ ನಿರ್ಮಾಪಕ ಇನ್ನೂ ಹುಟ್ಟಿಕೊಂಡಿಲ್ಲ. ಇಷ್ಟೆಲ್ಲಾ ಸಾಧನೆ ಮಾಡಿರುವ, ಎಂಭತ್ತರ ಆಸುಪಾಸಿನಲ್ಲಿದ್ದು, ಬದುಕಿನ ಸಂಧ್ಯಾಕಾಲವನ್ನು ಸುಖವಾಗಿ ಕಳೆಯಬೇಕಿದ್ದ ದ್ವಾರಕೀಶ್ ಈಗ ತಾವು ಸಂಪಾದಿಸಿದ ಹದಿಮೂರನೇ ಮನೆಯನ್ನೂ ಮಾರಿ ಹೊರಬಂದಿದ್ದಾರೆ!
ಐವತ್ತೂ ಚಿಲ್ಲರೆ ಸಿನಿಮಾಗಳನ್ನು ನಿರ್ಮಿಸಿದ ದ್ವಾರಕೀಶ್ ತಮ್ಮದೇ ಸ್ವಯಂಕೃತ ಅಪರಾಧಗಳಿಂದ ಆಗಾಗ ನಷ್ಟ ಅನುಭವಿಸುತ್ತಿದ್ದರು. ದ್ವಾರಕೀಶ್ ಪ್ರತಿ ಬಾರಿ ಆರ್ಥಿಕವಾಗಿ ಏಟು ತಿಂದು, ಸಪ್ಪಗೆ ಕೂತಾಗ ಪದೇ ಪದೆ ಬಂದು ಕೈ ಹಿಡಿಯುತ್ತಿದ್ದವರು ಸಾಹಸಸಿಂಹ ವಿಷ್ಣುವರ್ಧನ್. ದ್ವಾರ್ಕಿ ಯಾವಾಗೆಲ್ಲಾ ಇದ್ದದ್ದನ್ನು ಮಾರಿ ನಡುರಸ್ತೆಗೆ ಬಂದರೋ ಆಗೆಲ್ಲಾ ವಿಷ್ಣು ದೇವರಂತೆ ಬಂದು ಸಹಕರಿಸುತ್ತಿದ್ದರು. ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು, ಆಪ್ತಮಿತ್ರ ಮುಂತಾದ ಸಿನಿಮಾಗಳೆಲ್ಲಾ ಇಂಥದ್ದೇ ಸಂದರ್ಭಗಳಲ್ಲಿ ಸೃಷ್ಟಿಯಾದವು.
ಕಂಗಾಲಾಗಿ ಕುಳಿತ ದ್ವಾರಕೀಶ್ ಕೈ ಹಿಡಿದ ವಿಷ್ಣುಗೆ ಪ್ರತೀ ಬಾರಿಯೂ ಕಾಡುತ್ತಿದ್ದುದು ಕುಳ್ಳನ ಕಿತಾಪತಿ ಬುದ್ದಿ. ಒಂದಷ್ಟು ದಿನದ ಮುನಿಸಿನ ನಂತರ ಮತ್ತೆ ಬಂದು ಹೆಗಲು ನೀಡುತ್ತಿದ್ದ ವಿಷ್ಣು ದ್ವಾರ್ಕಿಯನ್ನು ಜಗ್ಗಿನಕ್ಕಜಗ್ಗಿ ಅಂತಾ ಮೆರೆಸುತ್ತಿದ್ದರು. ದ್ವಾರಕೀಶ್ ಜೊತೆ ವಿಷ್ಣು ಮಾಡಿದ ಕೊನೆಯ ಸಿನಿಮಾ ಆಪ್ತಮಿತ್ರ ಒಂದು ಸಾಕಿತ್ತು. ಇನ್ನೂ ಎರಡು ಜನ್ಮಕ್ಕೆ ಈ ಕೌಬಾಯ್ ಕುಳ್ಳ ಕೂತು ತಿನ್ನಬಹುದಿತ್ತು. ಆ ಪಾಟಿ ಗಳಿಕೆಯಾಗಿತ್ತು. ಮತ್ತೆ ಇಬ್ಬರ ನಡುವೆ ಬ್ರೇಕಪ್ ಆಯಿತು. ಒಂದಾಗುತ್ತಾರೆ ಅನ್ನುವಷ್ಟರಲ್ಲಿ ಸಿಂಹ ಮರಳಿ ಬಾರದ ದಾರಿಯಲ್ಲಿ ಎದ್ದು ನಡೆಯಿತು.
ವಿಷ್ಣುವರ್ಧನ್ ಹೋದನಂತರ ದ್ವಾರಕೀಶ್ ಪಾಲಿಗೆ ನಿಜಕ್ಕೂ ಅವರ ಸ್ಥಾನವನ್ನು ತುಂಬಿದವರು ಕಿಚ್ಚ ಸುದೀಪ. ವಿಷ್ಣುವರ್ಧನ ಸಿನಿಮಾಗೆ ಕಾಲ್ ಶೀಟ್ ಕೊಟ್ಟರು. ದ್ವಾರಕೀಶ್ ಪುತ್ರ ಯೋಗಿಯನ್ನು ಒಡಹುಟ್ಟಿದ ಸಹೋದರನಂತೆ ಜೊತೆಗಿಟ್ಟುಕೊಂಡು ಪೊರೆದರು. ಆಗ ಕಷ್ಟದಲ್ಲಿದ್ದ ಜಾಕ್ ಮಂಜು ಮತ್ತು ಯೋಗಿ ಇಬ್ಬರನ್ನೂ ಸೇರಿಸಿ ʻಮೈಸೂರ್ ಟಾಕೀಸ್ʼಗೆ ಜೀವ ಕೊಟ್ಟರು. ಇತರೆ ಸಿನಿಮಾಗಳ ವಿತರಣೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಅವಕಾಶ ಅದಾಗಿತ್ತು. ಜಾಕ್ ಮಂಜು ಕಿಚ್ಚನ ಅಣತಿಯಂತೆ ಕೆಲಸ ಮಾಡಿಕೊಂಡು ಇವತ್ತಿಗೂ ಅವರ ಜೊತೆಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ಯೋಗಿ ಕಿಚ್ಚನ ವಿಶ್ವಾಸವನ್ನು ಉಳಿಸಿಕೊಂಡಂತೆ ಕಾಣಲಿಲ್ಲ.
ಬಹುಶಃ ಅಪ್ಪನ ಕೀಟಲೆ ಬುದ್ದಿ ಯೋಗಿಗೂ ಮೈಗೂಡಿರಬಹುದು. ದ್ವಾರಕೀಶ್ ಪುತ್ರ ಅಂತಾ ಯೋಗಿಗೆ ಸಹಕರಿಸಿದವರು ಒಬ್ಬಿಬ್ಬರಲ್ಲ. ʻಚೌಕʼ ಸಿನಿಮಾ ನಿರ್ಮಿಸಲು ಹೋಗಿ ವಿಪರೀತ ಸಾಲ ಮಾಡಿಕೊಂಡಿದ್ದರು ಯೋಗಿ. ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರಕ್ಕೆ ಕಾಲ್ ಶೀಟ್ ನೀಡಿದರು. ದರ್ಶನ್ ಒಬ್ಬರ ಕಾರಣಕ್ಕೇ ಚೌಕ ದೊಡ್ಡ ಮಟ್ಟದ ವ್ಯಾಪಾರ, ಗಳಿಕೆ ಎರಡನ್ನೂ ಕಂಡಿತು. ಆ ನಂತರ ಭಾರತದ ಬಹುದೊಡ್ಡ ನಿರ್ಮಾಣ ಸಂಸ್ಥೆ ಏರೋಸ್ ಇಂಟರ್ ನ್ಯಾಷನಲ್ ದುಡ್ಡಿನಲ್ಲೂ ಯೋಗಿ ಸಿನಿಮಾ ಮಾಡಿದರು. ನಿರ್ಮಿಸಿದ ಪ್ರತೀ ಚಿತ್ರಕ್ಕೂ ಇತರೆ ಪಾಲುದಾರರನ್ನು ಕರೆತಂದರು. ಇಷ್ಟೆಲ್ಲಾ ಆಗಿಯೂ ಅದೆಲ್ಲಿ ಹಣ ಕಳೆದುಕೊಂಡರೋ? ಹೇಗೆ ಲುಕ್ಸಾನಾಯಿತೋ ಗೊತ್ತಿಲ್ಲ. ಕೊಟ್ಟ ಚೆಕ್ಕುಗಳೆಲ್ಲಾ ಬೌನ್ಸಾದವು. ಇಂಡಸ್ಟ್ರಿಯಲ್ಲಿ ಯಾರೂ ನಂಬದ ರೇಂಜಿಗೆ ಯೋಗಿ ಹೆಸರು ಕೆಡಿಸಿಕೊಂಡುಬಿಟ್ಟರು.
ಸದ್ಯದ ಮಟ್ಟಿಗೆ ನಿರ್ಮಾಪಕ ಕಂ ವಿತರಕ ಜಯಣ್ಣರನ್ನು ಬಹುತೇಕರು ಲಕ್ಕಿ ಹ್ಯಾಂಡ್ ಅಂತಲೇ ನಂಬಿದ್ದಾರೆ. ಅದಕ್ಕೆ ತಕ್ಕಂತೆ ಅವರು ನಿರ್ಮಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ವಿತರಣೆಯಲ್ಲೂ ಜಯಣ್ಣ-ಭೋಗೇಂದ್ರ ಬಲು ಫೇಮಸ್ಸು!
ಇಂಥಾ ಜಯಣ್ಣನ ಮೇಲೆ ವರ್ಷಕ್ಕೆ ಮುಂಚೆ ದ್ವಾರಕೀಶ್ ಪೊಲೀಸ್ ಕಂಪ್ಲೇಂಟು ಕೊಟ್ಟು ಜೀವಬೆದರಿಕೆಯ ಕೇಸು ಹಾಕಿದ್ದರು. ಅದಕ್ಕೆ ಕಾರಣ ಆಯುಷ್ಮಾನ್ ಭವ. ದ್ವಾರಕೀಶ್ ಪೂರ್ತಿ ಪಾಪರ್ ಅನ್ನಿಸಿಕೊಂಡಿದ್ದ ಸಂದರ್ಭದಲ್ಲಿ ಮಲಯಾಳಂನ ಮಣಿಚಿತ್ತಿರತ್ತಾಳ್ ಸಿನಿಮಾವನ್ನು ಕನ್ನಡಕ್ಕೆ ತಂದು ಆಪ್ತಮಿತ್ರ ನಿರ್ದೇಶಿಸಿಕೊಟ್ಟವರು ಪಿ. ವಾಸು. ಅದೇ ಪಿ. ವಾಸು ನಿರ್ದೇಶಿಸಿದ ಆಯುಷ್ಮಾನ್ ಭವ ಚಿತ್ರಕ್ಕಾಗಿ ಜಯಣ್ಣ ಎಲ್ಲೆಲ್ಲಿಂದಲೋ ತಂದು ಆರು ಕೋಟಿಗೂ ಹೆಚ್ಚು ಫೈನಾನ್ಸ್ ಹೊಂದಿಸಿಕೊಟ್ಟಿದ್ದರು. ಸಿನಿಮಾ ರಿಲೀಸಾಗಿ ಎರಡನೇ ದಿನಕ್ಕೆ ಕಾಲೆತ್ತಿಕೊಂಡಿತು.
ಯೋಗಿ ಜಯಣ್ಣ ಕೊಟ್ಟ ಕಾಸನ್ನು ಕೊಡದೇ ಆಟಾಡಿಸಲು ಶುರು ಮಾಡಿದ್ದ. ನೋಡುವ ತನಕ ನೋಡಿದ ಜಯಣ್ಣ ತಮ್ಮ ಜೊತೆಗೆ ಕೆ.ಪಿ. ಶ್ರೀಕಾಂತ್, ನಾಗಿ ಮತ್ತು ಮಂಜುಳಾ ರಮೇಶ್ ತಂಡವನ್ನು ದ್ವಾರಕೀಶ್ ಮನೆಗೆ ಕರೆದುಕೊಂಡು ಹೋಗಿ, ಕುಳ್ಳಪ್ಪನಿಗೆ ಕೈಮುಗಿದು ಯೋಗಿಯಿಂದ ಬರಬೇಕಿರುವ ಬಾಬ್ತನ್ನು ಸಂದಾಯ ಮಾಡಿಸಿ ಎಂದು ವಿನಂತಿಸಿ ಬಂದಿದ್ದರು. ಆದರೆ ಆ ನಂತರ ನಡೆದ ದೃಶ್ಯವೇ ಬೇರೆಯಾಗಿತ್ತು. ʻಮನೆಗೆ ನುಗ್ಗಿ ಬೆದರಿಸಿದರುʼ ಅಂತಾ ದ್ವಾರಕೀಶ್ ಪೊಲೀಸರಿಗೆ ದೂರು ನೀಡಿಬಿಟ್ಟಿದ್ದರು. ಇದು ದೊಡ್ಡ ವಿವಾದವಾಗುವ ಮುನ್ನ ಖುದ್ದು ಜಯಣ್ಣ, ಕೆ.ಪಿ., ನಾಗಿ, ಎಲೆ ರಮೇಸಣ್ಣ ಪ್ರೆಸ್ ಮೀಟು ಕರೆದು ಹೀಗೀಗಾಯ್ತು ಅಂತಾ ಸತ್ಯಾಂಶವನ್ನು ತಿಳಿಸಿದ್ದರು. ನಂತರ ನಿರ್ಮಾಪಕ ಸೂರಪ್ಪ ಬಾಬು ಮುಂತಾದವರ ಮಧ್ಯಸ್ಥಿಕೆಯಲ್ಲಿ ರಾಜಿಯಾಗಿತ್ತು.
ಹೀಗೆ ಸಿನಿಮಾದ ಹೆಸರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೋಟಿ ರೂಪಾಯಿಗಳ ಸಾಲದ ಹೊರೆ ಹೊತ್ತಿದ್ದ ದ್ವಾರಕೀಶ್ ಮತ್ತು ಅವರ ಪುತ್ರ ಯೋಗಿ ತಾವು ಕಟ್ಟಕಡೆಯದಾಗಿ ಕಟ್ಟಿಸಿದ್ದ ಎಚ್.ಎಸ್.ಆರ್. ಲೇಔಟಿನ ಬಂಗಲೆಯನ್ನು ಬರೋಬ್ಬರಿ ಹತ್ತೂವರೆ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಕನ್ನಡದಲ್ಲಿ ಸದ್ಯ ಓಡುವ ಕುದುರೆ ಅನ್ನಿಸಿಕೊಂಡಿರುವ ಕುಂದಾಪುರದ ಹೀರೋ ರಿಷಬ್ ಶೆಟ್ಟಿ ಆ ಮನೆಯನ್ನು ಖರೀದಿಸಿದ್ದಾರೆ.
ಇತ್ತೀಚಿನ ಸಿನಿಮಾಕರ್ಮಿಗಳಲ್ಲಿ ಚುರುಕುತನ, ವ್ಯಾವಹಾರಿಕ ಚತುರತೆ ಹೊಂದಿರುವ ಪ್ರತಿಭೆ ರಿಷಬ್. ಕಸವನ್ನೂ ರಸ ಮಾಡಬಲ್ಲ ಇಂಟಲಿಜೆಂಟ್ ಫೆಲೋ. ಕಲಾತ್ಮಕ ಚೌಕಟ್ಟಿನ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ, ಆರೇಳು ಕಿರುಚಿತ್ರಗಳನ್ನು ಜೋಡಿಸಿಟ್ಟು ಕಥಾ ಸಂಗಮವಾಗಿಸಿ ವ್ಯಾಪಾರ ಕುದುರಿಸಿದ ಮತ್ತು ಈಗ ಲಾಕ್ ಡೌನ್ ಸಂದರ್ಭದಲ್ಲಿ ಇಪ್ಪತ್ನಾಲ್ಕು ಜನರನ್ನು ಒಂದು ಕಡೆ ಗುಡ್ಡೆ ಹಾಕಿಕೊಂಡು ʻಹೀರೋʼ ಸಿನಿಮಾ ಮಾಡಿ ಒಳ್ಳೇ ರೇಟಿಗೆ ಮಾರಿ, ಕಲೆಕ್ಷನ್ ಎಣಿಸಿಕೊಳ್ಳಲು ಕಾದಿರುವ ರಿಷಬ್ ನಿಜಕ್ಕೂ ಅಸಾಧಾರಣ ಬುದ್ಧಿಜೀವಿ. ಇಂಥಾ ರಿಷಬ್, ದ್ವಾರಕೀಶ್ ಕಳೆದುಕೊಂಡ ಬಂಗಲೆಯನ್ನು ಪಡೆದುಕೊಂಡಿದ್ದಾರೆ. ಆಗೆಲ್ಲಾ ʻಗೆಳೆಯ ಮನೆ ಮಾರಿಕೊಂಡʼ ಅಂತಾ ಕಿವಿಗೆ ಬೀಳುತ್ತಿದ್ದಂತೇ ಕರುಣಾಮಯಿ ವಿಷ್ಣುವರ್ಧನ್, ಕುಳ್ಳನನ್ನು ಕರೆಸಿಕೊಂಡು ಕಾಲ್ ಶೀಟ್ ನೀಡುತ್ತಿದ್ದರು. ಈಗ ದ್ವಾರಕೀಶ್ ಗೆ ಸಮಾಧಾನ ಹೇಳಲು ಯಾರಿದ್ದಾರೆ?
ಏನೇ ಆಗಲಿ, ಕರ್ನಾಟಕದ ಕುಳ್ಳನ ಬದುಕಿನಲ್ಲಿ ಇನ್ನಾದರೂ ಬೆಳಕು ಮೂಡಲಿ. ಮನೆ ಪರ್ಚೇಸು ಮಾಡಿದ ರಿಷಬ್ ಗೂ ಒಳಿತಾಗಲಿ. ಈ ಹಾರೈಕೆಯನ್ನು ಮೀರಿ ಕಾಲವನ್ನು ತಡೆಯೋರು ಯಾರೂ ಇಲ್ಲ!
ಒಂದು ವೇಳೆ ದ್ವಾರಕೀಶ್ ಮತ್ತವರ ಮಗ ಯೋಗಿ ಗಾಂಧಿನಗರದ ಬಡ್ಡಿ ವ್ಯಾಪಾರಿಗಳಿಂದಲೋ, ಮಾರ್ವಾಡಿಗಳ ಬಳಿಯೋ ಕಾಸು ಪಡೆದಿದ್ದರೆ ಕತೆಯೇ ಬೇರೆಯಾಗುತ್ತಿತ್ತು. ಬಡ್ಡಿ, ಚಕ್ರಬಡ್ಡಿಯನ್ನೆಲ್ಲಾ ಸೇರಿಸಿ ಮೈಮೇಲಿನ ಬಟ್ಟೆಯನ್ನೂ ಬಿಚ್ಚಿಸಿಕೊಂಡುಬಿಡುತ್ತಿದ್ದರು. ನಿರ್ಮಾಪಕ ಜಯಣ್ಣ ಯೋಗಿಯನ್ನು ನಂಬಿ ಆರು ಕೋಟಿಗೂ ಹೆಚ್ಚು ಹಣ ಕೊಡಿಸಿದ್ದರು. ಯಾವಾಗ ಯೋಗಿ ಪ್ರಾಬ್ಲಮ್ಮಿಗೆ ಸಿಲುಕಿದರೋ? ಒಂದಿಷ್ಟು ಬಡ್ಡಿಯನ್ನೂ ಮನ್ನಾ ಮಾಡಿದ್ದರು.
ಈಗ ಮನೆ ವ್ಯಾಪಾರವಾಗಿ ವ್ಯವಹಾರಗಳೆಲ್ಲಾ ಚುಕ್ತಾ ಆಗುವ ಹೊತ್ತಿನಲ್ಲಿ ಮಾನವೀಯತೆ ಮೆರೆದಿದ್ದಾರೆ. ಕೊಡಬೇಕಿದ್ದ ಆರು ಕೋಟಿಯಲ್ಲಿ ನಾಲ್ಕನ್ನು ಪಡೆದು ಮಿಕ್ಕ ಎರಡು ಕೋಟಿಯನ್ನು ದ್ವಾರಕೀಶ್ ಮೇಲೆ ಬಿಟ್ಟಿದ್ದಾರೆ. ʻಸಿನಿಮಾರಂಗದ ಹಿರಿಯರು ನೀವು. ಈ ಹೊತ್ತಿನಲ್ಲಿ ಇರಲು ಮನೆಯೂ ಕಳೆದುಕೊಳ್ಳೋದು ಸರಿಯಲ್ಲ. ಕಡೇ ಪಕ್ಷ ಒಂದು ಫ್ಲಾಟ್ ಆದರೂ ಖರೀದಿಸಿ ನೆಮ್ಮದಿಯಿಂದ ಇರಿ. ಮತ್ತೆ ಕಾಸು ಕೈಗೆಟುಕಿದಾಗ ನೋಡೋಣʼ ಅಂತಂದಿದ್ದರು. ಆದರೆ ಸನ್ಮಾನ್ಯ ಕೊಬ್ಬರಿ ಮಂಜು ಅವರು ಮಧ್ಯೆ ಬಂದವರೇ ʻನಂಗೆ ಒಂದೂವರೆ ಕೋಟಿ ರೂಪಾಯಿ ಬರಬೇಕು… ಮೊದಲು ಮಡಗಿʼ ಅಂತಾ ಉಳಿದ ಕಾಸನ್ನೂ ಕಿತ್ತುಕೊಂಡು ಹೋದರಂತೆ!
No Comment! Be the first one.