ಯೋಗರಾಜ ಭಟ್ಟರ ದಯೆಯಿಂದ ನಟನಾಗಿ ರೂಪುಗೊಂಡು ನೆಲೆ ನಿಲ್ಲಲಾಗದೆ ಒದ್ದಾಡುತ್ತಿರೋ ದಿಗಂತ್ಗೆ ದೂದ್ಪೇಡ ಅಂತೊಂದು ಬಿರುದು ಸಿಕ್ಕಿದ್ದೇ ಗಟ್ಟಿ. ಹೈಟು, ಪರ್ಸನಾಲಿಟಿ ಮತ್ತು ಒಂದು ರೇಂಜಿಗಿರೋ ನಟನೆ… ಇಷ್ಟಿದ್ದರೂ ಬರಖತ್ತಾಗದೇ ಮಂಡೆಬಿಸಿ ಮಾಡಿಕೊಂಡಿರೋ ಈ ಮಲೆನಾಡ ಹುಡುಗ ಇದೀಗ ಫಾರ್ಚುನರ್ ಅಂತೊಂದು ಚಿತ್ರದ ಮೂಲಕ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಸಿನಿಮಾವೂ ಸೇರಿದಂತೆ ಇಡೀ ಜಗತ್ತು ಯಾವ ವೇಗದಲ್ಲಾದರೂ ಚಲಿಸಲಿ, ತನಗೆ ಮಾತ್ರ ಕಣ್ತುಂಬ ನಿದ್ರೆಯಾದರೆ ಸಾಕೆಂಬುದನ್ನೇ ಸಿದ್ಧಾಂತವಾಗಿಸಿಕೊಂಡಿರೋ ದಿಗಂತ ಈ ಚಿತ್ರದ ಮೂಲಕವಾದರೂ ಗೆಲ್ಲಬಹುದಾ? ಹೀಗೊಂದು ಲೆಕ್ಕಾಚಾರ ಪ್ರೇಕ್ಷಕ ವಲಯದಲ್ಲಿ ಹರಿದಾಡುತ್ತಿದೆ!
ಈಗ್ಗೆ ತಿಂಗಳುಗಳ ಹಿಂದೆ ದಿಗಂತ್ ನಟಿಸಿದ್ದ ಕಥೆಯೊಂದು ಶುರುವಾಗಿದೆ ಎಂಬ ಚಿತ್ರ ತೆರೆ ಕಂಡಿತ್ತು. ಟೈಟಲ್ಲಿನಲ್ಲಿಯೇ ಭಿನ್ನವಾದುದೇನನ್ನೋ ಸೂಚಿಸುತ್ತಾ, ಭರ್ಜರಿ ಪ್ರಚಾರವನ್ನೂ ಈ ಚಿತ್ರ ಪಡೆದುಕೊಂಡಿತ್ತು. ಹೀಗೆ ಸಿಕ್ಕ ವ್ಯಾಪಕ ಪ್ರಚಾರ ಮತ್ತು ಪುಷ್ಕರ್ ಮಲ್ಲಿಕಾರ್ಜುನನಂಥಾ ‘ಸ್ಟಾರ್ ನಿರ್ಮಾಪಕ’ ಕೈಯಿಟ್ಟರೂ ಈ ಚಿತ್ರ ಬರಖತ್ತಾಗಲಿಲ್ಲ. ಕಥೆ ಶುರುವಾದದ್ದಾಗಲಿ, ಮುಕ್ತಾಯವಾದದ್ದಾಗಲಿ ಗೊತ್ತೇ ಆಗಲಿಲ್ಲ. ಆದರೆ ದಿಗಂತನ ಸರಣಿ ಸೋಲಿನ ವ್ಯಥೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು!
ಕಥೆಯೊಂದು ಶುರುವಾದ ನಂತರವೂ ದಿಗಂತನ ವ್ಯಥೆ ಹಾಗೆಯೇ ಉಳಿದುಕೊಂಡಿರೋದಕ್ಕೆ ಆತನ ಹೊರತಾಗಿ ಬೇರ್ಯಾವ ಕಾರಣವೂ ಇರಲಿಲ್ಲ. ಇದುವರೆಗೂ ಈತ ಒಂದಷ್ಟು ಉಡಾಫೆ ಶೇಡಿನ ಪಾತ್ರಗಳನ್ನು ಮಾಡಿದ್ದಾನಲ್ಲಾ? ರಿಯಲ್ ಆಗಿಯೂ ಇವನದ್ದು ಅಂಥದ್ದೇ ವ್ಯಕ್ತಿತ್ವ. ಲೈಫ್ ಅಂದ್ರೆ ಮಜಾ ಉಡಾಯಿಸೋದು ಎಂಬಂಥಾ ಪಡ್ಡೆ ಮನಸ್ಥಿತಿ ಈಗಲೂ ಈತನ ವ್ಯಕ್ತಿತ್ವದಲ್ಲಿ ಹಾಗೆಯೇ ಉಳಿದುಕೊಂಡಿದೆ. ಸಿನಿಮಾ ಎಂಬುದು ಈತನಿಗೆ ಟೈಂ ಪಾಸಿನ ಸರಕೇ ಹೊರತು ಅದು ಕನಸಲ್ಲ!
ಆದರೆ ಕಣ್ತುಂಬ ನಿದ್ದೆ ಮಾಡಿ ಗ್ಲಾಮರ್ ಲಕಲಕಿಸಿದರೆ ಎಲ್ಲ ಓಡೋಡಿ ಬಂದು ಸಿನಿಮಾ ನೋಡುತ್ತಾರೆಂಬುದು ದಿಗಂತನ ಭ್ರಮೆ ಮಾತ್ರ. ನಿದ್ದೆಗೆಟ್ಟು ಕಣ್ಣ ಸುತ್ತಾ ಬ್ಲಾಕ್ ಸರ್ಕಲ್ಲು ಸುತ್ತಿಕೊಂಡು ಹೈರಾಣು ಮಾಡುವಂತೆ ನಿದ್ದೆಗೆಡದೆ ಯಾರಿಗೂ ಗೆಲುವು ದಕ್ಕಿಲ್ಲ ಎಂಬ ಸಾಮಾನ್ಯ ಪ್ರಜ್ಞೆಯೂ ದಿಗಂತನಿಗಿದ್ದಂತಿಲ್ಲ. ಇಂಥಾ ಮನಸ್ಥಿತಿಯಿಂದಲೇ ಸಪಾಟಾಗಿ ಸೋಲುತ್ತಾ ಬಂದಿರೋ ದಿಗಂತ್ ನಟಿಸಿರೋ ಹೊಸಾ ಚಿತ್ರ ಫಾರ್ಚುನರ್ ತೆರೆ ಕಾಣಲು ರೆಡಿಯಾಗಿದೆ. ಈ ಚಿತ್ರದ ಕಥೆ ಏನಾಗಲಿದೆಯೋ ಭಗವಂತನೇ ಬಲ್ಲ!
#
No Comment! Be the first one.