ಗುಂಗರು ಕೂದಲು, ತೊದಲು ಮಾತು, ಮುಲ್ಲಂಗಿ ಪ್ಯಾಂಟು, ಕಾಂಟೆಸಾ ಕಾರು – ಹಿಂದಿನ ಸಿನಿಮಾಗೆ ಹೋಲಿಸಿದರೆ ಡಾಲಿ ಹೊಸ ಬಗೆಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ!
ಪುಟಾಣಿ ಕಥೆಯೊಂದನ್ನು ದೀರ್ಘವಾಗಿ ವೃದ್ಧಿಸಿ ದೃಶ್ಯ ರೂಪಕ್ಕೆ ಅಳವಡಿಸಿರುವ ಸಿನಿಮಾ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ. ಎಲ್ಲೆಲ್ಲಿಂದಲೋ ಬಂದ ಪಾತ್ರಗಳು ಜೊತೆಯಾಗುತ್ತವೆ. ಆ ನಂತರ ಅನಿರೀಕ್ಷಿತ ಘಟನೆಗಳಾಗುತ್ತವೆ. ನಡೆಯಬಾರದ್ದೆಲ್ಲಾ ನಡೆದೇ ಹೋಗುತ್ತವೆ. ಯಾವುದೋ ಊರೊಂದರಲ್ಲಿ ಬಾರ್ ಸಪ್ಲೈಯರ್ ಆಗಿರುವ ಹುಡುಗ, ಮಸಾಜ್ ಪಾರ್ಲರಿನ ಹುಡುಗಿ -ಇವರಿಬ್ಬರ ನಡುವಿನ ಲವ್ವು. ದುಷ್ಟ ಹೆಂಗಸೊಬ್ಬಳ ಚಿತಾವಣೆಯಿಂದ ಸೃಷ್ಟಿಯಾಗುವ ಅನಾಹುತಗಳ ಸುತ್ತ ನಡೆಯುವ ಕತೆ ದಿಕ್ಕಾಪಾಲಾಗಿ ಸಂಚರಿಸುತ್ತದೆ. ಪುಟಾಣಿ ಮಗುವೊಂದು ನಡೆಯುವ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಜಮಾಲಿಗುಡ್ಡದ ಕತೆ ಬಿಚ್ಚಿಕೊಳ್ಳೋದು ಜೈಲಿನಲ್ಲಿ. ಅಲ್ಲಿ ಹಿರೋಶಿಮಾ-ನಾಗಸಾಕಿ ಎಂಬ ಎರಡು ತದ್ವಿರುದ್ಧ ಪಾತ್ರಗಳು ಒಂದಾಗುತ್ತವೆ. ಮೊದಲು ಬಡಿದಾಡುತ್ತವೆ. ನಂತರ ಒಂದಾಗಿ ಬಿಲ ತೋಡುತ್ತವೆ. ಆಮೇಲೆ ಇನ್ನೇನೋ ಆಗುತ್ತದೆ. ಈ ನಡುವೆ ಲವ್ ಸ್ಟೋರಿಯ ಫ್ಲಾಷ್ ಬ್ಯಾಕ್ ಕೂಡಾ ತೆರೆದುಕೊಳ್ಳುತ್ತದೆ.
ಜಮಾಲಿಗುಡ್ಡ ಚಿತ್ರದಲ್ಲಿ ಯಶ್ ಶೆಟ್ಟಿ ಎಂದಿನಂತೆ ಅದ್ಭುತ ಅನ್ನಿಸುವಂತೆ ನಟಿಸಿದ್ದಾರೆ. ನಟರಾಕ್ಷಸ ಡಾಲಿ ಎದುರು ನೀನಾ ನಾನಾ ಅಂತಾ ಅಕ್ಷರಶಃ ಅಬ್ಬರಿಸಿದ್ದಾರೆ. ಡಾಲಿ, ಅದಿತಿ ಜೋಡಿ ಕೂಡಾ ಚೆಂದ ಅನ್ನಿಸುತ್ತದೆ. ನಂದಗೋಪಾಲ್ ಮತ್ತು ಪ್ರಕಾಶ್ ಬೆಳವಾಡಿ ನಟನೆ ಅಂದರೆ ಹೀಗಿರಬೇಕು ಅನ್ನೋದನ್ನಿಲ್ಲಿ ತೋರಿಸಿದ್ದಾರೆ. ಭಾವನಾ ʻಭಯಂಕರʼರದ ಜೊತೆಗೆ ʻಮಾದಕತೆʼಯನ್ನು ಮಿಕ್ಸ್ ಮಾಡಿ ನಟಿಸಿದ್ದಾರೆ. ಬ್ಯೂಟಿಫುಲ್ ಕ್ಯಾಮೆರಾ ವರ್ಕ್ ಇಲ್ಲಿದೆ. ಎಲ್ಲವೂ ಇರುವ ಜಮಾಲಿಗುಡ್ಡದಲ್ಲಿ ಇನ್ನೇನೋ ಬೇಕಿತ್ತು ಅನ್ನುವ ಕೊರತೆಯೂ ಸ್ವಲ್ಪ ಹೆಚ್ಚೇ ಇದೆ.
ಈ ಚಿತ್ರದ ನಿರ್ದೇಶಕ ಕುಶಾಲ್ ಗೌಡ ತಮ್ಮ ಹಿಂದಿನ ಚಿತ್ರದಲ್ಲೂ ಮಿಸ್ ಫೈರ್ ಕಾನ್ಸೆಪ್ಟನ್ನು ಮುಟ್ಟಿದ್ದರು. ಮತ್ತೆ ಅದೇ ಬೆಟ್ಟ ಗುಡ್ಡ, ಮಿಸ್ ಫೈರ್ ಇಲ್ಲೂ ಮುಂದುವರೆದಿದೆ. ಅನೂಪ್ ಸಿಳೀನ್ ಮತ್ತು ಅರ್ಜುನ್ ಜನ್ಯ ಇಬ್ಬರೂ ಇದ್ದು ಸಂಗೀತ-ಹಿನ್ನೆಲೆ ಸಂಗೀತಗಳೆರೆಡೂ ಸಪ್ಪೆ ಅನ್ನಿಸುತ್ತದೆ.
ಮೈಲಿಗಲ್ಲು ನಿರ್ಮಿಸುವ ಯಾವ ಅಂಶಗಳೂ ಇಲ್ಲದ, ಚೆಂದದ ಮೇಕಿಂಗ್ ಇರುವ, ಜಾಳು ಜಾಳು ನಿರೂಪಣೆಯ ಸಾಧಾರಣ ಚಿತ್ರ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ!
No Comment! Be the first one.