ಈ ಗುಳ್ಟು ಹುಡುಗ ನವೀನ್ ಶಂಕರ್ ತಲೆಗೆ ಯಾರಾದರೂ ನಾಲ್ಕು ಮೊಟಕೋರು ಬೇಕಲ್ಲಾ? ವರ್ಷಕ್ಕೆ ನಾಲ್ಕು ಸಿನಿಮಾ ಮಾಡೋಕೆ ಈತನಿಗೇನು ಧಾಡಿ? ಹಾಳಾದೋನು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೆ ಮೂರು ವರ್ಷ ಸತಾಯಿಸುತ್ತಾನೆ….

-ʻಹೊಂದಿಸಿ ಬರೆಯಿರಿʼ ಎನ್ನುವ ಫ್ರೆಷ್ ಸಿನಿಮಾ ನೋಡಿದ ಮೇಲೆ ಯಾರಿಗಾದರೂ ಹೀಗನ್ನಿಸದೇ ಇರೋದಿಲ್ಲ. ಅದರಲ್ಲೂ ನವೀನ್ ಶಂಕರ್ ಬರೋದು ತೀರಾ ಕಡಿಮೆ ಅನ್ನಿಸುವಷ್ಟು ಕಡಿಮೆ ದೃಶ್ಯಗಳಲ್ಲಿ. ಆದರೆ ಇಡೀ ಸಿನಿಮಾವನ್ನು ನುಂಗಿಕೊಳ್ಳುತ್ತಾರೆ. ಬೆಳ್ಳಗೂ ಇಲ್ಲ, ಬಾಡಿ ಬಿಲ್ಡ್ ಮಾಡಿಲ್ಲ, ಬಿಲ್ಡಪ್ಪಂತೂ ಇಲ್ಲವೇ ಇಲ್ಲ ಅನ್ನೋದು ಈ ಹುಡುಗನ ಬಗೆಗೆ ಎಲ್ಲರೂ ಮೆಚ್ಚುವ ವಿಚಾರ. ಆದರೆ ತೀರಾ ಯಾರೊಂದಿಗೂ ಬರೆಯೋದೇ ಇಲ್ಲ. ಅಂತರ್ಮುಖಿಯಂತೆ ಓಡಾಡುತ್ತಾನೆ… ಅಂತಾ ಕಂಪ್ಲೇಂಟ್ ಮಾಡೋರೂ ಇದ್ದಾರೆ. ಹಾಗೆ ನೋಡಿದರೆ ಈ ಹುಡುಗ ಸಿನಿಮಾ ಹೀರೋ ಆಗುವ ಮೊದಲು ಖಾಸಗಿ ವಾಹಿನಿಯಲ್ಲಿ ಕೆಲಸಕ್ಕಿದ್ದವನು. ಬೇರೆಲ್ಲರಿಗಿಂತಾ ಹೆಚ್ಚು ಸಂವಹನ ಕೌಶಲ್ಯ ಮೈಗೂಡಿಸಿಕೊಳ್ಳಬೇಕಿತ್ತು. ಆದರೆ ಮೀಡಿಯಾದವರೊಂದಿಗೂ ಈತ ಅಂತಾ ನಂಟು ಹೊಂದಿಲ್ಲ!

ತಾನೊಬ್ಬ ಅಸಾಧಾರಣ ಪ್ರತಿಭೆ ಅನ್ನೋದು ಸ್ವತಃ ನವೀನ್ಗೆ ಗೊತ್ತಿದೆಯೋ ಇಲ್ಲವೋ? ಕನ್ನಡದ ಮಟ್ಟಿಗೆ ನವೀನ್ ಶಂಕರ್ ದೊಡ್ಡ ಮಟ್ಟಕ್ಕೆ ಬೆಳೆದು ನಿಲ್ಲಬಹುದಾದ ಎಲ್ಲ ಗುಣ ಹೊಂದಿರುವ ನಟ. ಕಣ್ಣಲ್ಲೇ ಭಾವನೆಗಳನ್ನು ಹೊಮ್ಮಿಸುವ ಮೆಥೆಡ್ ಆರ್ಟಿಸ್ಟ್. ಧರಣಿ ಮಂಡಲ ಮಧ್ಯದೊಳಗೆ ಎನ್ನುವ ಸಿನಿಮಾವೊಂದು ಇತ್ತೀಚೆಗೆ ತೆರೆಗೆ ಬಂದಿತ್ತು. ಆ ಸಿನಿಮಾದಲ್ಲಿ ಕೂಡಾ ನವೀನ್ ಅದ್ಭುತವಾಗಿ ನಟಿಸಿದ್ದರು. ಪಾತ್ರ ಯಾವುದಾದರೂ ಅದರೊಳಗಿಳಿದು ನಟಿಸುವ ವಿಧ್ಯೆ ನವೀನ್ಗೆ ಸಿದ್ದಿಸಿದೆ. ನವೀನ್ ನಟನೆಯನ್ನು ನೋಡುತ್ತಿದ್ದರೆ ತಮಿಳಿನ ವಿಜಯ್ ಸೇತುಪತಿ, ಹಿಂದಿಯ ನವಾಜುದ್ದೀನ್ ಸಿದ್ದಿಕಿ ಥರದ ನಟರು ನೆನಪಾಗುತ್ತಾರೆ.

ಸದ್ಯ ಡಾಲಿಯ ಹೊಯ್ಸಳ ಸಿನಿಮಾದಲ್ಲಿ ನವೀನ್ಗೆ ಒಳ್ಳೆಯದೊಂದು ರೋಲ್ ಸಿಕ್ಕಿದೆ. ʻನೋಡಿದವರು ಏನಂತಾರೆ?ʼ, ʻಮೂಲತಃ ನಮ್ಮವರೇʼ ಮತ್ತು ಕ್ಷೇತ್ರಪತಿ ಮುಂತಾದ ಚಿತ್ರಗಳಲ್ಲಿ ನವೀನ್ ಹೀರೋ ಆಗಿ ನಟಿಸುತ್ತಿದ್ದಾರೆ. ಇನ್ನೂ ಒಂದಿಷ್ಟು ಸಿನಿಮಾಗಳನ್ನು ಒಪ್ಪಿಕೊಂಡು ಈತ ನೋಡುಗರನ್ನು ಖುಷಿ ಪಡಿಸಲಿ…
No Comment! Be the first one.