ಡ್ರಗ್ ಕೇಸಿನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ ರಾಗಿಣಿ ಈಗ ಜಾಮೀನಿನ ಮೇಲೆ ಹೊರಬಂದು ತಿಂಗಳು ಕಳೆದಿದೆ. ಈ ಹೊತ್ತಿನಲ್ಲಿ ರಾಗಿಣಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ರಾಗಿಣಿಯ ಲೈಫ್ ಸ್ಟೋರಿ ಸಿನಿಮಾ ಆಗಲಿದೆ ಅನ್ನೋ ಸುದ್ದಿ ಬೇರೆ ಇತ್ತೀಚೆಗೆ ಹರಡಿಕೊಂಡಿತ್ತು. ಇದರ ಕುರಿತು ಪ್ರತಿಕ್ರಿಯಿಸಿರುವ ರಾಗ್ಸ್ ʻನನಗೇನಾದರೂ ವಯಸ್ಸು ಎಪ್ಪತ್ತೈದು ದಾಟಿದ್ದಿದ್ದರೆ ಬಯೋಪಿಕ್ ಗೆ ಒಪ್ಪಿಕೊಳ್ಳುತ್ತಿದ್ದೆ. ಸಿನಿಮಾ ಮಾಡುವಂಥದ್ದು ನನ್ನ ಬದುಕಿನಲ್ಲೇನೂ ನಡೆದಿಲ್ಲʼ ಅಂದಿದ್ದಾಳೆ.
ಸಾಹಿತಿ, ಕವಿರತ್ನ ವಿ. ನಾಗೇಂದ್ರ ಪ್ರಸಾದ್ ಅವರು ಸಿನಿಮಾವೊಂದನ್ನು ನಿರ್ದೇಶಿಸುವುದಾಗಿ, ಆ ಚಿತ್ರಕ್ಕೆ ಕಂಬಿಯ ಹಿಂದಿನ ಕನಸುಗಳು ಅಂತಾ ಹೆಸರಿಡುತ್ತಿರುವುದಾಗಿಯೂ ಖುದ್ದು ರಾಗಿಣಿ ಮುಂದೆ ಹೇಳಿಕೆ ನೀಡಿದರು. ನಾಗೇಂದ್ರ ಪ್ರಸಾದ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ನಿಜ. ಆದರೆ, ಹೆಸರು ಯಾವುದೆಂದು ಸದ್ಯಕ್ಕೆ ಹೇಳಲಾರೆ ಅಂತಾ ರಾಗಿಣಿ ಹೇಳಿಕೆ ನೀಡಿದ್ದಾಳೆ.
ಅಜಯ್ ಡೈರೆಕ್ಟರ್ ಸರ್ಕಲ್ ಎನ್ನುವ ತಂಡ ಕಟ್ಟಿಕೊಂಡು ಯುವ ನಿರ್ದೇಶಕ ಅಜಯ್ ಕುಮಾರ್ ಏಕಕಾಲಕ್ಕೆ ಹನ್ನೆರಡು ಸಿನಿಮಾಗಳ ಟೈಟಲ್ ಲಾಂಚ್ ಮಾಡಿದ್ದಾರೆ. ಈ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ರಾಗಿಣಿ ಭಾಗವಹಿಸಿದ್ದಳು. ಈ ಹನ್ನೆರಡು ಹೆಸರಿನಲ್ಲಿ ʻಡ್ರಗ್ ಪೆಡ್ಲರ್ʼ ಟೈಟಲ್ ಕೂಡಾ ಒಂದಾಗಿತ್ತು!
ಉದ್ದನೆಯ ಶರ್ಟ್ ಥರದ ಡ್ರೆಸ್ ಧರಿಸಿದ್ದ ರಾಗಿಣಿಯನ್ನು ನೋಡಿದ ಅನೇಕರು ʻಅರರೇ…. ಇದೇನಿದು ಕೆಳಗೆ ಪ್ಯಾಂಟು ಹಾಕೊಂಡು ಬರೋದನ್ನು ಮರೆತುಬಿಟ್ರಾ?ʼ ಅಂತಾ ನೇರವಾಗಿ ಕೇಳಿದಾಗ ʻಸಿಕ್ಕಾಪಟ್ಟೆ ಬಿಸಿಲು, ಸೆಕೆ… ಅದಕ್ಕೇ ಗಾಳಿ ಆಡಲಿ ಅಂತಾ ಹೀಗೆ ಬಂದಿದ್ದೀನಿ ಅಂತಾ ಶ್ಯಾನೆ ಬೋಲ್ಡಾಗೇ ಉತ್ತರಿಸಿದಳು!
2020 ನನ್ನ ಪಾಲಿಗೆ ಮಾತ್ರವಲ್ಲದೆ, ಎಲ್ಲರ ಬದುಕಿನಲ್ಲೂ ಕಹಿ ಅನುಭವಗಳನ್ನು ಉಳಿಸಿ ಹೋಗಿದೆ. 2021 ಎಲ್ಲ ನೋವು, ಅವಮಾನಗಳನ್ನೂ ಮರೆಯುವಂತೆ ಮಾಡಲಿ. ಲೈಫು ಅಂದರೆ ಏಳುಬೀಳುಗಳು ಇದ್ದಿದ್ದೇ. ನನ್ನ ಬದುಕು ಅದಕ್ಕೆ ಉದಾಹರಣೆಯಂತಿದೆ. ಯಾವುದಕ್ಕೂ ಅಂಜದೇ ಅಳುಕದೇ ಮುನ್ನಡೆಯಬೇಕು… ಎಂಬಿತ್ಯಾದಿಯಾಗಿ ರಾಗಿಣಿ ಬದುಕಿನ ಕುರಿತ ಪ್ರವಚನವನ್ನು ನೀಡಿದ್ದು ಕೇಳಲು ಬಲುಹಿತವಾಗಿತ್ತು. ಇಷ್ಟೆಲ್ಲಾ ಆದ ನಂತರ ರಾಗಿಣಿಯ ಡ್ರಗ್ಸ್ ಸ್ಕ್ಯಾಂಡಲ್ಲು, ಜೈಲ್ ಕಹಾನಿ, ಹೊರಬಂದ ಮೇಲಿನ ಅನುಭವಗಳನ್ನೆಲ್ಲಾ ಕೇಳಿ ತಿಳಿಯುವ ಕಾತುರದಲ್ಲಿದ್ದವರ ಮುಂದೆ ತುಪ್ಪದ ರಾಣಿ ಹಾರಿಸಿದ್ದು ಅಕ್ಷರಶಃ ಕಾಗೆಯನ್ನು ಮಾತ್ರ. ಮೀಡಿಯಾದವರ ಒಂದೆರಡು ಪ್ರಶ್ನೆಗಳಿಗೆ ಚಾಲಾಕಿ ಉತ್ತರ ನೀಡಿದ್ದೇ ಕಾರು ಹತ್ತಿ ಹಾರಿಹೋಯಿತು ಗಿಣಿ!
ಫೋಟೋ : ಚಿತ್ರತಾರಾ ಮನು
No Comment! Be the first one.