ಕವಿರತ್ನ ವಿ ನಾಗೇಂದ್ರ ಪ್ರಸಾದ್ ಅಭಿನಯದ ಗುರೂಜಿ ಚಿತ್ರ ಒಂದೇ ಒಂದು ಫಸ್ಟ್ ಲುಕ್ ಟೀಸರ್ ಮೂಲಕ ಎಬ್ಬಿಸಿದ್ದ ಅಲೆ ಸಣ್ಣದೇನಲ್ಲ. ಆದರೆ ನಾಗೇಂದ್ರಪ್ರಸಾದ್ ಹೀರೋ ಆಗಿ ನಟಿಸಿದ್ದ ಗೂಗಲ್ ಚಿತ್ರ ಬಿಡುಗಡೆಯಾದರೂ ಗುರೂಜಿ ಆಗಮಿಸುವ ಸೂಚನೆಗಳು ಸಿಕ್ಕಿರಲಿಲ್ಲ. ಇದೀಗ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲು ನಾಗೇಂದ್ರಪ್ರಸಾದ್ ಅವರು ನಿರ್ಧರಿಸಿದ್ದಾರೆ.
ಅದರನ್ವಯ ಈಗಷ್ಟೇ ಮ್ಯೂಸಿಕ್ ಬಜಾರ್ ಯೂಟ್ಯೂಬ್ ಚಾನೆಲ್ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತ್ರೈ ಸ್ಟಾರ್ ಫಿಲ್ಮ್ಸ್ ನಿರ್ಮಾಣ ಮಾಡಿರೋ ಈ ಚಿತ್ರದ ಬಗ್ಗೆ ಫಸ್ಟ್ ಲುಕ್ ಟೀಸರ್ನಿಂದ ನಿರೀಕ್ಷೆ ಹುಟ್ಟಿಕೊಂಡಿತ್ತು. ಇದರ ಇನ್ನೊಂದಷ್ಟು ಅಪ್ಡೇಟ್ಗಳನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದರು. ಹೋದಲ್ಲಿ ಬಂದಲ್ಲಿ ಕವಿರತ್ನರಿಗೆ ಗುರೂಜಿ ಚಿತ್ರದ ಬಗ್ಗೆ ಜನ ಕೇಳಲಾರಂಭಿಸಿದ್ದರು. ಇದನ್ನು ಮನಗಂಡ ನಾಗೇಂದ್ರ ಪ್ರಸಾದ್ ಅವರು ಟೀಸರ್ ರಿಲೀಸ್ ಮಾಡಿದ್ದಾರೆ. ಗಣೇಶ್ ಕಾಮರಾಜ್ ನಿರ್ದೇಶನದ ಈ ಸಿನಿಮಾಗೆ ಜಾಲಿ ಜೋಸೆಫ್ ನಿರ್ಮಾಪಕರು.
ಗಣೇಶ್ ಕಾಮರಾಜ್ ನಿರ್ದೇಶನದ ಈ ಚಿತ್ರವನ್ನು ತ್ರೈ ಸ್ಟಾರ್ ಫಿಲಂ ಲಾಂಚನದಲ್ಲಿ ಜಾಲಿ ಜೋಸೆಫ್ ನಿರ್ಮಾಣ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರು ವಿಶಿಷ್ಟವಾದ ಪಾತ್ರದಲ್ಲಿ ನಟಿಸಿದ್ದಾರೆ. ಆರಂಭದಿಂದಲೂ ನಾಗೇಂದ್ರ ಪ್ರಸಾದ್ ಅವರಿಗೆ ಸಾಮಾಜಿಕ ಸಂದೇಶ ಕೊಡುವ ಚಿತ್ರವೊಂದನ್ನು ಮಾಡಬೇಕೆಂಬ ಆಸೆಯಿತ್ತಂತೆ. ಗುರೂಜಿ ಚಿತ್ರದ ಮೂಲಕ ಅದು ಸಾಕಾರಗೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್ ಟೀಸರ್ ದಿನದೊಪ್ಪತ್ತಿನಲ್ಲಿಯೇ ಐದು ಸಾವಿರಕ್ಕೂ ಹೆಚ್ಚು ಶೇರ್ ಆಗೋ ಮೂಲಕ ದಾಖಲೆ ಸೃಷ್ಟಿಸಿತ್ತು. ಇದೀಗ ಬಿಡುಗಡೆಯಾಗಿರೋ ಟೀಸರ್ ಕೂಡಾ ಆ ದಾಖಲೆಯನ್ನು ಸರಿಗಟ್ಟುವ ಸೂಚನೆಗಳಿವೆ!
#