ದಶಕಗಳಿಂದ ಸಂಗೀತ ಸೇವೆ ಮಾಡುತ್ತ ಸ್ಯಾಕ್ಸೊಫೋನ್ ವಾದನದ ಮೂಲಕ ಜಗತ್ತಿನಾದ್ಯಂತ ಕನ್ನಡವನ್ನೂ ಸಂಗೀತವನ್ನೂ ಪಸರಿಸಿದ ಹಿರಿಯ ಜೀವ ಕದ್ರಿ ಗೋಪಾಲ್ ನಾಥ್ ಅವರು ಇಂದು ಮುಂಜಾನೆ ನಮ್ಮನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮವೊಂದರಲ್ಲಿ ಜನಿಸಿ, ತಮ್ಮ ಸ್ಯಾಕ್ಸಫೋನ್ ವಾದನದ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದಿದ್ದ ಕದ್ರಿ ಗೋಪಾಲನಾಥ್ ಕಣ್ಮುಚ್ಚಿದ್ದಾರೆ.
ಕಳೆದ ಒಂದು ವರ್ಷದಿಂದ ಕದ್ರಿ ಗೋಪಾಲನಾಥ್ ಕ್ಯಾನ್ಸರ್’ನಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಅವರ ಮನೆಯವರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಯಾವ ಪ್ರಯತ್ನವೂ ಕೈಗೂಡದೇ ಹೋಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗೋಪಾಲನಾಥ್ ಉಸಿರು ಚೆಲ್ಲಿದ್ದಾರೆ.
ಅವರ ಕಿರಿಯ ಪುತ್ರ ಮಣಿಕಾಂತ್ ಕದ್ರಿ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ. ಹಿರಿಯ ಪುತ್ರ ಕುವೈತ್’ನಲ್ಲಿ ನೆಲೆಸಿದ್ದಾರೆ.
೧೯೪೯ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿ, ಸ್ಯಾಕ್ಸಫೋನ್ ಎಂದರೇನೆ ಕದ್ರಿ ಗೋಪಾಲನಾಥ್ ಎಂಬಷ್ಟರ ಮಟ್ಟಿಗೆ ಹೆಸರು ಮಾಡಿದವರು. ತೀರಾ ಸಣ್ಣ ವಯಸ್ಸಿಗೇ ನಾದಸ್ವರ ವಿದ್ಯೆಯನ್ನು ಕಲಿತಿದ್ದ ಕದ್ರಿ ಗೋಪಾಲನಾಥ್ ಒಮ್ಮೆ ಮೈಸೂರು ಅರಮನೆ ಬಾಜಾಭಜಂತ್ರಿ ತಂಡದವರು ನುಡಿಸುತ್ತಿದ್ದ ಸ್ಯಾಕ್ಸಫೋನ್ ವಾದ್ಯವನ್ನು ನೋಡಿ ‘ನಾನೂ ಈ ವಾದ್ಯ ನುಡಿಸುವುದನ್ನು ಕಲಿಯಬೇಕು ಅಂತಾ ಕನಸು ಕಂಡವರು. ಮುಂದೆ ಪಾಶ್ಚಾತ್ಯ ವಾದ್ಯವಾದ ಸ್ಯಾಕ್ಸಫೋನ್ ಅನ್ನು ನಮ್ಮದೇ ವಾದ್ಯವನ್ನಾಗಿ ಪರಿವರ್ತಿಸಿದವರು.
ಬೆಂಗಳೂರಿನ ಪ್ರತಿಷ್ಠಿತ ಚಾಮರಾಜಪೇಟೆ ಶ್ರೀ ರಾಮಸೇವಾ ಮಂಡಲಿ ಸಂಗೀತೋತ್ಸವದ ಉದ್ಘಾಟನಾ ದಿನದ ಕಾರ್ಯಕ್ರಮ ನೀಡುವುದನ್ನು ಕದ್ರಿ ಗೋಪಾಲನಾಥ್ ಪ್ರತೀತಿಯಂತೆ ಪಾಲಿಸಿಕೊಂಡು ಬಂದಿದ್ದರು. ಕದ್ರಿ ಗೋಪಾಲ್ ನಾಥ್ ಅವರೇ ಮೊದಲ ದಿನದ ಕಛೇರಿ ನೀಡಬೇಕು ಅನ್ನೋದು ಶ್ರೀ ರಾಮಸೇವಾ ಮಂಡಲಿಯ ಸಂಸ್ಥಾಪಕ ಕಾರ್ಯದರ್ಶಿಗಳಾದ ದಿ. ಎಸ್.ವಿ. ನಾರಾಯಣಸ್ವಾಮಿ ರಾವ್ ಅವರ ಬಯಕೆಯಾಗಿತ್ತು. ಅದರಂತೇ ಕದ್ರಿ ಗೋಪಾಲನಾಥ್ ಅನೇಕ ವರ್ಷಗಳಿಂದ ಕಾರ್ಯಕ್ರಮ ನೀಡುತ್ತಾ ಬಂದಿದ್ದರು.
ಕದ್ರಿ ಗೋಪಾಲನಾಥ್ ಕನ್ನಡ ನೆಲದಲ್ಲಿ ಹುಟ್ಟಿ, ಬೆಳೆದು, ಕನ್ನಡ ಕರ್ನಾಟಕದ ಹೆಸರನ್ನು ಇಡೀ ಜಗತ್ತಿಗೇ ಬೆಳಗಿದವರು. ಇವರನ್ನು ಪ್ರತಿಭೆಗೆ ಮನ್ನಣೆ ದೊರೆತಿದ್ದು ತಮಿಳುನಾಡಿನಲ್ಲಿ.  ಆದರೆ ಇಲ್ಲಿನ ಸರ್ಕಾರಗಳು ಅವರಿಗೆ ಕಾಲಾಂತರದಿಂದ ಅನ್ಯಾಯವನ್ನೇ ಮಾಡುತ್ತಾ ಬಂದಿದ್ದು ದುರಂತ. ಇಷ್ಟು ದೊಡ್ಡ ಸಾಧಕನಿಗೆ ಬೆಂಗಳೂರಿನಲ್ಲಿ ಒಂದು ನಿವೇಶನ ಕೂಡಾ ನೀಡಿಲ್ಲ.  ಹಿಂದೆ ಯಡಿಯೂರಪ್ಪನವರ ಸರ್ಕಾರದಲ್ಲಿ ಮಂಜೂರಾದರೂ ಅದು ಕೈ ಸೇರಲೇಇಲ್ಲ. ಸಿದ್ದರಾಮಯ್ಯನವರ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿಗೆ ನೆಟ್ಟಗೆ ಶಿಫಾರಸು ಮಾಡಲಿಲ್ಲ. ಕಳೆದ ಒಂದು ವರ್ಷದಿಂದೀಚೆಗೆ ಗೋಪಾಲನಾಥ್ ಅವರ ಆರೋಗ್ಯ ಕೈ ಕೊಟ್ಟಿತ್ತು. ಕುಮಾರಸ್ವಾಮಿ ಅವರ ಸರ್ಕಾರ ‘ಆ ಡಾಕ್ಯುಮೆಂಟು ಕೊಡಿ, ಅದು ಕೊಡಿ ಇದು ಕೊಡಿ’ ಅಂದರೇ ವಿನಃ ಕಡೇ ಪಕ್ಷ ಅವರ ಆಸ್ಪತ್ರೆ ಬಿಲ್ಲನ್ನೂ ಕಟ್ಟಲಿಲ್ಲ. ಅವರ ಮಕ್ಕಳು, ಕುಟುಂಬದವರು ಅಮೆರಿಕದಿಂದ ಔಷಧಗಳನ್ನು ತರಿಸಿ ಗೋಪಾಲನಾಥ್ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೂ ಕೈಗೂಡಲಿಲ್ಲ. ಕಡೆಗೂ ಕದ್ರಿ ಗೋಪಾಲನಾಥ್ ತಮ್ಮ ಉಸಿರಿನ ಸ್ವರವನ್ನು ನಿಲ್ಲಿಸಿ ಮಲಗಿದ್ದಾರೆ.
ಪಾಶ್ಚಾತ್ಯ ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ಪರಿಚಯಿಸಿದ, ಹಿಂದೂಸ್ಥಾನಿ ಸಂಗೀತದೊಂದಿಗೆ ಜುಗಲ್ಬಂಧಿ ಆಡಿಸಿದ ಕೀರ್ತಿ ಕದ್ರಿ ಗೋಪಾಲನಾಥ್ ಅವರದ್ದು. ಯಾವುದೇ ಸಭೆ ಸಮಾರಂಭಗಳ ಹಿನ್ನೆಲೆಯಲ್ಲಿ ಗೋಪಾಲನಾಥ್ ಅವರು ನುಡಿಸಿದ ಸಂಗೀತ ಕೇಳಿಸುತ್ತದೆ. ಸ್ಯಾಕ್ಸಫೋನ್ ಮಾಂತ್ರಿಕ ಎಂದೇ ಹೆಸರಾದ ಗೋಪಾಲನಾಥ್ ಅವರ ಅಗಲಿಗೆ ನಿಜಕ್ಕೂ ಕರ್ನಾಟಕದ ಪಾಲಿಗೆ ತುಂಬಲಾರದ ನಷ್ಟವಾಗಿದೆ.
ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶರಣ್ ಈ ಬಾರಿಯೂ ಗೆದ್ದರು!

Previous article

ಎಲ್ಲಿದ್ದೆ ಇಲ್ಲಿತನಕ ನಗಬಹುದು ಕೊನೇತನಕ!

Next article

You may also like

Comments

Leave a reply

Your email address will not be published. Required fields are marked *