ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ‘ಎಸ್‌ಆರ್‌ಕೆ’ ಚಿತ್ರ ಅದೇಕೋ ಮರೆಯಾದಂತಿತ್ತು. ಯಾಕೆಂದರೆ, ಇದು ಕಳೆದ ವರ್ಷವೇ ಶಿವಣ್ಣ ಒಪ್ಪಿಕೊಂಡು ಸೆಟ್ಟೇರಿದ್ದ ಚಿತ್ರ. ಇದೀಗ ಆ ಚಿತ್ರಕ್ಕೆ ಹೊಸಾ ವೇಗ ಸಿಕ್ಕಿದೆ. ಈ ಚಿತ್ರಕ್ಕೆ ಶಿವಣ್ಣನ ನಾಯಕಿಯ ಆಯ್ಕೆಯೂ ನಡೆದಿದೆ.
ಲಕ್ಕಿ ಗೋಪಾಲ್ ನಿರ್ದೇಶನ ಮಾಡಲಿರೋ ಈ ಚಿತ್ರ ಇದೇ ಡಿಸೆಂಬರಿನಿಂದ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಸ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯದ್ದು ಉಪನ್ಯಾಸಕಿಯ ಪಾತ್ರ. ಆ ಪಾತ್ರಕ್ಕೆ ತೆಲುಗಿನ ನಟಿ ಇಶಾ ರಬ್ಬಾ ಆಯ್ಕೆಯಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಶೈನಪ್ ಆಗಿರೋ ಇಶಾ ಈ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ರಂಥಾ ಸ್ಟಾರ್ ನಟರ ಜೊತೆ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ ಇಶಾ. ಈಕೆ ಈಗಾಗಲೇ ಆರೇಳು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ನಟನೆ, ಸೌಂದರ್ಯಾ ಎಲ್ಲವನ್ನೂ ಹೊಂದಿರುವ ಇಶಾ ಇಷ್ಟರಲ್ಲಿಯೇ ಬಾಲಿವುಡ್‌ಗೆ ಹಾರಲಿದ್ದಾಳೆಂಬ ಸುದ್ದಿ ತೆಲುಗು ಚಿತ್ರರಂಗದ ತುಂಬಾ ತುಂಬಿಕೊಂಡಿತ್ತು. ಆದರೆ ಆಕೆ ಕನ್ನಡ ಚಿತ್ರರಂಗದತ್ತ ಬಂದಿದ್ದಾಳೆ.
ಈಗಾಗಲೇ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿ ಪಳಗಿಕೊಂಡಿರುವ ಲಕ್ಕಿ ಗೋಪಾಲ್ ಎಸ್‌ಆರ್‌ಕೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಆರಂಭದಿಂದಲೂ ತಾನು ನಿರ್ದೇಶಕನಾದರೆ ಶಿವಣ್ಣನ ಚಿತ್ರ ಮಾಡಬೇಕೆಂಬ ಕನಸು ಹೊಂದಿದ್ದವರು ಗೋಪಾಲ್. ಮೊದಲ ಚಿತ್ರದಲ್ಲಿಯೇ ಅವರು ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.
#