ಹತ್ತು ವರ್ಷ… ಅಖಂಡ ಹತ್ತು ವರ್ಷ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳದಿದ್ದರೆ ಯಾವ ನಟ ನಟಿಯರನ್ನಾದರೂ ಜನ ಮರೆತುಬಿಡುತ್ತಾರೆ. ಆದರೆ ನೆನಪಿಟ್ಟುಕೊಳ್ಳುವಂಥಾ ಪಾತ್ರಗಳನ್ನು ಮಾಡಿ ಮರೆಯಾದವರನ್ನು ಪ್ರೇಕ್ಷಕರು ಆಗಾಗ ನೆನಪಿಸಿಕೊಳ್ಳೋದೂ ಇದೆ. ಹಾಗೊಂದು ನೆನಪನ್ನು ಪ್ರೇಕ್ಷಕರ ಮನಸಿಗೆ ಮುಟ್ಟಿಸಿ ಮಾಯವಾಗಿದ್ದವರು ಸೌಮ್ಯ. ಹತ್ತು ವರ್ಷದ ಹಿಂದೆ ಒರಟ ಐ ಲವ್ ಯೂ ಚಿತ್ರದ ನಾಯಕಿಯಾಗಿದ್ದ ಸೌಮ್ಯಾ ಇದೇ ಮೊದಲ ಬಾರಿ ತ್ರಾಟಕ ಚಿತ್ರದ ಮೂಲಕ ಹೃದಯಾ ಅವಂತಿ ಎಂದು ಹೆಸರು ಬದಲಾಯಿಸಿಕೊಂಡು ನಾಯಕಿಯಾಗಿಯೇ ಮರಳಿ ಬಂದಿದ್ದಾರೆ!
ಬಹಳಷ್ಟು ಮಂದಿ ಹೃದಯಾ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಾಗಿ ಎಲ್ಲೋ ಕಳೆದು ಹೋಗಿದ್ದಾರೆಂದೇ ಅಂದುಕೊಂಡಿದ್ದರು. ಬಹುಶಃ ಪ್ರಶಾಂತ್ ನಾಯಕನಾಗಿದ್ದ ಒರಟ ಚಿತ್ರದ ನಾಯಕಿಯಾಗುವ ಹೊತ್ತಿನಲ್ಲಿ ಹೃದಯಾ ಇನ್ನೂ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿಕೊಂಡಿದ್ದದ್ದಷ್ಟೆ ಎಂಬುದು ಅವರೇ ಹೇಳೋವರೆಗೂ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ!
ಒರಟ ಐ ಲವ್ ಯೂ ಚಿತ್ರದಲ್ಲಿ ಹೃದಯಾಗೆ ಅನಿರೀಕ್ಷಿತವಾಗಿ ನಾಯಕಿಯಾಗೋ ಅವಕಾಶ ಸಿಕ್ಕಿತ್ತು. ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ಈ ಚಿತ್ರದಲ್ಲಿ ನಟಿಸಿದ್ದ ಅವರಿಗೆ ಸಿನಿಮಾ ರಂಗದ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಆದರೆ ಪ್ರಬುದ್ಧವಾಗಿದ್ದ ಈಕೆಯ ನಟನೆ ಕಂಡು ಎಲ್ಲರೂ ಮನಸೋತಿದ್ದರು. ಆದರೆ ಈ ಚಿತ್ರ ತೆರೆ ಕಂಡ ನಂತರದಲ್ಲಿ ಒಂದಷ್ಟು ಅವಕಾಶಗಳು ಅರಸಿ ಬಂದರೂ ಪೋಷಕರು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ವಿದ್ಯಾಭ್ಯಾಸವೆಲ್ಲ ಮುಗಿದ ಮೇಲೆಯೇ ಈ ಬಗ್ಗೆ ಯೋಚಿಸಿದರಾಯ್ತೆಂಬ ನಿಲುವು ಅವರೆಲ್ಲರದ್ದಾಗಿತ್ತು. ಆ ನಂತರ ಓದಿನತ್ತ ಗಮನ ಹರಿಸಿದ್ದ ಹೃದಯಾ ಓದು ಮುಗಿದ ನಂತರ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದರು.
ಹೃದಯಾಗೆ ನಟಿಸಲು ಅವಕಾಶ ಇರುವಂಥಾ ಪಾತ್ರಗಳೇ ಬೇಕೆಂಬ ಹಂಬಲ. ಬಹುಶಃ ಇಷ್ಟೊಂದು ಗ್ಯಾಪು ಸೃಷ್ಟಿಯಾಗಲು ಅದೇ ಕಾರಣ. ಈಗ್ಗೆ ಒಂದಷ್ಟು ವರ್ಷಗಳ ಹಿಂದೆಯೇ ಮತ್ತೆ ಬಣ್ಣ ಹಚ್ಚಲು ಮನಸು ಮಾಡಿದ್ದ ಹೃದಯಾ ಒಂದಷ್ಟು ಕಥೆಗಳನ್ನು ಕೇಳಿದ್ದರಂತೆ. ಆದರೆ ಅದ್ಯಾವುದೂ ಇಷ್ಟವಾಗದೆ ಸುಮ್ಮನಾಗಿದ್ದರು. ಕಡೆಗೂ ಅವರು ಬಯಸಿದ್ದಂಥಾದ್ದೇ ಕಥೆ, ಪಾತ್ರಗಳ ಅವಕಾಶವನ್ನು ಹೊತ್ತು ತಂದಿದ್ದ ಚಿತ್ರ ತ್ರಾಟಕ.
ನಿರ್ದೇಶಕ ಶಿವಗಣೇಶ್ ಹೇಳಿದ ಈ ಕಥೆಯ ಒಂದೆಳೆ ಕೇಳಿಯೇ ಹೃದಯಾ ಖುಷಿಯಾಗಿದ್ದರಂತೆ. ತನ್ನ ಪಾತ್ರದ ಬಗ್ಗೆ ಕೇಳಿದಾಕ್ಷಣವೇ ಒಪ್ಪಿಗೆಯನ್ನೂ ಸೂಚಿಸಿದ್ದ ಹೃದಯಾ ತ್ರಾಟಕ ಚಿತ್ರದಲ್ಲಿ ಮನೋ ವೈದ್ಯೆಯಾಗಿ ನಟಿಸಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಈ ಪಾತ್ರಕ್ಕಾಗಿ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ವೈದ್ಯರ ಹಾವಭಾವಗಳನ್ನು ಅಭ್ಯಸಿಸಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಆಫಿಸರ್ ನಾಯಕನಿಗೆ ವಿಚಿತ್ರವಾದೊಂದು ಮಾನಸಿಕ ಸಮಸ್ಯೆ ಇರುತ್ತದೆ. ಅದರನ್ನು ಪರಿಹರಿಸಲು ಮುಂದಾಗೋ ಪಾತ್ರ ಹೃದಯಾರದ್ದು. ಅಂದಹಾಗೆ ತ್ರಾಟಕನನ್ನು ಮೊದಲ ನೋಟದಲ್ಲೇ ಒಪ್ಪಿಕೊಳ್ಳಲು ಮೂಲ ಕಾರಣ ಕಥೆಯಂತೆ.
ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರದ ಮೂಲಕ ಮತ್ತೆ ವಾಪಾಸಾಗಿರುವ ಹೃದಯಾ ಕನ್ನಡದಲ್ಲಿಯೇ ನೆಲೆಗೊಳ್ಳುವ ಇರಾದೆ ಹೊಂದಿದ್ದಾರೆ. ಮಿಂಚಿ ಮರೆಯಾಗೋ ಗ್ಲಾಮರ್ ಪಾತ್ರಗಳನ್ನು ಇವರು ಬಯಸುತ್ತಿಲ್ಲ. ಮನಸಲ್ಲುಳಿಯುವ ಪಾತ್ರಗಳಿಗೇ ಹೃದಯಾ ಅವರ ಆಧ್ಯತೆ. ಸದ್ಯ ಬಿಡುಗಡೆಯಾಗಿರುವ ತ್ರಾಟಕ ಮತ್ತು ಹೃದಯಾ ಅವರ ನಟನೆಯ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಡುವೇ ಇಲ್ಲದಂತೆ ಬ್ಯುಸಿಯಾಗೋ ಸೂಚನೆ ಕೊಟ್ಟಿರುವ ಹೃದಯಾ ತಮ್ಮ ರೀ ಎಂಟ್ರಿಗೆ ತ್ರಾಟಕ ಚಿತ್ರ ದೊಡ್ಡ ಮಟ್ಟದಲ್ಲಿ ವೇದಿಕೆ ಕಲ್ಪಿಸುತ್ತದೆ ಎಂಬ ಭರವಸೆ ಹೊಂದಿದ್ದಾರೆ.
#
No Comment! Be the first one.