ಅಭಿನಯ ಚತುರ ಅಂತಲೇ ಫೇಮಸ್ಸಾಗಿರುವ ನಟ ನೀನಾಸಂ ಸತೀಶ್. ಬೇರೆ ಯಾವ ಹೀರೋಗೂ ಪೈಪೋಟಿ ಕೊಡದೇ ಪ್ರತಿ ಬಾರಿಯೂ ಭಿನ್ನ ಜಾನರಿನ ಸಿನಿಮಾಗಳನ್ನು ಒಪ್ಪಿಕೊಂಡು ತಮ್ಮದೇ ಆದ ಪ್ರೇಕ್ಷಕ ವಲಯವನ್ನು ಸೃಷ್ಟಿಸಿಕೊಂಡು, ನಿರ್ಮಾಪಕರ ಹಿತ ಕಾಯುತ್ತಾ, ನಂಬಿ ಬಂದ ನಿರ್ದೇಶಕರುಗಳ ಶ್ರೇಯಸ್ಸು ಹೆಚ್ಚಿಸುತ್ತಿರುವ ಅಪರೂಪದ ಸ್ಟಾರ್!
ದೊಡ್ಡ ಪರದೆಮೇಲೆ ರಂಜಿಸುತ್ತಿದ್ದ ಸತೀಶ್ ಈಗ ಕಿರುತೆರೆಗೂ ಬಂದಿದ್ದಾರೆ!
ಒಮ್ಮೆ ಚಂಬಲ್ನಂತಾ ಗಂಭೀರ ಕಥಾವಸ್ತುವಿನ ಸಿನಿಮಾದಲ್ಲಿ ಮನಕಲಕುವ ನಟನೆ ನೀಡಿದರೆ, ‘ಅಯೋಗ್ಯನಾಗಿ ನಗಿಸುವ ಪಾತ್ರ ನಿರ್ವಹಿಸುತ್ತಾರೆ. ಬ್ಯೂಟಿಫುಲ್ ಮನಸು ಎನ್ನುವ ಲವ್ ಸಬ್ಜೆಕ್ಟಿನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ‘ಬ್ರಹ್ಮಚಾರಿಯಂಥಾ ಯಾರೂ ಮುಟ್ಟಲು ಸಾಧ್ಯವಿಲ್ಲದ ರೋಲನ್ನು ಒಪ್ಪಿಕೊಂಡು ಅಲ್ಲೂ ಗೆಲುವು ಕಾಣುತ್ತಾರೆ. ದಿಢೀರನೆ ಆಕ್ಷನ್ ಸಿನಿಮಾ ಕೂಡಾ ಒಪ್ಪಿಕೊಂಡು ಅಚ್ಛರಿ ಮೂಡಿಸುತ್ತಾರೆ. ಇದು ಕ್ವಾಟ್ಲೆ ಸತೀಸ್ ಸ್ಟೈಲು ಅಂತ ಬೇಕಿದ್ದರೂ ಅಂದುಕೊಳ್ಳಬಹುದು. ಗೆದ್ದ ಫಾರ್ಮುಲಾಗೆ ಅಂಟಿಕೊಂಡು ಕೂರದೆ, ಸದಾ ಹೊಸತನಕ್ಕಾಗಿ ತುಡಿಯುವ ಸತೀಶ್ ಅಭಿನಯದಲ್ಲಿ ಗೋದ್ರಾ ಎನ್ನುವ ಸಿನಿಮಾವೊಂದು ತಯಾರಾಗಿದೆ. ಬಹುಶಃ ಸತೀಶ್ ವೃತ್ತಿ ಬದುಕಿಗೆ ಈ ಸಿನಿಮಾ ಮೈಲಿಗಲ್ಲಾಗುವ ಸಾಧ್ಯತೆಯಿದೆ. ಇನ್ನೇನು ಬಿಡುಗಡೆಯಾಗುವ ಈ ಚಿತ್ರದ ಟೀಸರು ನೋಡಿದರೆ ಖಂಡಿತಾ ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತಾ ಯಾರಿಗಾದರೂ ಅನ್ನಿಸದೇ ಇರೋದಿಲ್ಲ. ಹೀಗಾಗಿ ಟೀಸರನ್ನು ಬಹುಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಇವೆಲ್ಲದರ ಮಧ್ಯೆ ಸತೀಶ್ ಈಗ ಕಿರುತೆರೆಗೂ ಕಾಲಿಟ್ಟಿದ್ದಾರೆ. ಹಾಗೆ ನೋಡಿದರೆ ಸತೀಶ್ ಅವರಿಗೆ ಆರಂಭದ ದಿನಗಳಲ್ಲಿ ಬಣ್ಣದ ಬದುಕಿಗೆ ಜಾಗ ಕೊಟ್ಟಿದ್ದೇ ಸ್ಮಾಲ್ ಸ್ಕ್ರೀನ್. ನೀನಾಸಂನಲ್ಲಿ ತರಬೇತಿ ಮುಗಿಸಿಕೊಂಡುವ ಬಂದು ಧಾರಾವಾಹಿಗಳಲ್ಲಿ ನಟಿಸುತ್ತಾ ಕ್ರಮೇಣ ಚಿತ್ರರಂಗಕ್ಕೂ ಬಂದು ಹಂತಹಂತವಾಗಿ ಮೇಲೆ ಬಂದವರು ಸತೀಶ್. ಇಂಥ ಸತೀಶ್ ಸದ್ಯ ಉದಯ ಟೀವಿಯಲ್ಲಿ ವಾರಾಂತ್ಯದ ಕಾರ್ಯಕ್ರಮವಾಗಿ ಪ್ರಸಾರವಾಗುವ ಏನಮ್ಮಿ ಯಾಕಮ್ಮಿ ಎನ್ನುವ ವಿನೂತನ ಶೋವೊಂದನ್ನು ಹೋಸ್ಟ್ ಮಾಡಲಿದ್ದಾರೆ. ಕೆಲವೇ ದಿನಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಪುರುಷರು ಮಾತ್ರವಲ್ಲದೆ, ಮಕ್ಕಳು ಮತ್ತು ಮಹಿಳಾ ಅಭಿಮಾನಿಗಳನ್ನು ಯಥೇಚ್ಚವಾಗಿ ಹೊಂದಿರುವ ಸತೀಶ್ ಪ್ರತಿನಿಧಿಸುತ್ತಿರುವ ಈ ಶೋ ಜನಮನ ಗೆಲ್ಲೋದು ಗ್ಯಾರೆಂಟಿ!