ಪುನೀತ್ ರಾಜ್ ಕುಮಾರ್ ಗೀತಾ ಚಿತ್ರಕ್ಕಾಗಿ ಹಾಡಿರುವ ಕನ್ನಡಿಗ ಹಾಡು ಈಗ ಎಲ್ಲೆಡೆ ಮೊಳಗುತ್ತಿದೆ. ಬಹುಶಃ ಮುಂಗಾರುಮಳೆಯಂಥಾ ಐತಿಹಾಸಿಕ ಹಿಟ್ ಚಿತ್ರವನ್ನು ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಆ ನಂತರದಲ್ಲಿ ಅತೀ ನಿರೀಕ್ಷೆ ಮೂಡಿಸಿರುವ ಚಿತ್ರವೆಂದರೆ ಅದು ಗೀತಾ!
ಗೋಕಾಕ್ ಚಳವಳಿಯ ಹಿನ್ನೆಲೆ, ಕನ್ನಡಪರ ಹೋರಾಟಗಾರನ ಪಾತ್ರ, ಅದರ ನಡುವೆ ಮುದ್ದಾದ ಪ್ರೀತಿ – ಹೀಗೆ ಭಿನ್ನ ಅಂಶಗಳನ್ನು ಒಳಗೊಂಡಿದೆ ಎನ್ನುವ ಕಾರಣಕ್ಕೆ ಗೀತಾ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಪುನೀತ್ ಹಾಡಿರುವ ಹಾಡು ಕರ್ನಾಟಕದ ಮನೆಮನಗಳಿಗೆ ಗೀತಾ ಚಿತ್ರವನ್ನು ಪರಿಚಯಿಸುವಂತಿದೆ.
ಇವೆಲ್ಲದರ ಜೊತೆಗೆ ಕನ್ನಡ ಚಿತ್ರರಂಗದ ಬರೋಬ್ಬರಿ ಅರವತ್ತು ಮಂದಿ ಸೆಲೆಬ್ರಿಟಿಗಳು ‘ಗೀತಾ’ ಚಿತ್ರವನ್ನು ಯಾವ ಕಾರಣಕ್ಕೆ ನೋಡಬೇಕು ಅಂತಾ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾಗಳ ಬಿಡುಗಡೆಗೆ ಮುನ್ನ ಸ್ಟಾರ್’ಗಳು ಪ್ರತಿಕ್ರಿಯೆಯ ಬೈಟ್ಸ್ ನೀಡೋದು ಮಾಮೂಲು. ಆದರೆ ಸ್ವತಃ ಕನ್ನಡದ ಟಾಪ್ ಸ್ಟಾರ್’ಗಳಲ್ಲಿ ಒಬ್ಬರಾದ ಗಣೇಶ್ ನಟಿಸಿ, ನಿರ್ಮಾಣ ಪಾಲುದಾರರಾಗಿರುವ ‘ಗೀತಾ’ ಸಿನಿಮಾ ಕುರಿತು ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ಗಳು, ತಂತ್ರಜ್ಞರು ಮೆಚ್ಚುಗೆಯ ಮಾತಾಡಿರೋದು ಆಶಾದಾಯಕ ಬೆಳವಣಿಗೆ. ಜಗ್ಗೇಶ್, ರಕ್ಷಿತ್ ಶೆಟ್ಟಿ, ನಟ, ನಿರ್ದೇಶಕ ರಘುರಾಮ್, ಭುವನ್ ಪೊನ್ನಣ್ಣ, ಧನಂಜಯ, ಯೋಗರಾಜ ಭಟ್, ಅಲೋಕ್… ಹೀಗೆ ಸರಿ ಸುಮಾರು ಅರವತ್ತು ಮಂದಿ ಗೀತಾ ಚಿತ್ರದ ಕನ್ನಡಿಗ ಹಾಡು ಮತ್ತು ಈ ಚಿತ್ರದ ಸುತ್ತ ಹುಟ್ಟಿಕೊಂಡಿರುವ ನಿರೀಕ್ಷೆಗಳ ಬಗ್ಗೆ ಮಾತಾಡಿದ್ದಾರೆ.
ಗೀತಾ ಚಿತ್ರವನ್ನು ವಿಜಯ್ ನಾಗೇಂದ್ರ ರಚಿಸಿ ನಿರ್ದೇಶನ ಮಾಡುತ್ತಿದ್ದು, ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಸಹ ನಿರ್ಮಾಣದಲ್ಲಿ ಗೀತಾ ಮೂಡಿಬರುತ್ತಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಗೆ ಶಾನ್ವಿ ಶ್ರೀವಾತ್ಸವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ನಾಯಕಿಯರಾಗಿ ಜತೆಯಾಗಿದ್ದಾರೆ. ವಿಶೇಷ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ. ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.