ರಘು ಸಿಂಗಂ ಅವರ ನಿರ್ಮಾಣ ಹಾಗೂ ಸೂರ ಅವರ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಬಹು ನೀರಿಕ್ಷಿತ ‘ಗೌಳಿ’ ಚಿತ್ರ ಫೆಬ್ರವರಿ ೨೪ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಸಿನಿ ಪ್ರೇಮಿಗಳ ಹೃದಯ ಗೆದ್ದಿದೆ. ‘ಗೌಳಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿ ಜಾಲತಾಣದಲ್ಲಿ ಪ್ರಶಂಸೆ ಗಳಿಸಿದೆ. ಗೌಳಿಗರ ಜನಾಂಗಕ್ಕೆ ಸಂಬಂದಿಸಿದ ಕಥೆ ಒಳಗೊಂಡ ಈ ಸಿನಿಮಾದಲ್ಲಿ ಶಿರಸಿ ಸುತ್ತಮುತ್ತಲಿನ ಭಾಷೆ ಬಳಸಿರುವುದು ವಿಶೇಷ.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕಿ ಪಾವನ ಗೌಡ ‘ನಾನು ಇದರಲ್ಲಿ ಗಿರಿಜಾ ಎಂಬ ಪಾತ್ರ ಮಾಡಿದ್ದು, ತುಂಬಾ ವರ್ಷದ ಕನಸು ಈಡೇರಿದೆ. ಈ ಕನಸು ಈಡೇರಲು ೧೦ ವರ್ಷ ಕಾಯಬೇಕಾಯ್ತು. ಮಾಸ್ ಸಿನಿಮಾಗಳನ್ನು ಗಂಡಸರಷ್ಟೇ ಎಂಜಾಯ್ ಮಾಡಲ್ಲ. ನಾವು ಹುಡುಗಿಯರು ಎಂಜಾಯ್ ಮಾಡುತ್ತೇವೆ. ಈ ಚಿತ್ರಕ್ಕೆ ನಿರ್ದೇಶಕರ, ನಿರ್ಮಾಪಕರ ಕಿಟ್ಟಿ ಸರ್ ಸೇರಿದಂತೆ ತಂಡದ ಎಲ್ಲರ ಪರಿಶ್ರಮ ತುಂಬಾ ಇದೆ. ಚಿತ್ರದಲ್ಲಿರುವ ಪ್ರತಿ ಪಾತ್ರ ಹಾಗೂ ಕೆಲಸ ಮಾಡುವ ಡಿಪಾರ್ಟ್ ಮೆಂಟ್ ಗೆದ್ದರೆ ಸಿನಿಮಾ ಗೆಲ್ಲುತ್ತದೆ. ಈ ಕ್ಷಣ ನಾನು ತುಂಬಾ ಖುಷಿಯಿಂದ ಇದ್ದೇನೆ. ಹಾಗೆಯೇ ಈ ಸಿನಿಮಾದಲ್ಲಿ ನಾನೊಂದು ಭಾಗ ಆಗಿರುವುದು ಮರೆಯಲಾಗದು’ ಎಂದರು. ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ ‘ಸದ್ಯ ಕಾತುರದ ಕ್ಷಣ ರಿವೀಲ್ ಆಯ್ತು. ಇದು ಎಲ್ಲರ ಪ್ರಯತ್ನದ ಸಿನಿಮಾ. ಈ ‘ಗೌಳಿ’ ಜತೆಗೆ ತಂತ್ರಜ್ಞರೆಲ್ಲ ಬದಕಿದ್ದಾರೆ. ನಾನು ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ ಸಿನಿಮಾಗಳ ರಿಲೀಸ್ ಶ್ರಮ ಏನೆಂದು ಗೊತ್ತಿರಲಿಲ್ಲ ಹಾಗೂ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ ಈ ಚಿತ್ರದಿಂದ ಎಲ್ಲಾ ಗೊತ್ತಾಯಿತು. ನಿರ್ದೇಶಕ ಸೂರ ಬಂದು ಈ ಕಥೆ ಹೇಳಿದಾಗ ಮೈ ಜುಮ್ ಎನಿಸಿತ್ತು’ ಎಂದು ಹೇಳಿದರು. ಸಹ ಕಲಾವಿದ ಕಾಕ್ರೋಜ್ ಸುಧಿ ಮಾತನಾಡಿ ‘ಕಲಾವಿದನಿಗೆ ತಮ್ಮ ಸಿನಿಮಾ ರಿಲೀಸ್ ದಿನ ಹಬ್ಬ. ‘ಗೌಳಿ’ ನಮಗೆಲ್ಲ ದೀಪಾವಳಿ. ತುಂಬಾ ಚನ್ನಾಗಿ ಸಿನಿಮಾ ಬಂದಿದ್ದು ಇಂಡಸ್ಟ್ರಿಯಲ್ಲಿ ಏನೋ ಮಾಡುವ ಭರವಸೆ ಇದೆ’ ಎನ್ನುವರು. ಇದೇ ಸಂದರ್ಭದಲ್ಲಿ ಮತ್ತೋರ್ವ ಕಲಾವಿದ ಯಶ್ ಶೆಟ್ಟಿ ಹಾಗೂ ರುದ್ರೇಶ್, ಬೇಬಿ ನಮನ ತಮ್ಮ ಅನುಭವ ಹಂಚಿಕೊಂಡರು.
ಈ ಚಿತ್ರಕ್ಕಾಗಿ ರಿಸರ್ಚ್ ಮಾಡಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಹೊಸ ಪ್ರತಿಭೆ ಸೂರ. ಗೌಳಿ ಇವರ ನಿರ್ದೇಶನದ ಮೊದಲ ಸಿನಿಮಾ. ರಘು ಸಿಂಗಮ್ ಈ ಚಿತ್ರದ ನಿರ್ಮಾಪಕರು. ಇವರಿಗೂ ಸಿನಿಮಾ ನಿರ್ಮಾಣ ಮೊದಲ ಪ್ರಯತ್ನ. ಉಮೇಶ್ ಆರ್.ವಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಂದೀಪ್ ಛಾಯಾಗ್ರಹಣ, ಶಶಶಾಂಕ ಶೇಷಗಿರಿ ಅವರ ಸಂಗೀತ ನಿರ್ದೇಶನವಿದೆ.
Leave a Reply
You must be logged in to post a comment.