ಕನ್ನಡ ಚಿತ್ರರಂಗದಲ್ಲಿ ಕ್ರಿಯೇಟಿವ್ ಎಂದೇ ಗುರುತಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತರಾಗಿರುವವರು ಕಿಚ್ಚಾ ಸುದೀಪ್. ಅವರಿಗೀಗ ೪೬ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳೆಲ್ಲ ಅದನ್ನು ತಮ್ಮದೇ ಸಂಭ್ರಮ ಎಂಬಂತೆ ಆಚರಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ವಿವಿಧ ಚಿತ್ರ ರಂಗಗಳ ಗಣ್ಯರಿಂದಲೂ ಸುದೀಪ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸುದೀಪ್ ನಿರ್ಮಾಪಕರ ಪಾಲಿನ ಫೇವರಿಟ್ ನಟ. ತನ್ನನ್ನು ನಂಬಿ ಹಣ ಹೂಡಿದ ಯಾರಿಗೂ ನಷ್ಟವಾಗಬಾರದು  ಎನ್ನುವ ಪ್ರಾಮಾಣಿಕ ಕಾಳಜಿ ನಿಜಕ್ಕೂ ಇದೆ. ಆ ಕಾರಣದಿಂದಲೇ ಸುದೀಪ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಚ್ಚನ ಹೃದಯ ವೈಶಾಲ್ಯತೆಗೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಈ ಹಿಂದೆ ‘ಕೆಂಪೇಗೌಡ’ ಚಿತ್ರದ ನಿರ್ಮಾಪಕ ಶಂಕರೇಗೌಡ ಸುದೀಪ್ ನಿರ್ದೇಶಿಸಿದ್ದ ಜಸ್ಟ್ ‘ಮಾತ್‌ಮಾತಲ್ಲಿ’ ನಿರ್ಮಿಸಿದ್ದರು. ಸುದೀಪ್ ತುಂಬಾ ಇಷ್ಟ ಪಟ್ಟು ನಿರ್ದೇಶಿಸಿದ ‘ಜಸ್ಟ್ ಮಾತ್ ಮಾತಲ್ಲಿ’ ಅವರ ಆಭಿರುಚಿ ಎಂಥದ್ದು ಎಂಬುದನ್ನು ತೋರಿಸಿತ್ತು. ವಿಮರ್ಶಕರಿಂದ ಅಭೂತಪೂರ್ವ ಪ್ರತಿಕ್ರಿಯೆಯೂ ಬಂದಿತ್ತು. ಅದೇ ವೇಳೆಗೆ ಬಂದ ‘ಸಿಂಗಂ’ ಇಡೀ ದಕ್ಷಿಣ ಭಾರತದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಆರಂಭಿಸಿತ್ತು. ಸೀದಾ ಹೋಗಿ ಆ ಚಿತ್ರದ ರಿಮೇಕ್ ರೈಟ್ಸ್ ತಂದ ಸುದೀಪ್ ಅದನ್ನು ಭಾಷಾಂತರಿಸಲು  ನಿಂತೇಬಿಟ್ಟರು. ಆದರೆ ‘ಕೆಂಪೇಗೌಡ’ ಎನ್ನುವ ಟೈಟಲ್ ನಿರ್ಮಾಪಕ ಸೂರಪ್ಪ ಬಾಬು ಬಳಿಯಿತ್ತು. ಸತತ ೧೦೮ ದಿನಗಳ ಚಿತ್ರೀಕರಣವನ್ನು ನಡೆಸಿದ ಸುದೀಪ್ ‘ಕೆಂಪೇಗೌಡ’ನನ್ನು ತೆರೆಗೆ ತಂದರು. ತಮಿಳಿನಲ್ಲಿ ೨೫ ಕೋಟಿ ಬಜೆಟ್ ನಲ್ಲಿ ಬಂದಿದ್ದ ಚಿತ್ರವನ್ನು ಇಲ್ಲಿ ಮ್ಯಾಚ್ ಮಾಡಲು ಏಳೆಂಟು ಕೋಟಿಗಳ ಹಣ ಹೂಡಲಾಗಿತ್ತು. ಬಿಕೆಟಿ ಯ ಹಚಿಕೆಯನ್ನು ವಿತರಕ ಭಾಷಾ ೨.೫೦ ಕೋಟಿಗೆ ವಿತರಕ ಭಾಷಾ ಖರೀದಿಸಿದ್ದರು.
ತನ್ನಿಂದ ಲುಕ್ಸಾನು ಅನುಭವಿಸಿದ ನಿರ್ಮಾಪಕನಿಗಾಗಿ ಫ್ರೀ ಕಾಲ್‌ಶೀಟ್ ನೀಡಿದ್ದು ಮಾತ್ರವಲ್ಲದೆ, ಹಗಲೂ  ರಾತ್ರಿ ಕಷ್ಟಪಟ್ಟು ಸಿನೆಮಾ ಮಾಡಿ, ಅದಕ್ಕೊಂದು ಮಾರುಕಟ್ಟೆಯನ್ನೂ ನಿರ್ಮಿಸಿಟ್ಟಿದ್ದು ಕಿಚ್ಚನ ಹೆಚ್ಚುಗಾರಿಕೆ. ನಂತರ ವಿಷ್ಣುವರ್ಧನ, ವೀರಪರಂಪರೆ, ವರದನಾಯಕ, ಬಚ್ಚನ್ ಮತ್ತು ಮಾಣಿಕ್ಯ, ರನ್ನ, ಹೆಬ್ಬುಲಿಯಂತ ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡುತ್ತಲೇ ಬಂದಿದ್ದಾರೆ. ಇವುಗಳಲ್ಲಿ ಕೆಲವು ಚಿತ್ರಗಳು ಪರಭಾಷೆಗೂ ಡಬ್ ಆಗಿವೆ. ಸುದೀಪ್ ತಲೆಕೆಟ್ಟ ಆಸಾಮಿ, ಗರ್ವಿ, ನೇರಾನೇರ ಮಾತಾಡಿ ವಿವಾದನ್ನು ಮೈಮೇಲೆಳೆದು ಕೊಳ್ಳುವ ಹುಂಬ ಎಂಬುದು ಎಷ್ಟು ನಿಜವೋ ಆತ ಶುದ್ದ ಕಸುವುದಾರ, ಹಿಡಿದ ಕೆಲಸಕ್ಕೆ ನಿಷ್ಠನಾಗಿ ದುಡಿಯುವ ಛಲಗಾರ ಎಂಬುದೂ ಅಷ್ಟೇ ನಿಜ.
ಜೀರೋ ಲೆವೆಲ್ ನಿಂದ ಬಂದು ಅತಿ ಹೆಚ್ಚು ಅಭಿಮಾನವರ್ಗವನ್ನು ಪಡೆದಿರುವ ಸುದೀಪ್ ಅದಕ್ಕೆ ಯಾವ ಗಿಮಿಕ್ಕುಗಳನ್ನೂ ನೆಚ್ಚಿಕೊಂಡಿಲ್ಲ. ಖರ್ಚು ಮಾಡಿಲ್ಲ. ಕಿಚ್ಚನ ಯಶಸ್ಸು, ಕೀರ್ತಿಗೆಲ್ಲಾ ಇವರ ಶ್ರಮ ಮತ್ತು ಪ್ರತಿಭೆ ಮಾತ್ರ ಕಾರಣ ಎಂಬುದು ಎಲ್ಲರೂ ಒಪ್ಪುವ ಸತ್ಯ. ಬಹುಮುಖ ಪ್ರತಿಭೆಯಾದ ಸುದೀಪ್ ಮುಖಕ್ಕೆ ಬಣ್ಣ ಹಚ್ಚಿದರೆ ಹೀರೋ ತರಹ ಕಾಣಿಸುತ್ತಾರೆ; ಅದೇ ತರಹ ಕಾಲಿಗೆ ಪ್ಯಾಡ್ ಕಟ್ಟಿ, ಕೈಯಲ್ಲಿ ಬ್ಯಾಟ್ ಹಿಡಿದರೆ ಪಕ್ಕಾ ಕ್ರಿಕೆಟ್ ಆಟಗಾರನಂತೆ ಕಾಣುತ್ತಾರೆ. ಅದೇ ಕೈಯ್ಯಲ್ಲೊಂದು ಗಿಟಾರ್ ಹಿಡಿದರೆ ಸಂಗೀತಗಾರ, ಕ್ಯಾಮೆರಾ ಹಿಂದೆ ನಿಂತರೆ ಒಬ್ಬ ಕ್ರಿಯಾಶೀಲ ನಿರ್ದೇಶಕ… ಹೀಗೆ ಸುದೀಪ್ ಅವರ ಪ್ರತಿಭೆಗೆ ಹಲವಾರು ಮುಖಗಳಿವೆ. ಕ್ರಿಕೆಟ್ ಭಾಷೆಯಲ್ಲಿ ಹೇಳುದಾದರೆ ಕಿಚ್ಚ ಸುದೀಪ್ ಆಲ್‌ರೌಂಡರ್…
ಚಿತ್ರರಂಗಕ್ಕೆ ಕಾಲಿಡುವಾಗಲೇ ’ನತದೃಷ್ಟ ನಾಯಕನಟ’ ಎಂದೆನಿಸಿಕೊಂಡವರು. ಅಂತಹ ಸಂದರ್ಭದಲ್ಲಿ ಗಾಂಧಿನಗರದ ಯಾವ ನಿರ್ಮಾಪಕರೂ ಸುದೀಪ್ ಕಾಲ್‌ಶೀಟ್‌ಗೆ ಹೋಗುತ್ತಲೇ ಇರಲಿಲ್ಲ. ಆಗಲೇ ಸುದೀಪ್ ಹಠ ಮಾಡಿಕೊಂಡು, ತನ್ನ ಸ್ವಂತ ನಿರ್ಮಾಣದ ಚಿತ್ರದ ಮುಖಾಂತರ ಮತ್ತೊಮ್ಮೆ ನಾಯಕನಟನಾಗುವ ಪ್ರಯತ್ನಕ್ಕೆ ಕೈಹಾಕಿದರು. ಆ ಚಿತ್ರದ ಹೆಸರು ’ಸ್ಪರ್ಶ’ ಇದನ್ನು ನಿರ್ದೇಶಿಸಿದವರು ಸುನೀಲ್‌ಕುಮಾರ್ ದೇಸಾಯಿ. ಮೊದಲೆರಡು ಚಿತ್ರಗಳಂತೆ ಈ ಚಿತ್ರ ಅರ್ಧಕ್ಕೆ ನಿಲ್ಲಲಿಲ್ಲ ಎಂಬ ಸಮಾಧಾನ ಹೊರತುಪಡಿಸಿದರೆ ಲಾಭವೇನೂ ಬರಲಿಲ್ಲ. ಅಲ್ಲಿಂದಾಚೆಗೆ ಸುದೀಪ್ ಒಂದೊಂದೇ ಚಿತ್ರದ ಮೂಲಕ ತನ್ನ ವೃತ್ತಿಜೀವನದ ದಾರಿಯನ್ನು ರೂಪಿಸಿಕೊಂಡು ಬಂದರು.
ಇವತ್ತು ಸುದೀಪ್ ಒಬ್ಬ ಜನಪ್ರಿಯ ನಾಯಕನಟ ಮಾತ್ರವಲ್ಲ; ಒಬ್ಬ ಕ್ರಿಯಾಶೀಲ  ನಿರ್ದೇಶಕ ಎನಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ಕನ್ನಡ ಚಿತ್ರರಂಗದ ಈ ಲಂಬೂ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಹಿಂದಿ ಚಿತ್ರರಂಗದ ಲಂಬೂ ಅಮಿತಾಬ್ ಜೊತೆ ರಣ್ ಚಿತ್ರದಲ್ಲಿ ನಟಿಸಿ, ಅವರಿಂದಲೂ ಭೇಷ್ ಎನಿಸಿಕೊಂಡಿದ್ದು. ನಂತರ ರಾಜಮೌಳಿಯಂಥ ಸ್ಟಾರ್ ನಿರ್ದೇಶಕನ ‘ಈಗ’ ಸಿನಿಮಾದಲ್ಲಿ ನೆಗೆಟೀವ್ ಪಾತ್ರದಲ್ಲಿ ಕಾಣಿಸಿಕೊಂಡರೂ ಭರ್ಜರಿಯಾಗಿ ಮಿಂಚಿದ್ದು ಜಗತ್ತಿಗೇ ಗೊತ್ತಿರೋ ವಿಚಾರ. ಅದೇ ರಾಜಮೌಳಿಯವರ ಬಾಹುಬಲಿಯ ಪುಟ್ಟ ಪಾತ್ರದಲ್ಲಿಯೂ ನೆನಪುಳಿಯುವಂತೆ ನಟಿಸಿದ್ದು ಕಿಚ್ಚನ ಕಲಾ ತಾಕತ್ತು.
ಹೀಗೆ ಕನ್ನಡದ ಹುಡುಗನೊಬ್ಬ ರಾಷ್ಟ್ರಮಟ್ಟದಲ್ಲಿ ಮಿನುಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸುದೀಪ್ ಯುವ ನಾಯಕನಟರುಗಳಲ್ಲಿ ಆರಂಭದಿಂದಲೂ ಕಲಿಯುವ ತುಡಿತ ಕಾಣುತ್ತಿತ್ತು. ತಾನು ನಾಯಕನಟನೆಂದು ಸುಮ್ಮನೆ ಕುಳಿತುಕೊಳ್ಳುವ ಬದಲು ಸಂಗೀತ, ಸಾಹಸ ದೃಶ್ಯ ಸಂಯೋಜನೆ, ಸಂಕಲನ, ಪ್ರಚಾರದ ವೈಖರಿ… ಹೀಗೆ ಎಲ್ಲದರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿದ್ದರು. ಆರಂಭದಲ್ಲಿ ಸುದೀಪ್ ಅವರ ಈ ವರ್ತನೆಯನ್ನು ನಿರ್ಮಾಪಕರು ಇಷ್ಟಪಡಲಿಲ್ಲ. ಈತ ಎಲ್ಲದರಲ್ಲೂ ಮೂಗು ತೂರಿಸುತ್ತಾನೆ ಎಂಬ ಅಪಸ್ವರ ಕೇಳಿಬಂತು. ಆದರೂ ಸುದೀಪ್ ಮಾತ್ರ ಇದ್ಯಾವುದರ ಬಗ್ಗೆ ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಇದರ ಫಲವಾಗಿಯೇ ಅವರು ಇಂದು ಯಶಸ್ವಿ ನಿರ್ದೇಶಕ ಎಂದೆನಿಸಿಕೊಳ್ಳಲು ಸಾಧ್ಯವಾಗಿದೆ.
ಹೀಗೆ ಪ್ರತಿಯೊಂದರಲ್ಲಿಯೂ ಪರ್ಫೆಕ್ಟ್ ಅನ್ನಿಸಿಕೊಂಡಿರುವ ಸುದೀಪ್ ಈ ಹಿಂದೆ ತಮಿಳಿನ ಪುಲಿ ಚಿತ್ರದಲ್ಲಿಯೂ ಅಬ್ಬರಿಸಿದ್ದರು. ಈಗ ಕಿಚ್ಚ ಸುದೀಪ್ ಅಭಿನಯದ, ಎಸ್. ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಭಾರತದ ಐದು ಭಾಷೆಗಳಲ್ಲಿ ಬಿಡುಗಡೆಯಾಗಲು ಅಣಿಯಾಗಿದೆ. ಪೈಲ್ವಾನ್ ಕಿಚ್ಚನ ಈವರೆಗಿನ ಸಾಧನೆಯನ್ನು ಮೀರಿ ಇನ್ನೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗೋದು ಗ್ಯಾರೆಂಟಿ. ಸದಾ ಹೊಸತನವನ್ನೇ ಧ್ಯಾನಿಸುವ ಸುದೀಪ್‌ರಿಗೆ ಹ್ಯಾಪಿ ಬರ್ತಡೇ!
CG ARUN

ಗೋಲ್ಡನ್ ಸ್ಟಾರ್ ಗೀತಾಗೆ ಸ್ಯಾಂಡಲ್ ವುಡ್ ಸಾಥ್!

Previous article

ಇಂದು ಟ್ರೇಲರಿನಲ್ಲಿ ಬರಲಿದ್ದಾಳೆ ರಂಗನಾಯಕಿ!

Next article

You may also like

Comments

Leave a reply

Your email address will not be published. Required fields are marked *