(3/5) ***
ಸಾಕಷ್ಟು ದಿನಗಳಿಂದ ಬಿಡುಗಡೆಗೆ ಕಾದಿದ್ದ ಫಾರ್ಚುನರ್ಗೆ ಈ ವಾರ ಮುಕ್ತಿ ಸಿಕ್ಕಿದೆ.
ಬಹುಶಃ ದಿಗಂತ್ ನಟನೆಯಲ್ಲಿ ಮೂಡಿಬಂದ ಇತ್ತೀಚಿನ ಸಿನಿಮಾಗಳಿಗೆ ಹೋಲಿಸಿದರೆ ಫಾರ್ಚುನರ್ ಒಂಚೂರು ಬೆಟರ್ರಾಗಿ ಮೂಡಿಬಂದಿದೆಯೆನ್ನಬಹುದೇನೋ. ಯಾಕೆಂದರೆ ದಿಗಂತ್ನ ವ್ಯಕ್ತಿತ್ವಕ್ಕೆ ಹೇಳಿಮಾಡಿಸಿದಂತಾ ಪಾತ್ರ ಈ ಚಿತ್ರದಲ್ಲಿದೆ!
ತನ್ನ ಮನೆಯಲ್ಲೇ ಕೆಲಸಕ್ಕೆ ಬಾರದವನು ಅನ್ನಿಸಿಕೊಂಡ ಹುಡುಗ, ಸಾಫ್ಟ್ವೇರ್ ಹುಡುಗಿ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜಾಗೋದರೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ಎಂ.ಎಲ್.ಎ ಮಗ, ಸ್ವಂತ ಹೋಟೆಲ್ ನಡೆಸುತ್ತಿರುವ ಹುಡುಗ ಅನ್ನೋ ಕಾರಣಕ್ಕೆ ಆಕೆ ಮದುವೆಯಾಗಿರುತ್ತಾಳೆ. ಆದರೆ ಈತ ಪ್ರಯೋಜನಕ್ಕೆ ಬಾರದವನು, ಸ್ನೇಹಿತನ ಹೋಟೆಲ್ ತೋರಿಸಿ ಸುಳ್ಳು ಹೇಳಿ ಮದುವೆಯಾಗಿದ್ದಾನೆ ಅನ್ನೋದು ಆಕೆಗೆ ಗೊತ್ತಾಗುತ್ತದೆ. ಹೆಂಡತಿ ಆಫೀಸಿಗೆ ಹೋದರೆ ಇವನು ಮನೆಯಲ್ಲಿ ಟೀವಿ ನೋಡಿಕೊಂಡು ಇರುವ ಸೋಮಾರಿ. ಪತ್ನಿಯ ಸಹೋದ್ಯೋಗಿಯೊಬ್ಬ ಎದುರು ಮನೆಯಲ್ಲೇ ಇರುತ್ತಾನೆ. ಆತನ ಪತ್ನಿ ಹಳ್ಳಿ ಹುಡುಗಿ ಅನ್ನೋ ಕಾರಣಕ್ಕೆ ಆಕೆಯ ಗಂಡನಿಗೆ ಅವಳ ಮೇಲೆ ಒಂಥರಾ ಅಸಡ್ಡೆ, ತಿರಸ್ಕಾರ ಭಾವನೆ. ಆಕೆ ಚೆಂದದ ಅಡುಗೆ ಮಾಡುತ್ತಾಳೆ ಅಂತಾ ಗೊತ್ತಾಗಿದ್ದೇ ಅವಳಿಂದ ಅಡುಗೆ ಮಾಡಿಸಿಕೊಂಡು ತನ್ನದೇ ಫಾರ್ಚುನರ್ ಕಾರಿನಲ್ಲಿ ತೆಗೆದುಕೊಂಡು ಹೋಗಿ ವ್ಯಾಪಾರ ಶುರು ಮಾಡುತ್ತಾನೆ ಹೀರೋ. ಜೋಳದ ರೊಟ್ಟಿ ಬದನೇಕಾಯಿ ಪಲ್ಯದ ವ್ಯಾಪಾರವೇನೋ ಕುದುರುತ್ತದೆ. ಆದರೆ ಈ ವಿಚಾರ ಈತನ ಹೆಂಡತಿಗೂ ಆಕೆಯ ಗಂಡನಿಗೂ ಗೊತ್ತಾಗಿ `ಮರ್ಯಾದೆ ಹೋಯ್ತು ಅಂತಾ ರಣರಂಪ ಶುರುವಾಗುತ್ತದೆ. ಸೋಮಾರಿಯಂತೆ ಕೂತು ತಿಂದರೂ ಪರವಾಗಿಲ್ಲ ರಸ್ತೆಯಲ್ಲಿ ಹೋಟೆಲ್ ನಡೆಸಿ ಬದುಕೋದು ಎರಡೂ ಮನೆಯವರಿಗೆ ಪ್ರತಿಷ್ಟೆಹಾನಿ ಎಂಬಂತಾಗುತ್ತದೆ. ಸಿನಿಮಾದ ಮೊದಲ ಭಾಗದಲ್ಲಿ ನಡೆಯುವ ಈ ಎಲ್ಲ ದೃಶ್ಯಗಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ಯುವಕರಿಗೆ ಸ್ಫೂರ್ತಿ ನೀಡುವಂತಿದೆ. ಆದರೆ ಎರಡನೇ ಭಾಗ ಬಾಣಲಿಯ ಮೇಲೆ ಸೀದುಹೋದ ಜೋಳದ ರೊಟ್ಟಿಯಂತೆ ಕಮಟುಕಮಟಾಗಿಬಿಡುತ್ತದೆ. ಚಿತ್ರಕತೆ ಹಳ್ಳ ಹಿಡಿಯುತ್ತಾ ಸಾಗುತ್ತದೆ. ಒಂದೊಳ್ಳೆ ಸಂದೇಶದೊಂದಿಗೆ ಬೆರೆತುಕೊಳ್ಳಬೇಕಿದ್ದ ಸಿನಿಮಾ ಫ್ಯಾಮಿಲಿ ಪ್ರಾಬ್ಲಮ್ಮಿನಲ್ಲಿ ಸಿಕ್ಕು ನರಳುತ್ತದೆ; ಫಾರ್ಚುನರ್ ಹೈವೇಯಿಂದ ಗಲ್ಲಿ ಗಟಾರಗಳಿಗೆ ನುಗ್ಗುತ್ತದೆ.
ಒಟ್ಟಾರೆ ನೋಡಹೋದರೆ ದಿಗಂತನ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ತೀರಾ ಕೆಟ್ಟ ಚಿತ್ರವೇನಲ್ಲ. ಇಡೀ ಸಿನಿಮಾದಲ್ಲಿ ಆಪ್ತವೆನಿಸೋದು ದಿಂಗಂತ್ ಮತ್ತು ಸ್ವಾತಿ ಶರ್ಮಾ ನಟನೆ. ಸೋನುಗೌಡ ಪಾತ್ರ ಕೂಡಾ ಅಚ್ಚುಕಟ್ಟಾಗೇ ಇದೆ. ಸಾಫ್ಟ್ವೇರ್ ಮಂದಿಯ ಆತುರ, ಯಡವಟ್ಟುಗಳನ್ನು ಜೀವಂತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಜುನಾಥ್ ಅನಿವಾರ್ಯ. ಗಂಡು ಹೆಣ್ಣು ಒಟ್ಟಿಗಿದ್ದಾರೆ ಅಂದಮಾತ್ರಕ್ಕೆ ಅವರನ್ನು ಬೆಡ್ ರೂಮಿನಲ್ಲಿ ಕೂಡಿಹಾಕುವ ಸಮಾಜದ ನೀತಿಯ ಬಗೆಗೆ ಪ್ರಶ್ನೆಯೆತ್ತಿರುವುದೂ ಸಮಂಜಸವೆನಿಸುತ್ತದೆ. ಸಾಕಷ್ಟು ಕಡೆ ಸಂಭಾಷಣೆ ಕೂಡಾ ಗಮನಸೆಳೆಯುತ್ತದೆ.
ಇನ್ನೊಂದಿಷ್ಟು ಟ್ವಿಸ್ಟು ಟರ್ನುಗಳನ್ನಿಟ್ಟು, ಸ್ಥಿತಿಪ್ರಜ್ಞವಾಗಿ ಮಾಡಿದ್ದೇ ಆಗಿದ್ದಲ್ಲಿ ಒಂದೊಳ್ಳೆ ಸಿನಿಮಾ ಅನಿಸಿಕೊಳ್ಳುವ ಸಾಧ್ಯತೆ ಫಾರ್ಚೂನರ್ಗಿತ್ತು. ಆದರೆ ಒಂದು ಸಲ ನೋಡಿಬರಲು ಸಿನಿಮಾ ಮೋಸವಿಲ್ಲ.
#