ಸಾಕಷ್ಟು ಸಿನಿಮಾಗಳಲ್ಲಿ ಜೈಲಿನ ಚಿತ್ರಣಗಳು ಇದ್ದೇ ಇರುತ್ತವೆ. ಮೊದಲೆಲ್ಲಾ ವರ್ಕಿಂಗ್ ಜೈಲುಗಳಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದರು. ʼಕೆಂಪʼ ಎನ್ನುವ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೈದಿಯೊಬ್ಬ ಪರಪ್ಪನ ಅಗ್ರಹಾರದಿಂದ ಎಸ್ಕೇಪ್ ಆಗಿಬಿಟ್ಟಿದ್ದ. ಭಾರತದ ಇತರೇ ಜೈಲುಗಳಲ್ಲೂ ಇಂಥಾ ಪ್ರಕರಣಗಳಾಗಿದ್ದವು. ಸಿನಿಮಾದವರ ಸಾವಾಸವೇ ಬೇಡ ಅಂತಾ ಬಂದೀಖಾನೆ ಇಲಾಖೆ ತೀರ್ಮಾನ ಮಾಡಿಬಿಟ್ಟಿತ್ತು. ಬೆಂಗಳೂರಿನ ಹಳೇ ಸೆಂಟ್ರಲ್ ಜೈಲು ಕೂಡಾ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಮಾರ್ಪಟ್ಟಿರೋದರಿಂದ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ. ಜೈಲರ್ನಂತಾ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಇಡೀ ಜೈಲಿನ ಸೆಟ್ ರೂಪಿಸಿಕೊಳ್ಳುತ್ತಾರೆ. ಎಲ್ಲ ಸಿನಿಮಾದ ನಿರ್ಮಾಪಕರಿಗೂ ಹಾಗೆ ಕೋಟಿಗಟ್ಟಲೆ ಖರ್ಚು ಮಾಡುವ ತಾಕತ್ತಾದರೂ ಎಲ್ಲಿಂದ ಬರಬೇಕು?
ಸದ್ಯ ಭಾರತದ ಯಾವುದೇ ಭಾಷೆಯ ಸಿನಿಮಾಗೆ ಜೈಲಿನ ವಾತಾವರಣ ಬೇಕು ಅಂದರೆ ಅವರು ಶಿವಮೊಗ್ಗಕ್ಕೇ ಬರಬೇಕು. ಸರಿಸುಮಾರು ನೂರೈವತ್ತು ವರ್ಷ ಹಳೆಯದಾದ ಈ ಹೆರಿಟೇಜ್ ಕಟ್ಟಡವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಒಟ್ಟು ಐವತ್ತಕ್ಕೂ ಹೆಚ್ಚು ಎಕರೆಯಷ್ಟಿದೆ. ಅದರಲ್ಲಿ ಹನ್ನೊಂದು ಎಕರೆ ಜಾಗದಲ್ಲಿ ಜೈಲಿನ ವಿವಿಧ ಬ್ಲಾಕುಗಳಿವೆ. ನಡುವೆ ವಾಚ್ ಟವರು, ಬಟ್ಟೆ ಒಗೆಯುವ ಜಾಗ, ಸಾಲಿಟರಿ ಸೆಲ್ಲುಗಳು, ದೇವಸ್ಥಾನ, ಅರಳೀಕಟ್ಟೆ ಎಲ್ಲವೂ ಇದೆ. ಇಂಥದ್ದೊಂದು ಕಲ್ಲಿನ ಕಟ್ಟಡದ ಮೇಲೆ ಇಂದು ಇಡೀ ಭಾರತೀಯ ಚಿತ್ರರಂಗದ ಕಣ್ಣು ಬಿದ್ದಿದೆ. ಉಪೇಂದ್ರ ಅಭಿನಯದ ಬುದ್ದಿವಂತ೨ ಚಿತ್ರ, ತಮಿಳಿನ ಮಾಸ್ಟರ್ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿದ್ದವು. ಇದರ ನಂತರ ಎಲ್ಲಾ ಭಾಷೆಯವರೂ ಇಲ್ಲಿಗೆ ಬರಲು ಆರಂಭಿಸಿದರು. ಈ ಜೈಲಿನ ಆವರಣವನ್ನು ಇಷ್ಟಿಷ್ಟು ಚದರ ಮೀಟರ್ ಬಳಸಿಕೊಳ್ಳಲು ಇಂತಿಷ್ಟು ಅಂತಾ ಶುಲ್ಕ ವಿಧಿಸಲಾಗುತ್ತದೆ. ಅದರಿಂದ ಬಂದ ಹಣವನ್ನು ಹಳೇ ಜೈಲಿನ ಜೀರ್ಣೋದ್ಧಾರಕ್ಕಾಗಿ ಇರುವ ಟ್ರಸ್ಟ್ ಹೆಸರಿಗೆ ಪಡೆಯಲಾಗುತ್ತದೆ.
ಜೈಲಿನಲ್ಲಿ ಚಿತ್ರೀಕರಣ ಅನುಮತಿ ಹೇಗೆ?
ಮೊದಲಿಗೆ ಡಿ.ಸಿ. ಆಫೀಸಿನಲ್ಲಿ ಶಿರಸ್ತೇದಾರರ ಬಳಿ ಇಷ್ಟು ದಿನ ಚಿತ್ರೀಕರಣಕ್ಕೆ ಅನುಮತಿ ಬೇಕು ಅಂತಾ ನಿರ್ಮಾಣ ಸಂಸ್ಥೆಯ ಲೆಟರ್ಹೆಡ್ಡಿನಲ್ಲೊಂದು ಪತ್ರ ಕೊಡಬೇಕು. ಅಲ್ಲಿಂದ ಎಸ್.ಪಿ. ಆಫೀಸಿಗೆ ವರದಿಗಾಗಿ ಕಳಿಸುತ್ತಾರೆ. ಅಲ್ಲಿಂದ ಪತ್ರ ಡಿ.ವೈ.ಎಸ್.ಪಿ. ಕಛೇರಿಗೆ, ನಂತರ ಜಯನಗರ ಪೊಲೀಸ್ ಠಾಣೆಗೆ ಇ-ಮೇಲ್ನಲ್ಲೇ ರವಾನೆಯಾಗುತ್ತದೆ. ಒಟ್ಟಾರೆ ಪೊಲೀಸ್ ಇಲಾಖೆಯಿಂದ ಎನ್.ಓ.ಸಿ. ಬಂದು ಡಿ.ಸಿ. ಕಛೇರಿಗೆ ತಲುಪುತ್ತದೆ. ಈಕಡೆಯಿಂದ ಪಿ.ಡಬ್ಲೂಡಿ ಕಛೇರಿಯವರು ಚದರ ಮೀಟರ್ ಲೆಕ್ಕದಲ್ಲಿ ಹಣ ನಿಗಧಿ ಮಾಡುತ್ತಾರೆ. ಅದನ್ನು ಡಿಡಿ ಅಥವಾ ಸಿಡಿಎಂ ಮೂಲಕ ಪಾವತಿ ಮಾಡಿ, ಅದರ ರೆಸಿಪ್ಟು ಮತ್ತು ಪಿಡಬ್ಲೂಡಿ ಎಂಜಿನಿಯರ್ ನೀಡಿದ ಪತ್ರ ಕೂಡಾ ಡಿ.ಸಿ. ಕಛೇರಿ ತಲುಪುತ್ತದೆ. ಇವೆಲ್ಲವೂ ಮತ್ತೆ ಶಿರಸ್ತೇದಾರರ ಮೂಲಕ ಎಡಿಸಿ ಮತ್ತು ಡಿಸಿ ಅವರ ಟೇಬಲ್ಲಿಗೆ ಹೋಗಿ ಅಂತಿಮವಾಗಿ ಅನುಮತಿ ಮಂಜೂರಾಗುತ್ತದೆ. ಇದನ್ನು ತೆಗೆದುಕೊಂಡು ಹೋಗಿ ಬಂದೀಖಾನೆಯ ಡಿ ಎಸ್ ಪಿಯವರ ಕೈಗೆ ತಲುಪಿಸಬೇಕು. ಆ ನಂತರವಷ್ಟೇ ಚಿತ್ರೀಕರಣ ಪೂರ್ವಸಿದ್ಧತೆ ಮತ್ತು ಚಿತ್ರೀಕರಣಕ್ಕೆ ಅನುಮತಿ ದೊರೆಯುತ್ತದೆ. ಆರಂಭದ ಪತ್ರದಲ್ಲೇ ಪ್ರಿಪರೇಷನ್ಗಾಗಿ ಇಷ್ಟು ದಿನ ಬೇಕು ಅಂತಾ ಹೇಳಿದರೆ ಅದಕ್ಕೆ ಶುಲ್ಕ ವಿಧಿಸುವುದಿಲ್ಲ. ಚಿತ್ರೀಕರಣದ ದಿನಕ್ಕೆ ಮಾತ್ರ ಫೀಸು ಕಟ್ಟಿಸಿಕೊಳ್ಳುತ್ತಾರೆ.
ಸಿನಿಮಾ ಪ್ರಿಯ ಅಧಿಕಾರಿಗಳು!
ಸಿನಿಮಾ ಚಿತ್ರೀಕರಣ ಸುಸೂತ್ರವಾಗಿ ನಡೆಯಬೇಕೆಂದರೆ, ಸ್ಥಳೀಯ ಅಧಿಕಾರಿಗಳ ಸಹಕಾರ ಅತಿ ಮುಖ್ಯ. ಪುಣ್ಯಕ್ಕೆ ಶಿವಮೊಗ್ಗದಲ್ಲಿರುವ ಪ್ರತಿಯೊಬ್ಬ ಅಧಿಕಾರಿಯೂ ಸಿನಿಮಾ ಪ್ರಿಯರು, ಒಳ್ಳೇ ಮನಸ್ಸಿನವರೇ ಇದ್ದಾರೆ. ಯುವ ಐ.ಪಿ.ಎಸ್ ಅಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಇಲ್ಲಿನ ಎಸ್ಪಿಯಾಗಿದ್ದು ಅನುಮತಿಗೆ ಯಾವ ತಕರಾರೂ ಮಾಡೋದಿಲ್ಲ. ಬೆಂಗಳೂರಿನಲ್ಲಿ ಹಲವು ಪ್ರಮುಖ ಪ್ರಕರಣಗಳನ್ನು ಪತ್ತೆ ಮಾಡಿದ್ದ ಬಾಲರಾಜ್ ಸಾಹೇಬ್ರು ಈಗ ಗ್ರಾಮಾಂತರ ಡಿವೈಎಸ್ಪಿ ಆಗಿದ್ದಾರೆ. ಯಂಗ್ ಅಂಡ್ ಎನರ್ಜಿಟಿಕ್ ಸುರೇಶ್ ಅವರು ಕೂಡಾ ಡಿವೈಎಸ್ಪಿಯಾಗಿದ್ದಾರೆ. ಕೋಲಾರದಲ್ಲಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣರಾಗಿದ್ದ ಡಾ.ಆರ್. ಸೆಲ್ವಮಣಿ ಈಗ ಶಿವಮೊಗ್ಗದ ಡಿಸಿ… ತೀರಾ ಸಣ್ಣ ವಯಸ್ಸಿಗೇ ಕೆಎಎಸ್, ಐಎಎಸ್ ಎರಡನ್ನೂ ಪಾಸ್ ಮಾಡಿರುವ ಸಿದ್ದಲಿಂಗರೆಡ್ಡಿ ಎಡಿಸಿ ಯಾವುದೇ ತಕರಾರಿಲ್ಲದೆ ಅನುಮತಿ ನೀಡುತ್ತಾರೆ. ಶಿರಸ್ತೇದಾರ್ ರೇಖಾ ಮೇಡಂ ಎಲ್ಲ ಪತ್ರವ್ಯವಹಾರವನ್ನೂ ಸರಾಗವಾಗಿ ಮಾಡಿಕೊಡುತ್ತಾರೆ. ಪಿ.ಡಬ್ಲೂಡಿ ಮುಖ್ಯ ಎಂಜಿನಿಯರ್ ಸಂಪತ್ ಕುಮಾರ್ ಕೂಡಾ ಅಷ್ಟೇ ಸಹಕರಿಸುತ್ತಾರೆ. ಪಿ.ಡಬ್ಲೂಡಿ ಕಛೇರಿಯ ಸಿಬ್ಬಂದಿಗೆ ಮಾತ್ರ ಇನ್ನೂ ಚಿತ್ರರಂಗದ ಸಂಕಟ ಗೊತ್ತಿದ್ದಂತೆ ಕಾಣುತ್ತಿಲ್ಲ. ಅದಕ್ಕೇ ಅಧಿಕಾರಿಯ ಟೇಬಲ್ಲಿಗೆ ಫೈಲು ತಲುಪಿಸಲು ಸ್ವಲ್ಪ ಕಾಯಿಸಿ, ಸತಾಯಿಸುತ್ತಾರೆ. ಜಯನಗರ ಇನ್ಸ್ಪೆಕ್ಟರ್ ಜಗದೀಶ್ ಮತ್ತು ಬಂದೀಖಾನೆ ಡಿಎಸ್ಪಿ ಮಂಜುನಾಥ್ ಅಣಜಿ ಅವರ ಸಿನಿಮಾ ಪ್ರೀತಿ ದೊಡ್ಡದು. ʻʻಇಲ್ಲಿ ಸಿನಿಮಾ ಜನ ಬರಲು ಶುರು ಮಾಡಿದರೆ, ನಮ್ಮ ಶಿವಮೊಗ್ಗದ ಲಾಡ್ಜ್ಗಳು ತುಂಬುತ್ತವೆ, ಸುತ್ತ ಮುತ್ತ ವ್ಯಾಪಾರ ವಹಿವಾಟು ಹೆಚ್ಚುತ್ತದೆ. ನೂರಾರು ಜನ ಜೂನಿಯರ್ ಆರ್ಟಿಸ್ಟುಗಳಿಗೆ ಕೆಲಸ ಸಿಗುತ್ತವೆ. ಈ ಜೈಲು ಕೂಡಾ ಚಿತ್ರೋದ್ಯಮಕ್ಕೆ ಅನುಕೂಲವಾಬೇಕು.ʼʼ ಅಂತಾ ಈ ಇಬ್ಬರೂ ಅಧಿಕಾರಿಗಳು ಬಯಸುತ್ತಾರೆ. ಡಿಎಸ್ಪಿ ಮಂಜುನಾಥ್ ಅಣಜಿ ಅವರಂತೂ ಚಿತ್ರೀಕರಣಕ್ಕೆ ಬಂದ ಸಿನಿಮಾ ತಂಡಗಳನ್ನು ಆತ್ಮೀಯವಾಗಿ ಭಾವಣಿಸುತ್ತಾರೆ.
ಏನು ಬೇಕು?
ಬಹುಶಃ ಈ ವಿಚಾರಗಳನ್ನು ಯಾವ ಚಿತ್ರತಂಡವೂ ಅಧಿಕಾರಿಗಳ ಗಮನಕ್ಕೆ ತಂದಿಲ್ಲವೋ ಏನೋ? ಚೆಂದದ ವಾತಾವರಣದಿಂದ ಕೂಡಿರುವ ಶಿವಮೊಗ್ಗ ಜೈಲಿನಲ್ಲಿ ನೀರಿನ ವ್ಯವಸ್ಥೆ ಇಲ್ಲ. ಪಾತ್ರೆ ಪಗಡೆ ತೊಳೆಯಲೂ ಹೊರಗಿನಿಂದ ನೀರು ತರಿಸಿಕೊಳ್ಳಬೇಕು. ರೈನ್ ಎಫೆಕ್ಟ್ ಇದ್ದರಂತೂ ವಾಟರ್ ಸಪ್ಲೈಯರುಗಳಿಗೆ ಹಬ್ಬ. ಒಂದಕ್ಕೆ ಎರಡು ಲೆಕ್ಕ ಹೇಳಿ ಕಾಸು ಪೀಕುತ್ತಾರೆ. ಎಂಥದ್ದೇ ಜನರೇಟರ್ ಇದ್ದರೂ ಜೈಲಿನಲ್ಲಿ ಸಣ್ಣ ಪುಟ್ಟ ಸೆಟ್ ವರ್ಕ್ ಮಾಡಿಕೊಳ್ಳಲು ಎಲೆಕ್ಟ್ರಿಸಿಟಿ ಕನೆಕ್ಷನ್ ಬೇಕೇಬೇಕು. ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಿ, ಅದಕ್ಕೆ ಪ್ರತ್ಯೇಕ ಫೀಸು ಕಟ್ಟಿಸಿಕೊಂಡರೆ ನಿಜಕ್ಕೂ ಸಿನಿಮಾ ಮಂದಿಗೆ ಅನುಕೂಲವಾಗುತ್ತದೆ. ಹಾಗೆಯೇ, ಹಲವು ವರ್ಷಗಳಿಂದ ಜನರ ಓಡಾಟ ನಿಂತಿದ್ದರಿಂದ, ಜೈಲಿನಲ್ಲಿ ವಿಪರೀತ ಹಾವುಗಳು ಬಂದು ಸೇರಿಕೊಂಡಿವೆ. ಕ್ಯಾಮೆರಾ, ಲೈಟಿಂಗ್ ಮಾಡುವವರು ಎಲ್ಲೆಂದರಲ್ಲಿ ಓಡಾಡಬೇಕಿರುವುದರಿಂದ ಹಾವುಗಳನ್ನು ಹಿಡಿದು ಬೇರೆಡೆ ಬಿಡುವ ವ್ಯವಸ್ಥೆ ಆಗಬೇಕು. ಎಲ್ಲಕ್ಕಿಂತಾ ಮುಖ್ಯವಾಗಿ ಸದ್ಯ ಪರ್ಮಿಷನ್ ಪಡೆದುಕೊಳ್ಳಲು ಬೇಕಿರುವ ಪ್ರೋಸೆಸ್ ಒಂಚೂರು ಸರಳವಾಗಬೇಕು. ಈಗಿರುವ ದೀರ್ಘವಾದ ಪ್ರಕ್ರಿಯೆಯಿಂದ ಬ್ರೋಕರುಗಳಷ್ಟೇ ಲಾಭ ಮಾಡಲು ಸಾಧ್ಯ.
No Comment! Be the first one.