ಪ್ರೇಮಿಗಳ ಪಾಲಿಗೆ ಕಿಸ್ ಅನ್ನೋದೊಂದು ಮರೆಯಲಾಗದ ಗಿಫ್ಟು. ಅದು ಮೊದಲು ವಿನಿಮಯವಾಗೋದೊಂದು ಮಧುರಾನುಭೂತಿ. ಅಂಥಾ ನವಿರು ಭಾವಗಳನ್ನು ಹೊತ್ತ ಎ ಪಿ ಅರ್ಜುನ್ ನಿರ್ದೇಶನದ ಚಿತ್ರ ಕಿಸ್. ಪ್ರೇಮಿಸೋ ಮನಸ್ಥಿತಿಗಳು ಬದಲಾದರೂ ಅದರ ಭಾವಗಳೆಂದೂ ಬದಲಾಗೋದಿಲ್ಲ ಅನ್ನೋ ವಿಚಾರವನ್ನು ಕಿಸ್ ಮತ್ತೊಮ್ಮೆ ಸಾಬೀತು ಮಾಡಿದೆ.
ವಿರಾಟ್ ಮತ್ತು ಶ್ರೀ ಲೀಲಾ ಎನ್ನುವ ಫ್ರೆಶ್ ಜೋಡಿ ‘ಕಿಸ್’ ಮೂಲಕ ದೊಡ್ಡ ಪರದೆಯಲ್ಲಿ ಅರಳಿಕೊಂಡಿದೆ.

ಹಗಲಿನಲ್ಲೇ ಕನಸು ಕಾಣುವ ಮುದ್ದು ಹುಡುಗಿ ಅವಳು. ಆಕೆ ಎಸೆದ ಕಲ್ಲು ಹುಡುಗನ ಕಾರಿನ ಗಾಜನ್ನು ಚೂರಾಗಿಸುತ್ತದೆ. ಮನಸುಗಳನ್ನು ಒಂದು ಮಾಡುವ ಅಗ್ರಿಮೆಂಟಿಗೂ ಕಾರಣವಾಗುತ್ತದೆ. ಆದರೆ ಆ ತಾತ್ಕಾಲಿಕ ಒಪ್ಪಿಗೆ ಪತ್ರದ ವಾಯಿದೆ ಮುಗಿಯೋ ಹೊತ್ತಿಗೆ ಜಾಲಿ ಟ್ರಿಪ್ಪು, ಎಣ್ಣೆ ಪಾರ್ಟಿ, ಕಾಮಿಡಿ ಎಪಿಸೋಡುಗಳು, ಕಿತ್ತಾಟಗಳು ಘಟಿಸುತ್ತವೆ. ಜೀವನದಲ್ಲಿ ಎಂಟ್ರಿ ಕೊಟ್ಟು, ಕೊಡಬಾರದ ಕಾಟ ಕೊಟ್ಟು ಜೊತೆಗೆ ಜೀವವನ್ನೂ ಉಳಿಸಿದವನಿಗೆ ದಿಲ್ ನೀಡುವ ಮುದ್ದು ಹುಡುಗಿ ಅವಳು. ತಾನಾಗೇ ಬಂದು ಕೈಮೇಲೆ ಕುಂತ ಚಿಟ್ಟೆಯನ್ನು ಕೊಡವಿ ಕಳಿಸೋ ದಡ್ಡ ಇವನು. ಕೈಜಾರಿದ ನಂತರ ಕೊರಗಿ ಕಂಗಾಲಾಗುವ, ಬೆನ್ನುಬಿದ್ದು ಕಾಡುವ ಹುಡುಗನ ಬೆರಳ ಮೇಲೆ ಮತ್ತೆ ಆ ಚಿಟ್ಟೆ ಬಂದು ಕೂರುತ್ತದಾ? ಈ ಚಿಟ್ಟೆಗಳ ತುಟಿಗಳ ನಡುವೆ ಪ್ರೀತಿಯ ಕಿಸ್ ಕುದುರುತ್ತದಾ ಅನ್ನೋದು ಈ ಚಿತ್ರದ ತಿರುಳು.

ಶ್ರೀಲೀಲಾ ಮತ್ತು ವಿರಾಟನ ಪ್ರೀತಿಯಷ್ಟೇ ಕಿತ್ತಾಟಗಳೂ ಮುದ್ದುಮುದ್ದಾಗಿವೆ. ನಡುವೆ ಬರುವ ಕಾಕ್ರೋಜ್ ಸುಧಿ, ಶಮಂತ್ ಶೆಟ್ಟಿ ಭಯ ಹುಟ್ಟಿಸುತ್ತಾರೆ. ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಅಗತ್ಯಕ್ಕೆ ತಕ್ಕಷ್ಟು ನಗಿಸುತ್ತಾರೆ. ಇವೆಲ್ಲದರ ಜೊತೆಗೆ ನಿರ್ದೇಶಕ ಅರ್ಜುನ್ ನೋಡುಗರಿಗೆ ಅಲ್ಲಲ್ಲಿ ಟೆನ್ಷನ್ ಕೊಡುತ್ತಾರೆ!

ವಿ. ಹರಿಕೃಷ್ಣ ನೀಡಿರುವ ಸಂಗೀತದ ಮೋಡಿ ಇಡೀ ಸಿನಿಮಾವನ್ನು ಮಾತ್ರವಲ್ಲದೆ, ನೋಡುಗರ ಮನಸ್ಸನ್ನೂ ಆವರಿಸಿಕೊಳ್ಳುತ್ತದೆ. ಅರ್ಜುನ್ ಶೆಟ್ಟಿ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ, ಸ್ಪೆಷಲ್ ಎಫೆಕ್ಟ್ಸ್, ಸಿಜಿ… ಎಲ್ಲವೂ ಉತ್ಕೃಷ್ಟ ಗುಣಮಟ್ಟ ಹೊಂದಿದೆ.
ಒಟ್ಟಾರೆಯಾಗಿ ಹೊಸಾ ಹುಮ್ಮಸ್ಸಿನಿಂದ ಮತ್ತು ಅಷ್ಟೇ ಆವೇಗದಿಂದ ಅರ್ಜುನ್ ಕಿಸ್ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಪ್ರೀತಿಸೋ ಹೃದಯ ಹೊಂದಿರುವ ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ ಕಿಸ್.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಇತಿಹಾಸವನ್ನು ಮರು ಸೃಷ್ಟಿಸೋದು ಸುಲಭದ ಮಾತಲ್ಲ!

Previous article

ಕನ್ನಡಕ್ಕೆ ಜೈ… ಪ್ರೀತಿಗೆ ಸೈ!!

Next article

You may also like

Comments

Leave a reply

Your email address will not be published. Required fields are marked *