ತೆಲುಗಿನ ಪುರಿ ಜಗನ್ನಾಥ್ ಇಸ್ಮಾರ್ಟ್ ಶಂಕರ್ ಸಕ್ಸಸ್ ನ ಜತೆಗೆ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿಯೂ ಸುದ್ದಿಯಾಗಿದ್ದರು. ಕೆಜಿಎಫ್ ಸಕ್ಸಸ್ ನ ನಂತರ ಪುರಿ ಜಗನ್ನಾಥ್ ರಾಕಿಂಗ್ ಸ್ಟಾರ್ ಜನಗಣಮನ ಎಂಬ ಸಿನಿಮಾವನ್ನು ಮಾಡಲಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿತ್ತು. ಅದಕ್ಕೆ ಪೂರಕವಾಗಿ ಪುರಿ ಜಗನ್ನಾಥ್ ಒಂದೆರಡು ಬಾರಿ ರಾಕಿಂಗ್ ಸ್ಟಾರ್ ಅವರನ್ನು ಮೀಟ್ ಮಾಡಿ ಕಥೆಯನ್ನು ಹೇಳಿಬಂದಿದ್ದರು. ಆದರೆ ಅದ್ಯಾಕೋ ರಾಕಿಂಗ್ ಸ್ಟಾರ್ ಯಶ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆಂಬ ಸುದ್ದಿಯೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆಮೇಲೆ ಪುರಿ ಜಗನ್ನಾಥ್ ವಿಜಯ್ ದೇವರಕೊಂಡ ಅವರನ್ನು ತಮ್ಮ ಚಿತ್ರಕ್ಕೆ ಸೆಲೆಕ್ಟ್ ಮಾಡಿದ್ದಾರೆಂದೂ ಹೇಳಲಾಗುತ್ತಿತ್ತು. ಆಶ್ಚರ್ಯವೆಂಬಂತೆ ವಿಜಯ್ ದೇವರಕೊಂಡ ನಾಯಕನಾಗಿ ಫೈಟರ್ ಎನ್ನುವ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆಂಬ ಸುದ್ದಿ ಈಗಷ್ಟೇ ಹೊರಬಿದ್ದಿದೆ.
ಇಸ್ಮಾರ್ಟ್ ಶಂಕರ್ ಯಶಸ್ಸಿನ ನಂತರ ಮುಂದಿನ ಚಿತ್ರದ ಪ್ರಿಪರೇಷನ್ ನಲ್ಲಿದ್ದ ಪುರಿ ಜಗನ್ನಾಥ್ ಅವರ ಚಿತ್ರದ ಟೈಟಲ್ ಕೂಡ ಫೈನಲ್ ಆಗಿದ್ದು, ಸಹ ನಿರ್ಮಾಪಕಿ ಚಾರ್ಮಿ ಕೌರ್ ಅವರು ಚಿತ್ರದ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮುಂದಿನ 2020ರ ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರತಂಡ ಸಿನಿಮಾದ ತಯಾರಿಯಲ್ಲಿ ತೊಡಗಿದೆ. ಈ ಚಿತ್ರದಲ್ಲಿ ವಿಜಯ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರದ ಪಾತ್ರಕ್ಕಾಗಿ ಅವರು ಸಿಕ್ಸ್ಪ್ಯಾಕ್ ಮಾಡಿಕೊಳ್ಳುವಲ್ಲಿಯೂ ಮನಸ್ಸು ಮಾಡಿದ್ದಾರೆನ್ನಲಾಗುತ್ತಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ವಿಜಯ್ ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಬರುವ ಸಾಧ್ಯತೆ ಇದ್ದು, ಪುರಿ ಟೂರಿಂಗ್ ಟಾಕೀಸ್ ಹಾಗೂ ಪುರಿ ಕನೆಕ್ಟ್ಸ್ ಬ್ಯಾನರ್ ಅಡಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.