ಬಿಗ್’ಬಾಸ್ ನಂತ ದಟ್ಟದರಿದ್ರದ ಕಾರ್ಯಕ್ರಮಕ್ಕೆ ಹೋಗಿದ್ದಿದ್ದರೆ ಹನುಮಂತನ ಮುಗ್ದತೆ, ವ್ಯಕ್ತಿತ್ವ ಕೂಡಾ ಮಾರಾಟದ ಸರಕಾಗಿಬಿಡುತ್ತಿತ್ತು. ಸದ್ಯಕ್ಕೆ ಅಲ್ಲಿಗೆ ಹೋಗದ ಹನುಮಂತ ಹಳ್ಳಕ್ಕೆ ಬೀಳೋದರಿಂದ ಬಚಾವಾಗಿದ್ದಾನೆ.

ಸಿಂಗರ್ ಹನುಮಂತ ಅಂದರೆ ಜನಕ್ಕೆ ಆಕರ್ಷಣೆ. ಈತನ ಬಗ್ಗೆ ತಿಳಿದುಕೊಳ್ಳುವುದೆಂದರೆ ವಿಚಿತ್ರ ಆಸಕ್ತಿ. ಕುರಿ ಕಾಯುತ್ತಿದ್ದ ಹುಡುಗನೊಬ್ಬ ಇಷ್ಟು ಹೆಸರು ಮಾಡುತ್ತಿದ್ದಾನಲ್ಲ? ಎನ್ನುವ ಕ್ಯೂರಿಯಾಸಿಟಿ. ಯಾವತ್ತು ಮಾಸಲು ಲುಂಗಿ, ಹಳೇ ಅಂಗಿ, ಹೆಗಲಮೇಲೊಂದು ಟವೆಲ್ಲು ಹಾಕಿಕೊಂಡು ಟೀವಿ ಪರದೆ ಮೇಲೆ ಈತ ಕಾಣಿಸಿಕೊಂಡನೋ ಆವತ್ತಿನಿಂದಲೇ ಹನುಮಂತನ ಕುರಿತಾಗಿ ನೋಡುಗರ ಎದೆಯಲ್ಲಿ ಕುತೂಹಲ ಮನೆ ಮಾಡಿತ್ತು. ಇನ್ನು, ಇವನ ಕುಟುಂಬದ ಹಿನ್ನೆಲೆ, ಈತ ಹಾಡುವ ರೀತಿ, ನೇರ ಮತ್ತು ಮುಗ್ದ ಮಾತುಗಾರಿಕೆಯನ್ನು ನೋಡಿದಮೇಲಂತೂ ಹನುಮಂತನ ಬಗೆಗಿನ ಆಸಕ್ತಿ ಇಮ್ಮಡಿಯಾಗಿತ್ತು. ಪರದೆಮೇಲೆ ಹನುಮಂತ ಇದ್ದ ಅಂದರೆ ಜನ ಚಾನೆಲ್ಲು ಬದಲಿಸುತ್ತಿರಲಿಲ್ಲ. ದಿನೇ ದಿನೇ ಸರಿಗಮಪದ ಟಿ.ಆರ್.ಪಿ ಜ್ವರದಂತೆ ಏರಿಕೊಂಡಿತ್ತು. ಜ಼ೀ ಟಿವಿಯ ರಿಯಾಲಿಟಿ ಶೋಗಳು ಬಿಟ್ಟರೆ ಬಹುತೇಕ ವಾಹಿನಿಗಳು, ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಜಾತಿ, ಕುಲಗಳೆಲ್ಲಾ ತುಂಬಾ ಪ್ರಮುಖ ಪಾತ್ರ ವಹಿಸುತ್ತವೆ. ಹುಟ್ಟಿನಿಂದಲೂ ಸಂಗೀತದ ಪರಿಸರದಲ್ಲಿ ಬೆಳೆಯುವ, ಶಾಸ್ತ್ರೀಯ ಸಂಗೀತ ಕಲಿತ ಮಕ್ಕಳೇ ಭಾರತದ ಸಾಕಷ್ಟು ಸಿಂಗಿಂಗ್ ಶೋಗಳಲ್ಲಿ ಗೆದ್ದಿರುವ, ಮುಂದಿರುವ ನಿದರ್ಶನಗಳಿವೆ. ಆದರೆ ಸಂಗೀತದ ಘಮವೇ ಗೊತ್ತಿಲ್ಲದೆ, ರೇಡಿಯೋದಲ್ಲಿ ಹಾಡುಗಳನ್ನು ಕೇಳುತ್ತಾ ಆ ಮೂಲಕವೇ ರಾಗ, ಲಯ, ತಾಳಗಳನ್ನು ಅರ್ಥಮಾಡಿಕೊಂಡ ಹನುಮಂತನಂಥಾ ಎಷ್ಟೋ ಸುಪ್ತ ಪ್ರತಿಭೆಗಳಿರುತ್ತಾರಲ್ಲಾ? ಅಂಥವರಿಗೆ ಪ್ರಾಮಾಣಿಕ ವೇದಿಕೆ ಕಲ್ಪಿಸಿದ್ದು ಜ಼ೀ ಟಿವಿ ಕನ್ನಡ. ಕಳೆದ ಬಾರಿಯ ಸರಿಗಮಪ ಸೀಜ಼ನ್ನಿನಲ್ಲಿ ಗೆದ್ದಿದ್ದು ಮತ್ತೊಬ್ಬ ಹುಡುಗನಾದರೂ ಜನರ ಗಮನವಿದ್ದಿದ್ದು ರನ್ನರಪ್ ಹನುಮಂತಪ್ಪನ ಕಡೆಗೆ.

ಹಣಮಂತ : ಬರೀ ಜೀ ಟೀವಿ ಮಾತ್ರವಲ್ಲ, ಬೇರೆ ಯಾವುದೇ ವಾಹಿನಿಯಲ್ಲಿ ಹನುಮಂತನ ಬಗ್ಗೆ ಪ್ರೋಗ್ರಾಮು ಪ್ರಸಾರ ಮಾಡಿದರೆ ಆ ಸಮಯದಲ್ಲಿ ಟಿ.ಆರ್.ಪಿ. ಏರಿಬಿಡುತ್ತಿತ್ತು. ಖಾಸಗಿ ನ್ಯೂಸ್ ಚಾನೆಲ್ಲೊಂದರಲ್ಲಿ ಹನುಮಂತನ ಕಾರ್ಯಕ್ರಮಕ್ಕೆ ೧೫ ಪಾಯಿಂಟ್ ಟಿಆರ್.ಪಿ ಬಂದು ದಾಖಲೆಯಾಗಿತ್ತು. ಒಂದು ಕಾಲಕ್ಕೆ ಹಾವುಗಳ ಬಗ್ಗೆ ಎಪಿಸೋಡು ಪ್ರಸಾರ ಮಾಡಿದರೆ ಟಿ.ಆರ್.ಪಿ ರೈಸ್ ಆಗುತ್ತದೆ ಎನ್ನುವ ಮಾತಿತ್ತು. ರಜನಿಕಾಂತ್ ಕುರಿತಾಗಿ ಟೆಲಿಕಾಸ್ಟ್ ಆಗುತ್ತಿದ್ದ ಕಾರ್ಯಕ್ರಮಗಳೂ ಸಾಕಷ್ಟು ಜನಪ್ರಿಯತೆ ಪಡೆದಿದ್ದವು. ದರ್ಶನ್ ಕುರಿತಾದ ಯಾವುದೇ ಸಂಚಿಕೆಗಳೂ ಹೆಚ್ಚು ಟಿ.ಆರ್.ಪಿ. ಗಳಿಸುತ್ತವೆ. ಇದರ ಜೊತೆಗೆ ಈಗ ಹನುಮಂತ ಬಂದ ಅಂದರೆ ಜನ ಟೀವಿ ಮುಂದೆ ಬಂದು ಕೂರುವಂತಾಗಿದೆ. ಪ್ರತಿಫಲವಾಗಿ ವಾಹಿನಿಗಳಿಗೆ ಹಣ ಹರಿದುಬರುತ್ತಿದೆ!

ಇದನ್ನು ಗಮನಿಸುತ್ತಲೇ ಬಂದಿದ್ದ ಕಲರ್ಸ್ ಈ ಬಾರಿ ಸರಿಗಮಪ ಮುಗೀತಿದ್ದಂತೇ ಬಿಗ್ ಬಾಸ್’ಗೆ ಕರೆತರುವ ಪ್ಲಾನು ಮಾಡಿತ್ತು. ಆದರೆ ಜ಼ೀ ಟೀವಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಹನುಮಂತನನ್ನು ತೊಡಗಿಸಿಕೊಂಡಿತ್ತು. ಹಾಗೆ ನೋಡಿದರೆ ಹನುಮಂತ ಅದ್ಭುತವಾಗಿ ಹಾಡುತ್ತಿದ್ದನಾದರೂ ಈತನಿಗೆ ಡ್ಯಾನ್ಸು ಗೊತ್ತಿರಲಿಲ್ಲ. ಆದರೆ ಚಾನೆಲ್ಲಿಗೆ ಗೊತ್ತಿತ್ತು ಹನುಮ ಈ ಡ್ಯಾನ್ಸ್ ಶೋಗೆ ಬಂದು ಸುಮ್ಮನೇ ವಾಲಾಡಿ ಹೋದರೂ ಕಾರ್ಯಕ್ರಮ ಕಳೆ ಕಟ್ಟುತ್ತದೆ ಅಂತಾ. ಇಷ್ಟಕ್ಕೂ ಜ಼ೀ ಟೀವಿ ಮೊದಲಿನಿಂದಲೂ ಒಂದು ನಿಯಮವನ್ನು ಪಾಲಿಸಿಕೊಂಡು ಬರುತ್ತಿದೆ. ತಮ್ಮ ಶೋಗಳಲ್ಲಿ ಕಂಟೆಸ್ಟ್ ಮಾಡುವ ಸ್ಪರ್ಧಿಗಳ ಬಳಿ ಆರಂಭದಲ್ಲೇ ಇಂತಿಷ್ಟು ವರ್ಷಗಳ ಕಾಲ ಬೇರೆ ಕಡೆ ಹೋಗಬಾರದು, ಕಮರ್ಷಿಯಲ್ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬಿತ್ಯಾದಿ ನಿಬಂಧನೆಗಳಿಗೆ ಸಹಿ ಹಾಕಿಸಿಕೊಂಡಿರುತ್ತದೆ. ಹೀಗಿದ್ದೂ ಅತಿ ಹೆಚ್ಚು ಸಂಭಾವನೆ ನೀಡಿ ಹನುಮಂತನನ್ನು ಬಿಗ್’ಬಾಸ್’ಗೆ ಕರೆದೊಯ್ಯುವ ಪ್ಲಾನು ನಡೆದಿತ್ತು ಎನ್ನಲಾಗುತ್ತಿದೆ.

‘ದರ್ಶನ್ ಹನುಮಂತನನ್ನು ಕರೆದು ಆ ಕಾರ್ಯಕ್ರಮಕ್ಕೆ ಹೋಗಬೇಡ’ ಅಂದರು ಅದಕ್ಕೇ ಆತ ಹೋಗಿಲ್ಲ ಅಂತೆಲ್ಲಾ ಪುಕಾರುಗಳೆದ್ದಿದ್ದವು. ಆದರೆ ಅದು ಅಕ್ಷರಶಃ ಸುಳ್ಳು. ಅಮಾಯಕ ಮಕ್ಕಳು ಈ ಟೀವಿ ಶೋಗಳು, ದಿಢೀರನೆ ಎದುರಾಗುವ ಜನಪ್ರಿಯತೆಯ ನಡುವೆ ಕಳೆದುಹೋಗಿ, ಬದುಕು ಕೆಡಿಸಿಕೊಂಡುಬಿಡುತ್ತಾರೆ ಅನ್ನೋ ಕಾರಣಕ್ಕೆ ದರ್ಶನ್ ಹನುಮಂತನಿಗೆ ‘ಹುಷಾರು’ ಅಂತಾ ಕಿವಿಮಾತು ಹೇಳಿರಬಹುದು. ದರ್ಶನ್ ತಮ್ಮ ಬಳಿ ಹೋದ ಯಾರೇ ನಟ, ನಿರ್ದೇಶಕ, ನಿರ್ಮಾಪಕರಿಗೆ ‘ಜೋಪಾನವಾಗಿ ಹೆಜ್ಜೆ ಇಡಿ. ಯಾಮಾರಬೇಡಿ’ ಎಂದು ಎಚ್ಚರಿಸುತ್ತಿರುತ್ತಾರೆ. ಆದರೆ ನೇರವಾಗಿ ಇದನ್ನು ಮಾಡಿ, ಮಾಡಬೇಡಿ ಅಂತಾ ಯಾವತ್ತೂ ಆಜ್ಞೆ ಮಾಡುವವರಲ್ಲ. ಇಷ್ಟೆಲ್ಲದರ ನಡುವೆ ಹನುಮಂತ ಕೂಡಾ ಎಲ್ಲೋ ಇದ್ದ ತನಗೆ ಇಷ್ಟು ಚೆಂದದ ಬದುಕು ಕಲ್ಪಿಸಿರುವ ವಾಹಿನಿಯನ್ನು ಬಿಟ್ಟು ಕೇವಲ ಹಣಕ್ಕಾಗಿ ಮತ್ತೊಬ್ಬರ ಬಳಿ ಹೋಗಿ ನಿಲ್ಲುವುದನ್ನು ನಿರಾಕರಿಸಿದ ಎನ್ನುವ ಮಾತೂ ಇದೆ.

ಇವೆಲ್ಲ ಏನೇ ಆಗಲಿ ಬಿಗ್’ಬಾಸ್ ನಂತ ದಟ್ಟದರಿದ್ರದ ಕಾರ್ಯಕ್ರಮಕ್ಕೆ ಹೋಗಿದ್ದಿದ್ದರೆ ಹನುಮಂತನ ಮುಗ್ದತೆ, ವ್ಯಕ್ತಿತ್ವ ಕೂಡಾ ಮಾರಾಟದ ಸರಕಾಗಿಬಿಡುತ್ತಿತ್ತು. ಸದ್ಯಕ್ಕೆ ಅಲ್ಲಿಗೆ ಹೋಗದ ಹನುಮಂತ ಹಳ್ಳಕ್ಕೆ ಬೀಳೋದರಿಂದ ಬಚಾವಾಗಿದ್ದಾನೆ.

CG ARUN

ಪ್ರಸೆಂಟ್ ಪ್ರಪಂಚದಲ್ಲಿ ಯಾವ್ಯಾವುದು ಎಷ್ಟೆಷ್ಟು ಪರ್ಸೆಂಟ್ ಇದೆ?

Previous article

ಕನ್ನಡಿಗರ ಘನತೆ ಹೆಚ್ಚಿಸಿದ ತಮಿಳುನಟ!

Next article

You may also like

Comments

Leave a reply

Your email address will not be published. Required fields are marked *