ಇದ್ದದ್ದನ್ನು ಇದ್ದಂತೇ ಹೇಳಿಬಿಡುವುದು, ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಹೋಗಿ ಇನ್ನೆಲ್ಲೋ ಬ್ಯಾಲೆನ್ಸ್ ಕಳೆದುಕೊಳ್ಳುವುದು, ಅಗತ್ಯವೇ ಇಲ್ಲದ ಕಾಂಟ್ರವರ್ಸಿಗಳಲ್ಲಿ ಸಿಕ್ಕಿಕೊಳ್ಳೋದು… ಕಡೆಗೆ, ಎಲ್ಲವನ್ನೂ ಮರೆತು ಯಥಾ ಪ್ರಕಾರ ತಮ್ಮಷ್ಟಕ್ಕೆ ತಾವು ಸಿನಿಮಾ ಮಾಡುತ್ತಾ ಹೋಗೋದು ನಿರ್ಮಾಪಕ ಸೂರಪ್ಪ ಬಾಬು ಅವರ ಗುಣ.
ಸೂರಪ್ಪ ಬಾಬು ಚಿತ್ರರಂಗದಲ್ಲಿ ತೀರಾ ಗ್ರೌಂಡ್ ಲೆವೆಲ್ಲಿನಿಂದ ಹಂತ ಹಂತವಾಗಿ ಮೇಲೆ ಬಂದವರು. ಬಾಬಣ್ಣ ಸಿನಿಮಾ ನಿರ್ಮಾಣ ಮಾಡದೇ ಹೋಗಿದ್ದಿದ್ದರೆ ಇವತ್ತಿಗೆ ಜಗ್ಗೇಶ್, ಉಪೇಂದ್ರ ಚಿತ್ರರಂಗದಲ್ಲಿ ನಿಲ್ಲುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ತರ್ಲೆ ನನ್ ಮಗ ಚಿತ್ರದಿಂದ ಹಿಡಿದು ಕೋಟಿಗೊಬ್ಬ-3 ತನಕ ಪಾಲುದಾರಿಕೆಯಲ್ಲಿ ಮತ್ತು ಸ್ವತಂತ್ರ ನಿರ್ಮಾಪಕರಾಗಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಇವರು ಈ ಉದ್ಯಮದ ಇಂಚಿಂಚೂ ಸಮಸ್ಯೆಗಳನ್ನು ಬಲ್ಲವರು. ಕಷ್ಟ ಸುಖ, ಲಾಭ ನಷ್ಟಗಳ ಕಡೆ ತಲೆ ಕಡಿಸಿಕೊಳ್ಳದೆ, ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಾ ಬಂದಿರುವ ಕೆಲವೇ ವೃತ್ತಿಪರ ನಿರ್ಮಾಪಕರಲ್ಲಿ ಎಂ.ಬಿ. ಬಾಬು ಕೂಡಾ ಒಬ್ಬರು.
ಅದ್ಯಾವುದೋ ಕಾಲದಲ್ಲಿ ಒಂದಿಷ್ಟು ಸಿನಿಮಾಗಳನ್ನು ಮಾಡಿ, ಅದರ ಕ್ರೆಡಿಟ್ಟಿನಲ್ಲೇ ಬದುಕುತ್ತಿರುವವರು, ಅದೇ ಹಳೇ ರೀಲು ಬಿಟ್ಟುಕೊಂಡು ಓಡಾಡುತ್ತಿರುವವರು, ಯಾರದ್ದೋ ದುಡ್ಡಿನಲ್ಲಿ ನಿರ್ಮಾಪಕರೆನಿಸಿಕೊಂಡವರೆಲ್ಲಾ ಈಗ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿ ಅಧಿಕಾರ ಹಿಡಿಯುವ ಸಂಚು ಮಾಡುತ್ತಿದ್ದಾರೆ.
ಇಂಥವರ ಮಧ್ಯೆ ಸೂರಪ್ಪ ಬಾಬು ಕೂಡಾ ಈ ಸಲ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಬಾಬಣ್ಣ ತೀರಾ ಕಾಸು ಖರ್ಚು ಮಾಡಿ, ಆಮಿಷವೊಡ್ಡಿ ತಮ್ಮ ಸಿನಿಮಾಗಳಿಗೆ ಕೂಡಾ ಪ್ರಚಾರ ಪಡೆದವರಲ್ಲ ಬಾಬಣ್ಣ. ದುಂದುವೆಚ್ಚ ಮಾಡದೆ, ಸದಸ್ಯರಿಗೆ ಏನೆಲ್ಲಾ ಒಳಿತು ಮಾಡಬಹುದು ಎನ್ನುವ ಕರಾರುವಕ್ಕಾದ ಪ್ಲಾನುಗಳು ಇವರಲ್ಲಿವೆ. ಬಹುಶಃ ಸೂರಪ್ಪ ಬಾಬು ಆಯ್ಕೆಯಾಗಿ ಬಂದರೆ ಛೇಂಬರಿನಲ್ಲಿ ಒಂದಷ್ಟು ಬದಲಾವಣೆಗಳು ಸಾಧ್ಯವಾಗಬಹುದು. ಬಾಬು ಅವರ ಆತ್ಮೀಯರಲ್ಲಿ ಒಬ್ಬರಾದ ಅಂಚೆ ಹಳ್ಳಿ ಶಿವಕುಮಾರ್ ಕೂಡಾ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಹಿಡಿದ ಕೆಲಸವನ್ನು ಛಲ ಬಿಡದೇ ಪೂರೈಸುವ, ವಾಣಿಜ್ಯ ಮಂಡಳಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅಂಚೆಹಳ್ಳಿ ಕೂಡಾ ಈ ಸ್ಥಾನಕ್ಕೆ ಅರ್ಹ ಅಭ್ಯರ್ಥಿ. ಇವರಿಬ್ಬರೂ ಗೆಲುವು ಕಂಡರೆ ಒಳ್ಳೇದೇ…
No Comment! Be the first one.