ರವಿ ಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಚಿತ್ರ ರಂಗಾಯಣ ರಘು ಅವರ ವಿಭಿನ್ನ ಅವತಾರದ ಪ್ರೋಮೋ ಮೂಲಕವೇ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಚಿತ್ರತಂಡ ಇತ್ತೀಚೆಗೆ ಕೆಲವೇ ಸೆಕೆಂಡುಗಳದ್ದೊಂದು ಪ್ರೋಮೋ ಬಿಡುಗಡೆ ಮಾಡಿತ್ತು. ಅದರಲ್ಲಿ ರಂಗಾಯಣ ರಘು ವಿಶಿಷ್ಟ ಮ್ಯಾನರಿಂಸಂನಲ್ಲಿ ನಟಿಸಿರೋ ತುಣುಕು, ಆ ಡೈಲಾಗ್ ವರಸೆ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗಿ ಬಿಟ್ಟಿದೆ!
ಇದೇ ಮಾರ್ಚ್ 15ರಂದು ಬಿಡುಗಡೆಯಾಗುತ್ತಿರೋ ಗಿರ್ ಗಿಟ್ಲೆಯ ಮತ್ತೊಂದು ಪೋಸ್ಟರ್ ಕೂಡಾ ಈಗ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿ ಇತ್ತೀಚೆಗಷ್ಟೇ ಬೆಂಕಿಗಾಹುತಿಯಾಗಿರೋ ಬಂಡೀಪುರ ಅರಣ್ಯದ ಚಿತ್ರಣವೂ ಗೋಚರವಾಗಿದೆ. ಮನುಷ್ಯರಿದ್ದಾರೆ ಎಚ್ಚರ ಎಂಬಂಥಾ ಪ್ರಾಣಿಗಳ ಪರವಾದ ಬರಹದೊಂದಿಗೆ ಗಮನ ಸೆಳೆದಿರೋ ಈ ಪೋಸ್ಟರ್ ಬಂಡೀಪುರದ ಬೆಂಕಿ ಪ್ರಕರಣಕ್ಕೂ ಗಿರ್ ಗಿಟ್ಲೆಗೂ ಏನಾದರೂ ಸಂಬಂಧವಿದೆಯಾ ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡುವಂತೆ ಮಾಡಿದೆ. ಅಂತೂ ಈಗಾಗಲೇ ಈ ಚಿತ್ರದ ಕಥೆಯ ಬಗ್ಗೆ ನಾನಾ ದಿಕ್ಕಿನಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಒಂದು ಸುದ್ದಿಯ ಬೆನ್ನಿಗೇ ಅದಕ್ಕೆ ವಿರುದ್ಧವಾದ ಮತ್ತೊಂದು ಸುಳಿವನ್ನು ಜಾಹೀರು ಮಾಡೋ ಮೂಲಕ ಗಿರ್ ಗಿಟ್ಲೆ ತಂಡ ಕುತೂಹಲ ಕಾಯ್ದಿಟ್ಟುಕೊಳ್ಳುತ್ತಿದೆ. ಇದೇ ಬಿಸಿಯಲ್ಲಿ ಇದೀಗ ಬುಕ್ ಮೈ ಶೋನಲ್ಲಿ ಗಿರ್ ಗಿಟ್ಲೆ ಭರಾಟೆಯೂ ಆರಂಭವಾಗಿದೆ.
ರವಿಕಿರಣ್ ಹೇಳಿ ಕೇಳಿ ಉಪೇಂದ್ರ ಗರಡಿಯಲ್ಲಿ ಪಳಗಿಕೊಂಡಿರುವವರು. ಆದ್ದರಿಂದಲೇ ಗಿರ್ ಗಿಟ್ಲೆಯನ್ನವರು ಭಿನ್ನವಾಗಿಯೇ ರೂಪಿಸಿದ್ದಾರೆಂಬ ನಂಬಿಕೆ ಎಲ್ಲರಲ್ಲಿದೆ. ಅದಕ್ಕೆ ಸಾಕ್ಷಿಯೆಂಬಂಥಾ ವಿಚಾರಗಳೇ ಸಾಲು ಸಾಲಾಗಿ ಹೊರ ಬೀಳುತ್ತಿವೆ. ಇಂಥದ್ದೆಲ್ಲ ಸೇರಿಕೊಂಡು ಜನರ ಆಸಕ್ತಿ ಗಿರ್ ಗಿಟ್ಲೆಯ ಸುತ್ತಲೇ ಗಿರಕಿ ಹೊಡೆಯಲಾರಂಭಿಸಿದೆ. ಇದುವೇ ಮಹಾ ಗೆಲುವಾಗಿ ಈ ಸಿನಿಮಾದ ಕೈ ಹಿಡಿಯೋ ಸೂಚನೆಗಳೇ ನಿಚ್ಚಳವಾಗಿದೆ.