ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು, ಪಡಬಾರದ ಪಾಡು ಪಟ್ಟು ಸಿನಿಮಾ ನಿರ್ಮಿಸುವ ನಿರ್ಮಾಪಕರು, ಜೀವವನ್ನೇ ಬಸಿದು ನಿರ್ದೇಶಿಸಿರುವ ಡೈರೆಕ್ಟರುಗಳು ಒಂದು ಕಡೆ ಒದ್ದಾಡುತ್ತಿದ್ದರೆ, ದುಡ್ಡಿನಾಸೆಗೆ ಕನ್ನಡ ಚಿತ್ರಗಳನ್ನು ಪೈರಸಿ ಮಾಡಿ, ನಿರ್ಮಾಪಕರನ್ನು ಹಿಂಡುತ್ತಿರುವ ಪೈಶಾಚಿಕ ಪ್ರವೃತ್ತಿ ಕೆಲವರದ್ದು.
‘ಪೈಲ್ವಾನ್ ಸಿನಿಮಾ ನೋಡಿದ್ರಾ? ಅಂದರೆ ‘ಹೋ.. ಆನ್ಲೈನಲ್ಲಿ ಒಳ್ಳೇ ಪ್ರಿಂಟೇ ಬಿಟ್ಟಿದಾರೆ… ಅಂತಾ ಜನ ಮಾತಾಡುತ್ತಿದ್ದಾರೆ. ಇಂಥ ಮಾತನ್ನು ಕೇಳಿದರೆ ಜೀವ ತೇದು ಕೋಟಿಗಳಿಗೆ ಲೆಕ್ಕವಿಲ್ಲದಂತೆ ಖರ್ಚು ಮಾಡಿ ಸಿನಿಮಾ ಮಾಡಿದ ನಿರ್ಮಾಪಕನ ಎದೆಮೇಲೆ ಒದ್ದಂತಾಗೋದಿಲ್ಲವಾ?
ಹಿಂದೆಲ್ಲಾ ಪೈರಸಿ ಸಿಡಿ ಮಾಡುವವರನ್ನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಜಗ್ಗೇಶ್ ಮುಂತಾದವರು ಹುಡುಕಾಡಿ, ಇಟ್ಟಾಡಿಸಿ ಒದ್ದು ಪೊಲೀಸರ ಕೈಗೊಪ್ಪಿಸುತ್ತಿದ್ದರು. ಆದರೆ ಈಗ ಹುಟ್ಟಿಕೊಂಡಿರುವ ಆನ್ಲೈನ್ ಕಳ್ಳರನ್ನು ಹಿಡಿಯೋದಾದರೂ ಹೇಗೆ? ಇದರ ಹಿಂದಿರುವ ಕಾಣದ ಕೈಗಳ್ಯಾವುವು? ಶ್ರಮವಹಿಸಿ ತಯಾರು ಮಾಡಿದ ಸಿನಿಮಾದ ಮೊದಲ ಪ್ರತಿಯನ್ನು ಕದ್ದು ಮಾರಿಕೊಳ್ಳುತ್ತಿರುವ ಖದೀಮರು ಯಾರು? ಅದು ಸಿನಿಮಾಗೆ ಸಂಬಂಧಿಸಿದ ತಂತ್ರಜ್ಞರಿಂದಲೇ ಲೀಕ್ ಆಗುತ್ತಿದೆಯಾ? ಅಥವಾ ಯುಎಫ್ಓ ಕ್ಯೂಬ್ಗಳಿಗೆ ಕೊಟ್ಟಾಗ ಯಾರಾದರೂ ಇಳಿಸಿಕೊಳ್ಳುತ್ತಿದ್ದಾರಾ? ಹೀಗೆ ನಾನಾ ಪ್ರಶ್ನೆಗಳು ಎದ್ದಿವೆ.
ಇವತ್ತಿಗಾದರೂ ಹ್ಯಾಕ್ ಮಾಡಿ ಕದ್ದರು ಅನ್ನಬಹುದು. ವರ್ಷಾಂತರಗಳ ಹಿಂದೆಯೂ ಕಳ್ಳ ಸಿಡಿ ಮಾಡುವವರಿಗೆ ಸಿನಿಮಾ ಸಿಗುತ್ತಿತ್ತಲ್ಲಾ? ಅದನ್ನು ಯಾರು ಮಾಡುತ್ತಿದ್ದರು. ಪೈರಸಿ ಸೀಡಿಗೆ ಸಂಪೂರ್ಣ ಕಡಿವಾಣ ಬಿತ್ತು ನೋಡಿ, ಆವತ್ತಿಂದ ಈ ಕಳ್ಳ ಕಸುಬು ಮಾಡುವವರ ಕೈ ಕಡಿಯುತ್ತಿತ್ತು. ಈಗ ಅದೇ ಮಂದಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವವರಿಗೆ ಮೆಟೀರಿಯಲ್ಲು ಒದಗಿಸುತ್ತಿದ್ದಾರೆ.
ಸಿನಿಮಾ ಮುಕ್ತಾಯಗೊಂಡಮೇಲೆ ಸಂಕಲನ ಮತ್ತು ಡಿ.ಐ. ಕೇಂದ್ರಗಳಿಂದಷ್ಟೇ ಅದರ ಪ್ರತಿ ಹೊರಬರೋದು. ಇವರು ಕೊಟ್ಟ ಹಾರ್ಡ್ ಡಿಸ್ಕ್ಅನ್ನೇ ಚಿತ್ರತಂಡದವರು ತೆಗೆದುಕೊಂಡು ಹೋಗಿ ಚೆನ್ನೈನಲ್ಲಿ ಯುಎಫ್ಓ, ಕ್ಯೂಬ್ಗಳಿಗೆ ಅಪ್ಲೋಡ್ ಮಾಡಿಸಿ ಬರುತ್ತಾರೆ. ಅಲ್ಲಿ ನಿರ್ಮಾಪಕರ ಮುಂದೆಯೇ ನಾಲ್ಕಾರು ಫಾರ್ಮಾಲಿಟಿಗಳನ್ನು ಮುಗಿಸಿಯೇ ಕಾಪಿ ಮಾಡಿಕೊಂಡು, ಅಲ್ಲೇ ಹಾರ್ಡ್ ಡಿಸ್ಕ್ ವಾಪಾಸು ಕೊಟ್ಟುಬಿಡುತ್ತಾರೆ. ಹಾಗಾದರೆ ಇನ್ನೆಲ್ಲಿಂದ ಸಿನಿಮಾ ಕಳ್ಳಸಾಗಾಣಿಕೆಯಾಗುತ್ತಿದೆ ಅನ್ನೋದು ಚಿತ್ರೋದ್ಯಮದ ಮಂದಿಯ ತಲೆಗೆ ಹುಳಾ ಬಿಟ್ಟಿರುವ ಪ್ರಶ್ನೆ!
ಸೆನ್ಸಾರ್ ಕಾಪಿ ಲೀಕ್ ಆಗಿದೆ ಅಂತಾ ಕೆಲವರು ಆರೋಪಿಸುತ್ತಾರೆ. ಸೆನ್ಸಾರ್ ಮಂಡಳಿಯ ಸದಸ್ಯರು ವೀಕ್ಷಿಸಲು ಖಾಸಗಿ ಸ್ಟುಡಿಯೋಗಳಲ್ಲಿ ವ್ಯವಸ್ಥೆ ಮಾಡಿ, ಸಿನಿಮಾದ ಮೇಲೆ ‘ಸೆನ್ಸಾರ್ ಕಾಪಿ ಎಂದು ನಮೂದಿಸಿರುತ್ತಾರೆ. ಅದನ್ನು ಕೂಡಾ ಸಿನಿಮಾ ತಂಡದವರ ಮುಂದೆಯೇ ಪ್ರೊಜೆಕ್ಷನ್ ಮಾಡಿ, ಅಲ್ಲಿಯೇ ಹಾರ್ಡ್ ಡಿಸ್ಕ್ ವಾಪಾಸು ಕೊಡುತ್ತಾರೆ. ‘ನಮ್ಮಿಂದ ಸಿನಿಮಾ ಲೀಕ್ ಆಗಲು ಸಾಧ್ಯವೇ ಇಲ್ಲ. ಒಂದು ವೇಳೆ ಅನುಮಾನಗಳಿದ್ದರೆ ನಮ್ಮನ್ನು ಯಾವುದೇ ರೀತಿಯ ತನಿಖೆಗೆ ಒಳಪಡಿಸಿ. ನಾವು ಸಹಕರಿಸುತ್ತೇವೆ ಎಂದು ಖಾಸಗಿ ಸ್ಟುಡಿಯೋವೊಂದರ ಪ್ರೊಜೆಕ್ಷನ್ ಡಿಪಾರ್ಟ್ಮೆಂಟಿನ ತಂತ್ರಜ್ಞರು ‘ಸಿನಿಬಜ಼್ಗೆ ತಿಳಿಸಿದ್ದಾರೆ.
ಹಾಗಾದರೆ ಇದೇ ಮಾತನ್ನು ಸಿನಿಮಾದ ಸಂಕಲನಕಾರರು ಮತ್ತು ಡಿಐ ಟೆಕ್ನಿಷಿಯನ್ನುಗಳು ಹೇಳುತ್ತಾರಾ? ಕೇಳಿನೋಡಬೇಕು!
ಬಹಳ ಹಿಂದಿನಿಂದಲೂ ಕೆಲವು ಸಿನಿಮಾ ಎಡಿಟರುಗಳ ಮೇಲೆ ಈ ರೀತಿ ಪೈರಸಿ ಮಾಡುವವರಿಗೆ ಮಾರಿಕೊಳ್ಳುತ್ತಾರೆ ಎನ್ನುವ ಆರೋಪವಿದೆ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಇವತ್ತು ಕನ್ನಡ ಚಿತ್ರರಂಗದ ಕೆಲವು ಸಂಕಲನಕಾರರು ತಮ್ಮ ವರಮಾನವನ್ನು ಮೀರಿಸುವ ಆಸ್ತಿ ಅಂತಸ್ತು ಮಾಡಿಕೊಂಡಿದ್ದಾರೆ. ಎಲ್ಲ ಸಂಕಲನಕಾರರನ್ನೂ ಒಂದೇ ತಕ್ಕಡಿಗೆ ಹಾಕೋದು ತಪ್ಪಾಗುತ್ತದೆ. ಆದರೆ ಇಲ್ಲಿ ಕೆಲವರ ಬಗೆಗಷ್ಟೇ ಹೇಳಲಾಗುತ್ತಿದೆ. ನಿರ್ಮಾಪರು ಇವರನ್ನು ನಂಬಿ ಒಮ್ಮೆ ಅವರ ಕೈಗೆ ಸಿನಿಮಾ ಒಪ್ಪಿಸುತ್ತಾರೆ. ಆರಂಭದಲ್ಲಿ ರಂಗುರಂಗಿನ ಮಾತಾಡಿ ಆಮೇಲಾಮೇಲೆ ಇವರುಗಳು ಆಡುವ ಆಟವಿದೆಯಲ್ಲಾ? ಸಿ.ಜಿ., ಡಿ.ಐ., ಸ್ಪೆಷಲ್ ಎಫೆಕ್ಟು ಸೇರಿದಂತೆ ಪ್ರತಿಯೊಬ್ಬರ ಬಳಿಯೂ ಕಮಿಷನ್ನಿಗೆ ನಿಲ್ಲುತ್ತಾರೆ. ಛಾಯಾಗ್ರಾಹಕರೊಂದಿಗೆ ಕೈ ಮಿಲಾಯಿಸುತ್ತಾರೆ. (ಸಿನಿಮಾರಂಗದಲ್ಲಿ ಕಮಿಷನ್ ವ್ಯವಹಾರ ಎಲ್ಲಿಂದ ಶುರುವಾಗಿ ಎಲ್ಲಿಗೆ ಮುಕ್ತಾಯವಾಗುತ್ತದೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಸರಣಿಯನ್ನು ಇಷ್ಟರಲ್ಲೇ ಸಿನಿಬಜ಼್ ಆರಂಭಿಸುತ್ತದೆ)
ಇಂಥ ಸಂಕಲನಕಾರರು ದೊಡ್ಡ ಮೊತ್ತ ಕೈ ಸೇರುತ್ತದೆ ಅಂದರೆ, ತಮ್ಮಲ್ಲಿರುವ ಒರಿಜಿನಲ್ ಪ್ರತಿಯ ಮೇಲೆ ಯಾವುದಾದರೊಂದು ‘ಕಾಪಿ ಅಂತಾ ನಮೂದಿಸಿ, ಅದನ್ನೇ ವಂಚಕರ ಕೈಗಿಡುತ್ತಿರಬಹುದಲ್ಲವಾ? ಒಂದು ಮೂಲದ ಪ್ರಕಾರ ಒಬ್ಬ ಸ್ಟಾರ್ ನಟನ ಸಿನಿಮಾವನ್ನು ಕಾಪಿ ಮಾಡಿಕೊಟ್ಟರೆ ಎಪ್ಪತ್ತೈದು ಲಕ್ಷ ರುಪಾಯಿಗಳ ತನಕದ ದುಡ್ಡು ಒಂದೇ ಏಟಿಗೆ ಕೈಸೇರುತ್ತದಂತೆ. ಅಲ್ಲಿಗೆ ನಿರ್ಮಾಪಕರು ಕೊಡೋ ಇಪ್ಪತ್ತುಪಟ್ಟು ಹಣ ಒಮ್ಮೆಲೇ ಸಿಕ್ಕಂತಾಗುತ್ತದಲ್ಲಾ?
ಇಂಥ ಅನುಮಾನಗಳು ಬಗೆಹರೆಯಬೇಕೆಂದರೆ ಈ ವಿಚಾರವಾಗಿ ಕಟ್ಟುನಿಟ್ಟಿನ ತನಿಖೆಯಾಗಬೇಕು. ಅದಕ್ಕೆ ತಂತ್ರಜ್ಞರ ಸಹಕಾರ ಅಗತ್ಯ. ಎಲ್ಲರೂ ಕಳ್ಳರಲ್ಲ ನಿಜ. ಆದರೆ ಇರುವ ಒಬ್ಬಿಬ್ಬರು ವಂಚಕರು ಸಿಗೇಬೀಳಬೇಕೆಂದರೆ ಉಳಿದವರ ಸಹಕಾರ ಅತ್ಯಗತ್ಯ. ಇವತ್ತು ಯಾರೆಲ್ಲಾ ತಂತ್ರಜ್ಞರು ತಮ್ಮ ವರಮಾನ, ಬಳುವಳಿಗಳನ್ನು ಮೀರಿ ಆಸ್ತಿ ಮಾಡಿದ್ದಾರೆ? ಅದರ ಮೂಲ ಯಾವುದು ಅಂತಾ ಹುಡುಕಿದರೂ ಸಾಕು ಕನ್ನಡ ಚಿತ್ರರಂಗಕ್ಕೆ ಕಂಟಕಪ್ರಾಯರಾಗಿರುವ ಕಳ್ಳರು ಸಿಕ್ಕಿಬಿಡುತ್ತಾರೆ!
ಸ್ಟಾರ್ ನಟರ ಮತ್ತು ಹಿಟ್ ಸಿನಿಮಾಗಳಿಗೆ ಹೆಚ್ಚು ಬೇಡಿಕೆ!
ಸುದೀಪ್, ದರ್ಶನ್, ಜಗ್ಗೇಶ್, ಶಿವಣ್ಣ, ಪುನೀತ್, ಉಪೇಂದ್ರ, ಯಶ್, ದುನಿಯಾ ವಿಜಯ್, ಮತ್ತು ಶ್ರೀಮುರಳಿ, ಧೃವಾ ಸರ್ಜಾರಂಥ ನಟರ ಸಿನಿಮಾಗಳು ಹೆಚ್ಚು ಪೈರಸಿಗಳಾಗುತ್ತವೆ. ಅದರಲ್ಲೂ ದರ್ಶನ್ ನಟಿಸಿರುವ ಸಿನಿಮಾಗಳೇ ಹೆಚ್ಚು ಪೈರಸಿ ಬಾಯಿಗೆ ಆಹಾರವಾಗಿರುವುದು. ಚಕ್ರವರ್ತಿ, ಯಜಮಾನ, ಕುರುಕ್ಷೇತ್ರ ಸೇರಿದಂತೆ ಕೆಲವು ಸಿನಿಮಾ ರಿಲೀಸಾಗಿ ದಿನ ಕಳೆಯೋ ಹೊತ್ತಿಗೆ ಲೀಕ್ ಆಗಿಬಿಟ್ಟಿದ್ದವು. ಈಗ ಸುದೀಪ್ ಅವರ ಪೈಲ್ವಾನ್ ಎಲ್ಲೆಲ್ಲೂ ಹರಿದಾಡುತ್ತಿದೆ. ಇನ್ನಾದರೂ ಚಿತ್ರರಂಗ ಎಚ್ಚೆತ್ತುಕೊಳ್ಳದಿದ್ದರೆ, ಕನ್ನಡ ಸಿನಿಮಾರಂಗದ ಕತೆ ಮುಗಿದಂತೆ!
ರಿಷಬ್ ಶೆಟ್ಟಿ ಎಗ್ಗೆಗ್ಗರಿಸಿ ಒದ್ದಿದ್ದರು!
ಒಂದು ವಿಡಿಯೋ ರಿಲೀಸಾಗಿತ್ತು. ಅದು ಸಿನಿಮಾ ದೃಶ್ಯವಾಗಿರಲಿಲ್ಲ. ಥೇಟು ಥ್ರಿಲ್ಲರ್ ಮಂಜು ಅವರ ಆಕ್ಷನ್ ಸಿನಿಮಾದ ಹೀರೋ ಥರಾ ಎಗ್ಗೆಗ್ಗರಿಸಿ ಒದೆಯೋ ದೃಷ್ಯದಲ್ಲಿ ಇದ್ದಿದ್ದು ‘ಕಿರಿಕ್ ಪಾರ್ಟಿ’ ನಿರ್ದೇಶಕ ರಿಷಬ್ ಶೆಟ್ಟಿ. ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಳ್ಳುತ್ತಿದ್ದಂತೇ ಈ ಚಿತ್ರದ ಪೈರಸಿ ಎಲ್ಲೆಡೆ ಮಾರಾಟವಾಗುತ್ತಿತ್ತು. ರಾಜರಾಜೇಶ್ವರಿ ನಗರದ ಫುಟ್ ಪಾತ್ ಸೀಡಿ ವ್ಯಾಪಾರಿ ಕೂಡಾ ಕಿರಿಕ್ ಪಾರ್ಟಿ ಚಿತ್ರದ ಸೀಡಿ ಮಾರಾಟ ಮಾಡುತ್ತಿರುವ ವಿಚಾರ ಸ್ವತಃ ರಿಷಬ್ ಗಮನಕ್ಕೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ಟೀಮಿನ ಸಮೇತ ರೇಡುಬಿದ್ದಿದ್ದರು ರಿಷಬ್. ಸಿಡಿ ವ್ಯಾಪಾರಿ ಇವರು ಕಿರಿಕ್ ಪಾರ್ಟಿಯವರು ಅನ್ನೋದು ಗೊತ್ತಾಗದೆ ‘ಕಿರಿಕ್ ಪಾರ್ಟಿ ಇದೆ. ಬೇಕಿದ್ರೆ ರಾಮಾ ರಾಮಾರೇ’ನೂ ಕೊಡ್ತೀನಿ’ ಎಂದಿದ್ದ. ತಕ್ಷಣ ವ್ಯಘ್ರಗೊಂಡ ರಿಷಬ್ ಲೈಡ್ ಲೈಡ್ ಅಂತಾ ಆತನಿಗೆ ಬಾರಿಸಿ, ಆತ ಜೋಡಿಸಿಟ್ಟುಕೊಂಡಿದ್ದ ಸೀಡಿಗಳನ್ನೆಲ್ಲಾ ಒದ್ದೊದ್ದು ರಸ್ತೆಗೆ ಕೆಡವಿದ್ದರು. ಕಡೆಗೆ ಆತನನ್ನು ಕರೆದೊಯ್ದು ಪೊಲೀಸ್ ಸ್ಟೇಷನ್ ಬಾಗಿಲಿಗೂ ಬಿಟ್ಟುಬಂದಿದ್ದರು!
ಬೆಟ್ಟ ಬಗೆದು ಇಲಿ ಹಿಡಿದಂತಾಗಬಾರದು!
ಮೊನ್ನೆದಿನ ಯಾರೋ ಪುಡಿ ಹುಡುಗನನ್ನು ಸಿಸಿಬಿ ಪೊಲೀಸರು ಬಂಧಿಸಿದರಲ್ಲಾ? ದರ್ಶನ್ ಅಭಿಮಾನಿ ಎಂದು ಹೇಳಲಾದ ಈ ಹುಡುಗ ಮಾಡಿದ ತಪ್ಪೆಂದರೆ ಪೈರಸಿ ಲಿಂಕ್ ಅನ್ನು ತನ್ನ ಫೇಸ್ಬುಕ್ಕಲ್ಲಿ ಶೇರ್ ಮಾಡಿದ್ದು. ಇದು ಅಪರಾಧಕ್ಕೆ ಕುಮ್ಮಕ್ಕು ನೀಡುವ ಕೆಲಸ ನಿಜ. ಆದರೆ ನೀರಿನ ಉಗಮಸ್ಥಾನವನ್ನು ಕಂಡುಹಿಡಿಯಬೇಕಾದರವರು ಸಮುದ್ರದ ಬಳಿ ಹೋಗಿ ತಡಕಾಡುವಂತಾಗಬಾರದು ಅಲ್ಲವೇ? ಕರೆಕ್ಟಾಗಿ ತನಿಖೆ ಮಾಡಿ, ಹುಡುಕಿ ಬುಡಕ್ಕೆ ಬಿಸಿನೀರು ಎರಚಿದರೆ ಅಸಲೀ ಕಳ್ಳ ಯಾರು ಅಂತಾ ಗೊತ್ತಾಗುತ್ತದೆ. ಅದು ಬಿಟ್ಟು ಬೆಟ್ಟ ಬಗೆದು ಇಲಿ ಹಿಡಿದರೇನು ಪ್ರಯೋಜನ?
ಚಾನೆಲ್ಲುಗಳ ತಂತ್ರ ಹೀಗಿತ್ತು!
ಸ್ಟಾರ್ ನಟನ ಸಿನಿಮಾವೊಂದರ ಟಿವಿ ರೈಟ್ಸ್ಗೆ ಐದು ಕೋಟಿ ಕೋಟಿಗೆ ಮಾತುಕತೆ ಆಗಿತ್ತು ಅಂತಿಟ್ಟುಕೊಳ್ಳಿ. ಇನ್ನೇನು ವ್ಯವಹಾರ ಸೆಟಲ್ಮೆಂಟಿನ ಹೊತ್ತಿಗೆ ಖುದ್ದು ಟಿವಿ ವಾಹಿನಿಯವರನ್ನು ಕರೆಸಿ, ತಮ್ಮ ಟೇಬಲ್ಲಿನಲ್ಲಿರುವ ಸಿಡಿ ತೋರಿಸಿ ‘ನೋಡಿ ನಿಮ್ಮ ಸಿನಿಮಾ ಲೀಕ್ ಆಗಿಬಿಟ್ಟಿದೆ. ಇನ್ನು ಇದಕ್ಕೆ ವ್ಯಾಲ್ಯೂ ಇಲ್ಲ. ಕೊಡೋದಿದ್ದರೆ ಮಾತಾಡಿದ್ದರಲ್ಲಿ ಅರ್ಧ ಬೆಲೆಗೆ ತೆಗೆದುಕೊಳ್ಳಬಹುದು. ನಾವು ಟೀವಿಯಲ್ಲಿ ಹಾಕಿ ಅದರಿಂದ ದುಡ್ಡು ವಾಪಾಸು ಎತ್ತೋದು ಕಷ್ಟ. ಅಷ್ಟರಲ್ಲಿ ಜನ ಪೈರಸಿ ನೋಡಿಬಿಟ್ಟಿರುತ್ತಾರೆ ಎನ್ನುತ್ತಿದ್ದಂತೇ ನಿರ್ಮಾಪಕರ ಕೈಕಾಲು ಅದುರಿಹೋಗುತ್ತಿದ್ದವು. ಹೇಗಾದರೂ ಮಾಡಿ ಅಂತಾ ಆ ಮನರಂಜನಾ ವಾಹಿನಿಯ ಮುಖ್ಯಸ್ಥನಿಗೆ ಮಸ್ಕಾ ಹೊಡೆದು, ಆತನ ಕೈ ಬೆಚ್ಚಗೆ ಮಾಡುತ್ತಿದ್ದರು. ಹೀಗೆ ನಡೆದ ಎಷ್ಟೋ ನಿದರ್ಶನಗಳಿವೆ. ಇನ್ನು ಸಿನಿಮಾ ಖರೀದಿಸುವ ಏಜೆಂಟರೇ ತಾವೇ ಪೈರಸಿ ಮಾಡಿಸಿ ಸಿನಿಮಾದ ಮಾರುಕಟ್ಟೆ ಕೆಡಿಸಿದ ಉದಾಹರಣೆಗಳಿವೆ. ಇಂಥ ವಂಚನಾ ವೃತ್ತಾಂತಗಳ ಬಗ್ಗೆ ಬರೆದಷ್ಟೂ ಮಾಹಿತಿಗಳಿವೆ..
No Comment! Be the first one.