ಗಂಧರ್ವ, ಕರ್ಫ್ಯೂ, ನಿರ್ಬಂಧ, ಧೈರ್ಯ, ಮಿಸ್ಟರ್.ಎಕ್ಸ್, ಗರುಡ, ಪಾಪಿಗಳ ಲೋಕದಲ್ಲಿ, ಬಣ್ಣದ ಹೆಜ್ಜೆ, ರಫ್ ಅಂಡ್ ಟಫ್, ಶಾಕ್, ಭೈರವಿ ಇನ್ನೂ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಹ.ಸೂ ರಾಜಶೇಖರ್ ಉಸಿರು ನಿಲ್ಲಿಸಿದ್ದಾರೆ. ತೊಂಭತ್ತರ ದಶಕದಲ್ಲಿ ಆಕ್ಷನ್ ಚಿತ್ರಗಳಿಗೇ ಹೆಸರಾಗಿದ್ದವರು ರಾಜಶೇಖರ್. ಇತ್ತೀಚೆಗೆ ತುಳು ಚಿತ್ರಗಳಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದ ಹ.ಸೂ ರಾಜಶೇಖರ್ ಒರಿಯನ್ ತೊಂಡ ಒರಿಯಗಾಪುಜಿ, ರಿಕ್ಷಾ ಡ್ರೈವರ್, ಅಸಲ್ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದರು.
೨೦೧೬ರ ಜೂನ್ ತಿಂಗಳಲ್ಲಿ ರಾಜಶೇಖರ್ ಅವರ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ಅದಾದನಂತರ ರಾಜೇಶಖರ್ ಆರೋಗ್ಯ ಕೂಡಾ ತೀರಾ ಹದಗೆಟ್ಟಿತ್ತು. ಇಂದು ಮಧ್ಯಾಹ್ನ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಆರಂಭಿಸಿ ಮುತ್ತಿನ ಹಾರ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಕಾರ್ಯನಿರ್ವಹಿಸಿದ್ದರು. ಗಂಧರ್ವ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾದ ರಾಜಶೇಖರ್ ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡಿದ್ದರು. ಮೃತರ ಪಾರ್ಥೀವ ಶರೀರವನ್ನು ಹನುಮಂತನಗರದ ಬಳಿ ಇರುವ ಶ್ರೀನಿವಾಸ ನಗರದ ಅವರ ಮನೆಯಲ್ಲಿ ಇರಿಸಲಾಗಿದೆ.