ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸೈರಾ ನರಸಿಂಹರೆಡ್ಡಿ. ರಾಷ್ಟ್ರದಾದ್ಯಂತ ಈಗಾಗಲೇ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ತೇಜ್ ತಮ್ಮದೇ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಜಗತ್ತು ಗುರುತಿಸದ ಸ್ವಾತಂತ್ರ್ಯ ಹೋರಾಟಗಾರನ ಕಥೆ ಆಧಾರಿತ ಚಿತ್ರವಾಗಿರುವ ಸೈರಾ ನರಸಿಂಹ ರೆಡ್ಡಿ ತಾರಾಗಣದಿಂದಲೂ ಹೈಪ್ ಕ್ರಿಯೇಟ್ ಮಾಡಿದೆ. ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್, ತಮಿಳಿನ ವಿಜಯ್ ಸೇತುಪತಿ ಹಾಗೂ ಲೀಡ್ ರೋಲ್ನಲ್ಲಿ ಚಿರಂಜೀವಿ ಅಭಿನಯಿಸಿದ್ದಾರೆ.
ಬಹುಭಾಷೆಗಳಲ್ಲಿ ಡಬ್ ಆಗುತ್ತಿರುವ ಸೈರಾ ನರಸಿಂಹರೆಡ್ಡಿ ಕನ್ನಡಕ್ಕೂ ಡಬ್ ಆಗುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಕನ್ನಡ ವರ್ಷನ್ನಿನ ಟೀಸರ್ ಕೂಡ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿದೆ. ಟೀಸರ್ ರಿಲೀಸ್ ಗೂ ಮುನ್ನವೇ ಸೈರಾ ನರಸಿಂಹ ರೆಡ್ಡಿ ಕನ್ನಡ ವರ್ಷನ್ನಿಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಲಿದ್ಧಾರೆಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಟೀಸರ್ ರಿಲೀಸ್ ಆದ ಮೇಲೆ ಅದು ರಾಕಿಂಗ್ ಸ್ಟಾರ್ ಯಶ್ ಧ್ವನಿಯಾಗದಿರುವುದು ಸಾಕಷ್ಟು ನಿರಾಸೆಗೂ ಕಾರಣವಾಗಿತ್ತು. ಟೀಸರ್ ಗೆ ಯಶ್ ಧ್ವನಿ ನೀಡದೇ ಬದಲಿಗೆ ಸ್ಯಾಂಡಲ್ ವುಡ್ ನ ಜಂಪಿಂಗ್ ಸ್ಟಾರ್ ಅಂತಾನೇ ಫೇಮಸ್ ಆಗಿರುವ ಹರೀಶ್ ರಾಜ್ ಡಬ್ ಮಾಡಿದ್ದಾರೆ. ಅಲ್ಲದೇ ವಿಜಯ್ ಸೇತುಪತಿ ಪಾತ್ರಕ್ಕೂ ಇವರೇ ಧ್ವನಿ ನೀಡಿದ್ದಾರೆನ್ನಲಾಗುತ್ತಿದೆ. ಮೇಲಾಗಿ ಅವರನ್ನು ವಿಜಯ್ ಸೇತುಪತಿ ಪಾತ್ರಕ್ಕೆ ಡಬ್ ಮಾಡಲು ಚಿತ್ರತಂಡ ಕರೆಸಿದ್ದಂತೆ. ಕೊನೆಗೆ ಟೀಸರ್ ಗೂ ನೀವೇ ವಾಯ್ಸ್ ಕೊಟ್ಟು ಬಿಡಿ ಎಂದು ಚಿತ್ರತಂಡವು ಕೇಳಿಕೊಂಡ ಕಾರಣಕ್ಕೆ ಸಮ್ಮತಿಸಿದ್ದಾಗಿ ಹೇಳುತ್ತಾರೆ ಜಂಪಿಂಗ್ ಸ್ಟಾರ್.