ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ತೆರೆಗೆ ಬಂದಿದೆ.  ಈ ಚಿತ್ರದಲ್ಲಿ ಗಣೇಶ್ ಕನ್ನಡ ಮತ್ತು ಕರ್ನಾಟಕದ ಪರ ದನಿ ಎತ್ತಿದ್ದಾರೆ. ಗೋಕಾಕ್ ಚಳವಳಿಯನ್ನು ಮರುಸೃಷ್ಟಿಸಲಾಗಿದೆ. ಸಂತೋಷ್ ಆನಂದ್ ರಾಮ್ ಅವರ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ವಿಜಯ್ ನಾಗೇಂದ್ರ ನಿರ್ದೇಶನದ ಮೊದಲ ಸಿನಿಮಾ- ಹೀಗೆ ಇತ್ಯಾದಿ ಕಾರಣಗಳಿಗಾಗಿ ಕುತೂಹಲ ಮೂಡಿಸಿದ್ದ ಚಿತ್ರ ಗೀತಾ.

80ರ ದಶಕ, ಆವತ್ತು ಕನ್ನಡ, ಕನ್ನಡತನವನ್ನು ಉಳಿಸಿಕೊಳ್ಳಲು ಈ ನೆಲದಲ್ಲೇ ಎದುರಾಗಿದ್ದ ಪ್ರತಿರೋಧಗಳು, ಆ ಹೊತ್ತಿನ ತಲ್ಲಣಗಳ ಮೂಲಕ ಕಥೆ ಆರಂಭಗೊಳ್ಳುತ್ತದೆ. ಅದರ ಜೊತೆಗೇ ಜಾತಿ, ಭಾಷೆಗಳನ್ನು ಮೀರಿದ ಪ್ರೇಮ ಕಥಾನಕವೂ ತೆರೆದುಕೊಳ್ಳುತ್ತದೆ. ಕನ್ನಡಕ್ಕಾಗಿ ನುಗ್ಗಿ ಬಡಿದಾಡುವ ಹುಡುಗ ಶಂಕರ್. ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಬದುಕಲು ಅದೇ ಭಾಷೆ, ಪ್ರೀತಿಸಿದವಳ ಮನೆಯವರ ಭಾಷಾಂಧತೆ ಅಡ್ಡಿಯಾಗುತ್ತದೆ. ಮತ್ತಿನ್ಯಾವತ್ತೋ ಇಷ್ಟಪಟ್ಟವಳು ಎದುರಾಗುತ್ತಾಳೆ. ಅದರೆ ಪರಿಸ್ಥಿತಿಯ ಸಂದಿಗ್ಧತೆಗೆ ಸಿಲುಕಿ, ಅನಿವಾರ್ಯವಾಗಿ ತನ್ನೊಟ್ಟಿಗಿದ್ದ ಗೆಳತಿಯನ್ನೇ ಮದುವೆಯಾಗುತ್ತಾನೆ. ಕೈ ಹಿಡಿಯುವ ಕನಸು ಹೊತ್ತು ಬಂದವಳು ಬರಿಗೈಲಿ ವಾಪಾಸಾಗುತ್ತಾಳೆ. ಕಥೆ ಇವತ್ತಿನ ಕಾಲಘಟ್ಟಕ್ಕೆ ಹೊರಳಿಕೊಳ್ಳುತ್ತದೆ. ಕನ್ನಡದ ಕಲಿ ಶಂಕರನ ಮಗ ಆಕಾಶ್ ಸಾಫ್ಟ್ ವೇರ್ ಉದ್ಯೋಗಿ. ಅನಿವಾರ್ಯತೆಗೆ ಜೋತು ಬಿದ್ದು ಜೊತೆಯಾದ ತಂದೆ ತಾಯಿಯ ಮನಸ್ಥಿತಿ ಒಂದಾಗದೆ ಬೇರೆಯಾಗಿರುತ್ತಾರೆ. ಹೀಗಿರುವಾಗ ಆಕಾಶನ ಇಕ್ಕೆಲೆಗಳಲ್ಲೂ ಹುಡುಗಿಯರು. ಒಬ್ಬಳು ಪ್ರಿಯಾ. ಈತನ ಕುಟುಂಬವನ್ನು ಒಂದು ಮಾಡಿ, ಆ ಮೂಲಕ ಆಕಾಶನ ಕೈ ಹಿಡಿಯುವ ಕನಸು ಕಂಡವಳು. ಮತ್ತೊಬ್ಬಳು ಗೀತಾ. ಮದುವೆಯಾಗುವ ಹುಡುಗನ ಮನೆ, ಮನಸ್ಥಿತಿಗೆ ತಕ್ಕಂತೆ ರಾಜಿಯಾಗಲು ಒಪ್ಪದೆ ಅದಾಗಲೇ ನಿಶ್ಚಿತವಾದ ಮದುವೆಯನ್ನು ಮುರಿದುಕೊಂಡವಳು. ಇವೆಲ್ಲದರ ಜೊತೆಗೆ ತನ್ನಪ್ಪನಿಂದ ದೂರಾಗಿ ಅವನ ನೆನಪಲ್ಲೇ ಜೀವಿಸುತ್ತಿರುವ ಗೀತಾಂಜಲಿ ಕೂಡಾ ಅಚಾನಕ್ಕಾಗಿ ಆಕಾಶನ ಸಂಪರ್ಕಕ್ಕೆ ಬರುತ್ತಾಳೆ. ಎದುರಾಗುವ ಸಂದರ್ಭಗಳ ಜೊತೆ ರಾಜಿಯಾಗಿ ಆದಂಗಾಗಲಿ ಅಂತಾ ಪ್ರಿಯಾಳ ಜೊತೆ ಸಂಸಾರ ಶುರು ಮಾಡುತ್ತಾನಾ? ಮನಸಿಗೊಪ್ಪಿದ ಗೀತಾಳನ್ನು ಅಪ್ಪುತ್ತಾನಾ ಅನ್ನೋದು ಕಡೇ ಘಳಿಗೆಯವರೆಗೂ ಕಾಡುವ ಪ್ರಶ್ನೆ. ಸ್ನೇಹವಿಲ್ಲದ ಬದುಕು ಬದುಕಲ್ಲ. ಪ್ರೀತಿಯಿಲ್ಲದವರ ಜೊತೆ ಬದುಕಲು ಸಾಧ್ಯವಿಲ್ಲ ಅನ್ನೋದು ಗೀತಾ ಚಿತ್ರದ ಪ್ರಧಾನ ಅಂಶ.

ಗೋಲ್ಡನ್ ಸ್ಟಾರ್ ಗಣೇಶ್ ಎರಡು ಪಾತ್ರ, ಎರಡು ಶೇಡ್ ಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಕನ್ನಡಪರ ಹೋರಾಟಗಾರನಾಗಿ ಮಾತಾಡುತ್ತಿದ್ದರೆ ನೋಡುತ್ತಿದ್ದವರ ರೋಮಗಳು ಎದ್ದುನಿಲ್ಲುತ್ತವೆ. ಲವರ್ ಬಾಯ್ ಪಾತ್ರದಲ್ಲಿ ಮನಸೂರೆ ಮಾಡುತ್ತಾರೆ. ಮೂವರು ನಾಯಕಿಯರೂ ನಟನೆಯಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನೀಡಿದ್ದಾರೆ. ನಿರ್ದೇಶಕ ವಿಜಯ್ ನಾಗೇಂದ್ರ ಆನಂದರಾಮ್ ಗರಡಿಯಿಂದ ಬಂದವರಾಗಿರುವುದರಿಂದ, ಸಹಜವಾಗೇ ಅಸಹಾಯಕ ಮಕ್ಕಳಿಗಾಗಿ ತುಡಿಯುವ, ಪ್ರೀತಿಗಾಗಿ ಹಂಬಲಿಸುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ‌ ಮತ್ತು ಅದನ್ನು ಸಮರ್ಥವಾಗಿ ಪ್ರೇಕ್ಷಕರೆದೆಗೆ ಧಾಟಿಸುವಲ್ಲೂ ಗೆದ್ದಿದ್ದಾರೆ. ಪ್ರೇಕ್ಷಕರ ಹೃದಯವನ್ನು ಭಾವತೀವ್ರತೆಗೆ ಒರಗಿಸುವಲ್ಲಿಯೂ ಸಫಲರಾಗಿದ್ದಾರೆ.

ಗೀತಾ ಚಿತ್ರದ ಛಾಯಾಗ್ರಹಣ, ಆ ದಿನಗಳನ್ನು ಮರುಸೃಷ್ಟಿಸಿರುವ ಕ್ರಿಯಾಶೀಲತೆ ಎಲ್ಲವೂ ಕಣ್ಮನ ಸೆಳೆಯುತ್ತದೆ. ನಿರ್ದೇಶಕರೇ ಬರೆದಿರುವ ಕಥೆ, ಚಿತ್ರಕಥೆಯಲ್ಲಿ ಧಮ್ಮಿದೆ. ನಾಗೇಂದ್ರ ಬಿ.ಎಂ ಸಂಭಾಷಣೆಯಲ್ಲಿ ತೊಡೆ ತಟ್ಟುವ ತಾಕತ್ತಿದೆ. ಅನೂಪ್ ರುಬೆನ್ಸ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಶಿವಕುಮಾರ್, ವಿಶ್ವಾಸ್ ಕಶ್ಯಪ್ ಕಲಾ ನಿರ್ದೆಶನ, ವಿಜಯ್ ಮಾಸ್ಟರ್ ಹಾಗೂ ವಿನೋದ್ ಸಾಹಸ ನಿರ್ದೇಶನ ಮತ್ತು ಭೂಷಣ ಅವರ ನೃತ್ಯ ನಿರ್ದೇಶನ ಎಲ್ಲವೂ ಗೀತಾ ಚಿತ್ರವನ್ನು ಶ್ರೀಮಂತಗೊಳಿಸಿದೆ. ಒಟ್ಟಾರೆಯಾಗಿ ಸಂಬಂಧಗಳು ಶಿಥಿಲವಾಗುತ್ತಿರುವ, ಸ್ನೇಹ ಬೆಲೆ ಕಳೆದುಕೊಳ್ಳುತ್ತಿರುವ ಇವತ್ತಿನ ದಿನಕ್ಕೆ ಗೀತಾ ಪ್ರೀತಿಯ ಸಾಂತ್ವನವನ್ನು ಸಾರಿದೆ. ಮನೆಮಂದಿಯೆಲ್ಲಾ ನೋಡಲೇಬೇಕಾದ ಕೆಚ್ಚದೆಯ ಕನ್ನಡ ಸಿನಿಮಾ ಗೀತಾ..

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತುಂಟ ತುಟಿಗಳ ಕಿತ್ತಾಟದ ನಡುವೆ ಕಿಸ್ ಕುದುರುತ್ತಾ?

Previous article

ಕನ್ನಡದ ಹಿರಿಮೆ ಹೆಚ್ಚಿಸಿದ ಮಹಿಳಾ ನಿರ್ದೇಶಕಿ!

Next article

You may also like

Comments

Leave a reply

Your email address will not be published. Required fields are marked *