ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ..!
ಮಂಡ್ಯ ಜಿಲ್ಲೆಯ ಹಾಲಿ ಸಂಸದ ಶಿವರಾಮೇಗೌಡರದ್ದು ಅತಿಯಾಯ್ತು. ಟಿಕೇಟ್ ವಂಚಿತ ಹಾಲಿ ಸಂಸದ ಎಂಬ ಅಪವಾದವನ್ನು ನೇರವಾಗಿ ಫೇಸ್ ಮಾಡಲು ಶಕ್ತರಿಲ್ಲದೇ ಇಲ್ಲ ಸಲ್ಲದ ಆರೋಪಗಳನ್ನು, ಅವಾಂತರಗಳನ್ನು ಸೃಷ್ಟಿಸುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರ ರಾಜಕೀಯ ಏಳಿಗೆಗೆ ಅಡ್ಡಗಾಲಾಗಿ ಮಲಗಿಬಿಟ್ಟಿದ್ದಾರೆ. ಅವರ ಪ್ರತಿಯೊಂದು ಹೇಳಿಕೆಗಳು ನಿಖಿಲ್ ಗೆ ಖಡಾಖಂಡಿತವಾಗಿ ಮತಯಂತ್ರವಾಗಿ ಮಾರ್ಪಡದೇ ಚುನಾವಣಾ ಹಿನ್ನಡೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗುತ್ತಿದೆ. ಅಷ್ಟಾದರೂ ರಾಜಕಾರಣವನ್ನು ಅರೆದು ಕುಡಿದಿರುವ ದೊಡ್ಡಗೌಡರಾಗಲಿ, ಮಾನ್ಯ ಮುಖ್ಯಮಂತ್ರಿಗಳಾಗಲಿ ಚಕಾರ ಎತ್ತದಿರುವುದು, ಶಿವರಾಮೇಗೌಡರನ್ನು ನಿಯಂತ್ರಿಸದೇ ಊರ ಬಸವನಂತೆ ಏನಾದರೂ ಮೇಯ್ದು ಬಾ ಎಂಬಂತೆ ಬಿಟ್ಟಿರುವುದು ಪಕ್ಷದ ಕಾರ್ಯಕರ್ತರಲ್ಲೇ ಒಡಕು ಮೂಡಿಸಿದೆ. ಅರೇ ಇಷ್ಟೆಲ್ಲಾ ಮಾತಾಡೋಕೆ ಶಿವರಾಮೇಗೌಡರು ಅಂದದ್ದಾದರೂ ಏನು ಅಂತ ತಲೆಕೆಡಿಸಿಕೊಳ್ತಿದ್ದೀರಾ. ಹೇಳ್ತೀನಿ ಕೇಳಿ.
ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ರ ಜಾತಿಯ ಕುರಿತಾಗಿ ನಾಲಿಗೆ ಹರಿಬಿಟ್ಟಿದ್ದ ಶಿವರಾಮೇಗೌಡರು ಸೋಶಿಯಲ್ ಮೀಡಿಯಾದಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಅರೇ ಮಂಗಳಾರತಿ ಮಾಡುವಷ್ಟರ ಮಟ್ಟಿಗೆ ಪ್ರಮಾದದ ಸಂಗತಿನಾ! ಅನ್ನೋರಿಗೆ ಹೌದು. ಅದು ಜಾತಿ ರಾಜಕಾರಣವನ್ನೇ ಹೆಚ್ಚು ಒತ್ತು ಕೊಡುವ ಹಾಗೂ ದೊಡ್ಡಗೌಡರ ಪಕ್ಷದ ಜಾತ್ಯಾತೀತ ಅನ್ನೋ ಪದಕ್ಕೆ ಮಾಡುವ ಅವಮಾನ ಹಾಗೂ ಸಿದ್ದಾಂತದ ಉಲ್ಲಂಘನೆಯಲ್ಲವೇ. ಇನ್ನು ಇಲ್ಲಿಯವರೆಗೂ ದೊಡ್ಡಗೌಡರೇ ಆಗಲಿ, ಮಾನ್ಯ ಮುಖ್ಯಮಂತ್ರಿಗಳೇ ಆಗಲಿ ಜಾತಿಯ ಕುರಿತಾದ ಒಡಕು ಮೂಡಬಹುದಾದ ವಿಚಾರಗಳನ್ನು ಮಾತನಾಡುವ ಧೈರ್ಯ ಮಾಡಿಲ್ಲ. ಅಲ್ಲದೇ ಅವರೇ ಸ್ವತಃ ಏಕ ಧರ್ಮ, ಜಾತಿಗೆ ಸ್ಟಿಕ್ ಆನ್ ಆಗದೇ ಸರ್ವ ಧರ್ಮ ಸಮನ್ವಯತೆ, ಜಾತ್ಯಾತೀತ ಮನೋಭಾವನೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದ್ದಾರೆ. ಆದರೆ ಅವರ ನೆರಳಿನಲ್ಲಿ, ನಿಯಂತ್ರಣದಲ್ಲಿ ರಾಜಕಾರಣ ಮಾಡುತ್ತಿರುವ ಶಿವರಾಮೇಗೌಡರು ಯಾಕೋ ಅವೆಲ್ಲವನ್ನೂ ಗಾಳಿಗೆ ತೂರಿ ತಾನಾಯ್ತು, ತನ್ನ ಹೊಲಸು ಬೆಂಕಿ ಹೊತ್ತಿಸುವ ಡೈಲಾಗ್ ಗಳಾಯ್ತು ಎಂಬಂತೆ ಡೈಪರ್ ಹಾಕುವವರಿಲ್ಲದೇ ಬಾಯಿ ಭೇದಿ ಮಾಡಿಕೊಳ್ಳುತ್ತಲೇ ಇದ್ದಾರೆ. ಮೋಸ್ಟ್ ಲೀ ಬಂಡಾಯ ಅಭ್ಯರ್ಥಿಯಾಗಲು ಧೈರ್ಯ ಸಾಲುತ್ತಿಲ್ಲ. ಟಿಕೇಟ್ ಕೇಳಲು ಬಾಯಿ ಬರುತ್ತಿಲ್ಲ ಅನ್ನಿಸುತ್ತದೆ.
ಹೊಸದಾಗಿ ಏನಂದ್ರು..
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಹವಾ ಮೈತ್ರಿ ಪಕ್ಷಗಳ ನಿದ್ದೆಗೆಡಿಸಿದೆ. ಒಳಗೊಳಗೆ ಚುನಾವಣಾ ವಿಚಾರದ ಕುರಿತು ಪುಕ ಪುಕ ಎನ್ನುತ್ತಿದೆ. ಆ ಕಾರಣ ವೈಯಕ್ತಿಕ ನಿಂದನೆಯೇ ನಮ್ಮ ಆ ಜನ್ಮ ಸಿದ್ಧ ಹಕ್ಕು ಎಂಬಂತೆ ಸಿಕ್ಕ ಸಿಕ್ಕಲ್ಲಿ, ಕಂಡ ಕಂಡಲ್ಲಿ ಅಭ್ಯರ್ಥಿಯ ಕುರಿತಾಗಿ, ಅವರ ಬೆನ್ನಿಗಿರುವವರ ಕುರಿತಾಗಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಅದೇ ದಾರಿಯಲ್ಲಿರುವ ಶಿವರಾಮೇಗೌಡರು ಹೊಸ ಬಾಂಬ್ ಸಿಡಿಸಿದ್ದು, ಮತ್ತೆ ಸುಮಲತಾ ಅಂಬರೀಶ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಸುಮಲತಾ ಅವರ ಬಗ್ಗೆ ಮಾತ್ರವೇ ಕಮೆಂಟ್ ಮಾಡದೇ ನೆರೆ ರಾಜ್ಯದ ತಮಿಳುನಾಡಿನ ತಲೈವಿ ಜಯಲಲಿತಾ ವಿರುದ್ಧವೂ ಹರಿಹಾಯ್ದಿದ್ದಾರೆ. ಅಷ್ಟಕ್ಕೂ ಶಿವರಾಮೇಗೌಡರು ಅಂದದ್ದಾದ್ರು ಏನಂದ್ರೆ, “ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತೆ ಜಯಲಲಿತಾ ಅವರನ್ನೇ ಮೀರಿಸುವಂತಹ ಮಾಯಾಂಗನೆ ಇಂದು ಮಂಡ್ಯದಲ್ಲಿ ಓಡಾಡುತ್ತಿದ್ದಾರೆ ಹುಷಾರಾಗಿರಿ” ಎಂದು ಹೇಳಿದ್ದು, ಪರೋಕ್ಷವಾಗಿ ಜಯಲಲಿತಾ ಅವರನ್ನೂ ಮಾಯಂಗಿನಿ ಎಂದು ಹಂಗಿಸಿದ್ದಾರೆಂಬ ಗುಲ್ಲೆದ್ದಿದೆ. ಮಂಡ್ಯದ ನಾಗಮಂಗಲದಲ್ಲಿ ನಡೆದ ಜೆಡಿಎಸ್ ಕಾಂಗ್ರೆಸ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಎಲ್ ಆರ್ ಶಿವರಾಮೇಗೌಡ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವರಾಮೇಗೌಡರ ಮಿತಿ ಮೀರಿದ ವರ್ತನೆಯ ಪರಿಣಾಮ ನಿಖಿಲ್ ಕುಮಾರಸ್ವಾಮಿಯ ಚುನಾವಣಾ ಫಲಿತಾಂಶದಲ್ಲಿ ನಕಾರಾತ್ಮಕ ಪರಿಣಾಮ ಬೀರುವುದಂತು ನೂರಕ್ಕೆ ನೂರು ಪಾಲು ಸತ್ಯವಾಗಿದೆ. ಈಗಲಾದರೂ ದೊಡ್ಡಗೌಡರಾಗಲಿ, ಮಾನ್ಯ ಮುಖ್ಯಮಂತ್ರಿಗಳಾಗಲಿ ಶಿವರಾಮೇಗೌಡರ ಬಾಯಿಗೆ ಬೀಗ ಹಾಕದೇ ಬಿಟ್ಟದ್ದೇ ಆದರೆ ಟಿಕೆಟ್ ಕಳೆದುಕೊಂಡಿರುವ ಸಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಪರಾಜಯವಾಗುವಂತೆ ಮಾಡುವುದಲ್ಲಿ ಸಂಶಯವಿಲ್ಲ..!
-ಸಚಿನ್ ಕೃಷ್ಣ
Leave a Reply
You must be logged in to post a comment.