ಕನ್ನಡದ ಸಿನಿಮಾವೊಂದು, ಅದರಲ್ಲೂ ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶಿಸಿದ ಚೊಚ್ಚಲ ಸಿನಿಮಾ ನ್ಯೂಯಾರ್ಕ್ನಲ್ಲಿ ನಡೆಯುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನ ವರ್ಲ್ಡ್ ಪ್ರೀಮಿಯರ್ ಸೇರಿದಂತೆ ಜಗತ್ತಿನ ಆರೇಳು ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಅದು ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ. ಸಾಮಾನ್ಯವಾಗಿ ಸಿನಿಮಾ ಕತೆಗಳು ಗಂಡಸರ ದೃಷ್ಟಿಯಲ್ಲೇ ಸಾಗುತ್ತವೆ. ಆದರೆ ಇದು ಹೆಣ್ಣುಮಕ್ಕಳ ದೃಷ್ಟಿಕೋನದಲ್ಲಿ ನಡೆಯುವಂತಾ ಕತೆ ಹೊಂದಿದೆ. ಯೂ ಟರ್ನ್ ಮತ್ತು ಒಂದು ಮೊಟ್ಟೆಯ ಕತೆ ಚಿತ್ರ ಬಿಟ್ಟರೆ ನ್ಯೂಯಾರ್ಕ್ ವರ್ಲ್ಡ್ ಪ್ರೀಮಿಯರ್ನಲ್ಲಿ ಪ್ರದರ್ಶನಗೊಂಡ ಮೂರನೇ ಚಿತ್ರ ಗಂಟುಮೂಟೆ. ಈ ಚಿತ್ರ ಅಲ್ಲಿ ಪ್ರದರ್ಶನಗೊಂಡಿದ್ದು ಮಾತ್ರವಲ್ಲದೆ, ದೊಡ್ಡ ಸಿನಿಮಾಗಳ ನಡುವೆಯೂ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಯನ್ನೂ ಪಡೆದಿದೆ. ಹೀಗೆ ಚಿತ್ರಕತೆಗೆ ಅವಾರ್ಡು ಪಡೆದ ಮೊಟ್ಟ ಮೊದಲ ಕನ್ನಡ ಸಿನಿಮಾ ಕೂಡಾ ಆಗಿದೆ. ಕೆನಡಾ, ಮೆಲ್ಬರ್ನ್, ರೋಮ್ ಸೇರಿದಂತೆ ಹಲವಾರು ಕಡೆ ಗಂಟುಮೂಟೆಯ ಸ್ಕ್ರೀನಿಂಗ್ ಆಗಿದೆ. ಇದೇ ಅಕ್ಟೋಬರ್ ೧೮ರಂದು ಗಂಟುಮೂಟೆ ಕರ್ನಾಟಕದಲ್ಲೂ ಬಿಡುಗಡೆಯಾಗುತ್ತಿದೆ.

ಸದ್ಯ ನಟಿ ಶ್ರದ್ಧಾ ಶ್ರೀನಾಥ್ ಅವರು ಗಂಟುಮೂಟೆ ಚಿತ್ರದ ಟ್ರೇಲರನ್ನು ತಮ್ಮದೇ ಆನ್ಲೈನ್ ಪೇಜ್ನಲ್ಲಿ ರಿಲೀಸ್ ಮಾಡಿದ್ದಾರೆ. ಬಹುತೇಕ ಹೊಸಬರ ತಂಡ ಸೇರಿ ರೂಪಿಸಿರುವ ಈ ಚಿತ್ರದಲ್ಲಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಬೆಳವಾಡಿ ಹೈಸ್ಕೂಲು ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ತೇಜು ಬೆಳವಾಡಿ ಅಭಿನಯದ ಮೊದಲ ಚಿತ್ರ ಕೂಡಾ ಆಗಿದೆ. ನಿರ್ದೇಶಕಿ ರೂಪಾ ರಾವ್ ಮೂಲತಃ ಇನ್ಫೋಸಿಸ್ನಲ್ಲಿ ಉದ್ಯೋಗಿಯಾಗಿದ್ದವರು. ಆರೇಳು ವರ್ಷಗಳ ಕಾಲ ಕೆಲಸ ನಿರ್ವಹಿಸಿ ನಂತರ ನ್ಯೂಯಾರ್ಕ್ನಲ್ಲೂ ನೆಲೆಸಿದ್ದರು.

ರೂಪಾ ರಾವ್ ಅವರಿಗೆ ತೀರಾ ಸಣ್ಣ ವಯಸ್ಸಿನಿಂದಲೇ ಸಿನಿಮಾ ಸೆಳೆತವಿತ್ತು. ಸ್ನೇಹಿತರೊಂದಿಗೆ ಸೇರಿದಾಗ ಯಾವುದೇ ಒಂದು ಕತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಮತ್ತು ಸ್ವತಃ ಕತೆಗಳನ್ನು ಬರೆಯುವ ಕಲೆ ರೂಪಾ ಅವರಿಗೆ ಸಿದ್ಧಿಸಿತ್ತು. ಹೀಗಿರುವಾಗ ನಾನ್ಯಾಕೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಬಾರದು ಎಂಬ ಬಯಕೆ ರೂಪಾರ ಮನಸ್ಸಿನಲ್ಲಿ ಗರಿಗೆದರಿತ್ತು. ಒಂದು ವೇಳೆ ತಾನು ಬಯಸಿದ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳದಿದ್ದರೆ ಮುಂದೊಂದು ದಿನ ‘ನಾನು ಇಷ್ಟಪಟ್ಟಿದ್ದನ್ನು ಮಾಡಲಿಲ್ಲವಲ್ಲಾ’ ಅಂತಾ ಕೊರಗುವಂತಾಗಬಾರದು ಎಂದು ತೀರ್ಮಾನಿಸಿದವರೇ ಇದ್ದ ಕೆಲಸ ಬಿಟ್ಟು ದೆಹಲಿಯ ಫಿಲ್ಮ್ ಸ್ಕೂಲೊಂದರಲ್ಲಿ ಒಂದು ವರ್ಷದ ಡೈರೆಕ್ಷನ್ ಕೋರ್ಸ್ ಮುಗಿಸಿದರು.

ನಂತರ ಲಂಡನ್ನ ಡಾಕ್ಯುಮೆಂಟರಿ ಸಿನಿಮಾ ನಿರ್ದೇಶಕರೊಬ್ಬರೊಂದಿಗೆ ಒಂದಿಷ್ಟು ಕೆಲಸ ಮಾಡಿದ್ದರು. ಅಲ್ಲಿಂದ ಕರ್ನಾಟಕಕ್ಕೆ ಬಂದವರೇ ಕಿಚ್ಚ ಸುದೀಪ ಅಭಿನಯದ ವಿಷ್ಣುವರ್ಧನ ಸಿನಿಮಾಗೆ ಕೋ ಡೈರೆಕ್ಟರ್ ಆಗಿಯೂ ಕೆಲಸ ನಿರ್ವಹಿಸಿದರು. ನಂತರ ತಮಿಳಿನ ಚಿತ್ರವೂ ಸೇರಿದಂತೆ ಇನ್ನೂ ಒಂದಿಷ್ಟು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ದಿ ಅದರ್ ಲವ್ ಸ್ಟೋರಿ ಎನ್ನುವ ವೆಬ್ ಸಿರೀಸ್ ನಿರ್ದೇಶಿಸಿದ ರೂಪಾ ರಾವ್ ಅವರಿಗೆ ಆ ವೆಬ್ ಸರಣಿ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಆರೇಳು ಕೋಟಿ ವೀಕ್ಷಣೆಯನ್ನು ಪಡೆದಿರುವ ಆ ಸಿರೀಸ್ ಹಲವಾರು ಪ್ರಶಸ್ತಿಗಳನ್ನೂ ರೂಪಾ ಅವರಿಗೆ ಕೊಡಮಾಡಿತು.

ಮೈಸೂರ್ ಟಾಕೀಸ್ ಅರ್ಪಿಸಿರುವ ‘ಗಂಟುಮೂಟೆ’ ಚಿತ್ರವನ್ನು ರೂಪಾ ಅವರ ಸ್ನೇಹಿತರೆಲ್ಲಾ ಸೇರಿ ಕ್ರೌಡ್ ಫಂಡಿಂಗ್ ಮೂಲಕ ನಿರ್ಮಿಸಿದ್ದಾರೆ. ಹೈಸ್ಕೂಲ್ ಹುಡುಗಿಯೊಬ್ಬಳ ಮೊದಲ ಲವ್ ಮತ್ತದರ ಸುತ್ತ ನಡೆಯುವ ಕತೆ ಈ ಚಿತ್ರದ್ದಾಗಿದೆ. ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಸಾಕಷ್ಟು ಮೈಲಿಗಲ್ಲುಗಳನ್ನು ಸೃಷ್ಟಿಸಿರುವ ರೂಪಾ ಕನ್ನಡ ಚಿತ್ರರಂಗದಲ್ಲಿ ಉತ್ತಮ ಮಹಿಳಾ ನಿರ್ದೇಶಕಿಯಾಗಿ ನಿಲ್ಲುವ ಎಲ್ಲ ಸಾಧ್ಯತೆಗಳಿವೆ.
https://youtu.be/CY5c2VNaI2s