
ರಿಶಬ್ ಶೆಟ್ಟಿ ಮತ್ತವರ ತಂಡದ ಮುಂದೆ ದೊಡ್ಡದೊಂದು ಸವಾಲಿತ್ತು. ಅದೇನೆಂದರೆ, ನಾಲ್ಕು ದಶಕಗಳ ಹಿಂದೆ ಇದೇ ಶೀರ್ಷಿಕೆಯ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ರಜನಿಕಾಂತ್ ರಂಥಾ ಈವತ್ತಿನ ಇಂಡಿಯಾ ಸೂಪರ್ ಸ್ಟಾರ್ ಆ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಮತ್ತದೇ ಹೆಸರಿನ ಸಿನಿಮಾವನ್ನು ಕಟ್ಟಿ ನಿಲ್ಲಿಸಿ ಸೈ ಅನ್ನಿಸಿಕೊಳ್ಳೋದು ಅತಿ ದೊಡ್ಡ ಜವಾಬ್ದಾರಿಯಾಗಿತ್ತು. ಈ ನಿಟ್ಟಿನಲ್ಲಿ ಕಥಾ ಸಂಗಮದ ಕಡೆಗೆ ಎಲ್ಲರ ಕಣ್ಣು ನೆಟ್ಟಿತ್ತು!
ಈ ಸಿನಿಮಾ ನೋಡಿದಾಗ ಅನ್ನಿಸುವುದು. ಏಳು ತಂಡದ, ಏಳು ಕತೆಗಳನ್ನು ಸೇರಿಸಿ ದಾಖಲೆ ನಿರ್ಮಿಸಲು ಮಾಡಿದ ಸಿನಿಮಾವಲ್ಲ. ಬದಲಿಗೆ ಒಂದೊಂದೂ ಕತೆಗಳೂ ಒಂದೊಂದು ಬಗೆಯಲ್ಲಿ ರಂಜಿಸುತ್ತಾ, ಹೊಸದನ್ನೇನೋ ಹೇಳಲು ಪ್ರಯತ್ನಿಸಿವೆ. ಇದು ಏಳು ಪ್ರತ್ಯೇಕ ತಂಡ ರೂಪಿಸಿರುವ ಕಥೆಗಳಾದರೂ ಎಲ್ಲೂ ಬೇರೆ ಬೇರೆ ಅನ್ನಿಸುವುದಿಲ್ಲ. ಆಯಾ ಕಥೆಗಳಿಗೆ ತಕ್ಕಂತಾ ಹಿನ್ನೆಲೆ, ಪಾತ್ರಗಳು, ಬಣ್ಣಗಳನ್ನು ಬಳಸಲಾಗಿದೆ.
ಮೊದಲಿಗೆ ಶುರುವಾಗೋದು ಕಿಶೋರ್ ಮತ್ತು ಯಜ್ಞ ಶೆಟ್ಟಿ ಭೂಮಿಕೆಯ ಬಾಂಧವ್ಯದ ಕಥೆ. ನಂತರ ಪ್ರಕಾಶ್ ಬೆಳವಾಡಿ ಅಭಿನಯದ ಭ್ರಮೆ ಮತ್ತು ವಾಸ್ತವದ ಕಥೆ. ಮುಂದಾಗುವುದನ್ನು ಮೊದಲೇ ತಿಳಿದುಕೊಂಡರೆ ಏನಾಗುತ್ತೆನ್ನುವುದರ ರಾಜ್ ಬಿ ಶೆಟ್ಟಿ ಅಭಿನಯ್ ಗಿರ್ ಗಿಟ್ಲೆ, ಮೀಡಿಯಾ ಸೃಷ್ಟಿಸುವ ಯಡವಟ್ಟನ್ನು ಬಿಚ್ಚಿಡುವ ಉತ್ತರ, ಕಾಯಕದ ಮಹತ್ವ ತಿಳಿಸುವ ಪಡುವಾರಳ್ಳಿ, ಮಾತೇ ಇಲ್ಲದೆ ಅಚ್ಛರಿ ಉಂಟು ಮಾಡುವ ಸಾಗರ ಸಂಗಮ ಮತ್ತು ಕಳೆದುಹೋಗುವ ಬದುಕನ್ನು ತರೆದಿಡುವ ಲಚ್ಚವ್ವ… ಹೀಗೆ ಭಿನ್ನ ನೋಟಗಳ ಕಿರುಚಿತ್ರಗಳನ್ನೆಲ್ಲಾ ಒಂದು ಕಡೆ ಜೋಡಿಸಿಟ್ಟು ಕಥಾ ಸಂಗಮವನ್ನಾಗಿಸಿರುವುದು ರಿಷಬ್ ಟೀಮಿನ ಕ್ರಿಯಾಶೀಲತೆ ಅಂತ ಬೇಕಾದರೂ ಅನ್ನಬಹುದು, ಬುದ್ಧಿವಂತಿಕೆ ಎಂದು ಕೂಡಾ ಹೇಳಬಹುದು!
ಒಟ್ಟಾರೆ ಒಂದಕ್ಕಿಂತಾ ಒಂದು ಹೊಸತನದ ಕಥೆಗಳು ಕಥಾಸಂಗಮದಲ್ಲಿ ಬೆಸೆದುಕೊಂಡಿವೆ. ಈ ಎಲ್ಲ ಕಥೆಗಳಿಗೂ ಒಂದಕ್ಕೊಂದು ಲಿಂಕು ಇದೆಯಾ? ಅನ್ನೋದೆಲ್ಲಾ ಸಿನಿಮಾ ನೋಡಿ ತಿಳಿದುಕೊಳ್ಳಬೇಕು. ಇಂಥದ್ದೊಂದು ಸಿನಿಮಾವನ್ನು ಪ್ರತಿಯೊಬ್ಬರೂ ನೋಡಬೇಕು. ಈ ಪ್ರಯತ್ನಕ್ಕೆ ಮುಂದಾಳತ್ವ ವಹಿಸಿದ ರಿಷಬ್ ಶೆಟ್ಟಿ ಮತ್ತವರ ತಂಡವನ್ನೊಮ್ಮೆ ಅಭಿನಂದಿಸಲೇಬೇಕು.

