ಇದು ಭರತ ನಾಡು; ಭಾರತ. ಸರಿಸುಮಾರು ಕ್ರಿಸ್ತಶಕ ಸಾವಿರದಲ್ಲಿ ಹಸುಗಳನ್ನು ದೇವರೆಂದು ಪೂಜಿಸುವ ಹಾಲು ಮನಸ್ಸಿನ ಜನರ ಬಳಿಗೆ ಬರ್ತಾನೊಬ್ಬ ಉಗ್ರರೂಪಿ ಮೊಹಮ್ಮದ್ ಗಜ್ನಿ. ಲೂಟಿಕೋರ ಮೊಹಮ್ಮದ್ ಗಜ್ನಿ ದೇವಾಲಯಗಳನ್ನು ಲೂಟಿ ಹೊಡೆದು ಹಿಂದೂಗಳನ್ನು ಮತಾಂತರ ಮಾಡಿದ್ದ. ಒಪ್ಪದ ಹಿಂದೂಗಳನ್ನು ಅಮಾನುಷವಾಗಿ ಹಿಂಸಿಸಿ ಕೊಲ್ಲಿಸಿದ್ದ… ಭಾರತವನ್ನಾಳಿದವರಿಗಿಂತಾ ಹಾಳು ಮಾಡಿದ ದುಷ್ಟರೇ ಹೆಚ್ಚು… ಈ ಹಿನ್ನೆಲೆ ಮುಗಿಯುತ್ತಿದ್ದಂತೇ ಮುಸ್ಲಿಂ ಭಯೋತ್ಪಾದಕರು, ತಲೆ ಕಡಿಯುವ, ಕೈಗಳನ್ನು ಕತ್ತರಿಸುವ, ಬಾಂಬುಗಳನ್ನೆಸೆಯುವ ಒಂದಷ್ಟು ವಿಡಿಯೋ ಚಿತ್ರಣಗಳು… – ಇವೆಲ್ಲಾ ಇರುವುದು ಈ ವಾರ ತೆರೆಗೆ ಬರುತ್ತಿರುವ ʻಕಲಿವೀರʼ ಹೆಸರಿನ ಸಿನಿಮಾದ ಟ್ರೇಲರಿನಲ್ಲಿ.
ಈ ಸಿನಿಮಾದಲ್ಲಿ ಕಲಿ ಎನ್ನುವ ಹೀರೋ ಪಾತ್ರವನ್ನು ಸೃಷ್ಟಿಸಲಾಗಿದೆ. ಇತಿಹಾಸದಲ್ಲಿ ತನ್ನ ಜನಾಂಗಕ್ಕೆ ಆದ ಮಹಾದ್ರೋಹದ ವಿರುದ್ಧ ಸಿಡಿದೆದ್ದು ರಿವೇಂಜು ತೀರಿಸಿಕೊಳ್ಳುವ ಆದಿವಾಸಿ ಯುವಕನ ಕಥಾಹಂದರ ಇದರೊಳಗಿದೆಯಂತೆ. ಮೇಲ್ನೋಟಕ್ಕೆ ಈ ಟ್ರೇಲರನ್ನು ನೋಡಿದರೆ ಇದು ಪಕ್ಕಾ ಮುಸ್ಲಿಂ ವಿರೋಧಿ ಸರಕು ಹೊಂದಿರುವ ಕಥೆ ಹೊಂದಿದೆಯಾ ಎನ್ನುವ ಅನುಮಾನ ಮೂಡುವಂತಿದೆ.
ಈ ನೆಲದ ಮಕ್ಕಳು ಎನಿಸಿಕೊಂಡ ಆದಿವಾಸಿ ಜನಾಂಗ ಬದುಕು ಇವತ್ತಿಗೆ ಅಕ್ಷರಶಃ ನರಕವಾಗಿದೆ. ಆದಿವಾಸಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಅನ್ನೋದು ಬಂದು ಎಪ್ಪತ್ನಾಲ್ಕು ವರ್ಷಗಳೇ ಕಳೆದರೂ ಈ ವರೆಗೂ ಅದೆಷ್ಟೋ ಆದಿವಾಸಿ ಕುಟುಂಬಗಳು ರಸ್ತೆ, ವಿದ್ಯುತ್ ಮುಂತಾದ ಅಗತ್ಯ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರಗಳು ಅರಣ್ಯ ಕಾಯ್ದೆಯ ಅಡಿಯಲ್ಲಿ ಆದಿವಾಸಿಗಳ ಜಮೀನುಗಳನ್ನು ವಶಪಡಿಸಿಕೊಂಡು ಬೀದಿಪಾಲು ಮಾಡುತ್ತಿವೆ.
ಕರ್ನಾಟಕದಲ್ಲೇ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಅವರ ಬದುಕನ್ನು ಬರ್ಬಾದು ಮಾಡಿದ್ದಾರೆ. ಅದರ ವಿರುದ್ಧ ಪಾಪದ ಜನ ಬೆತ್ತಲೆ ಹೋರಾಟಗಳನ್ನು ಮಾಡುತ್ತಿದ್ದಾರೆ. ಮೂಲನಿವಾಸಿಗಳ ಈ ಕಡುಗಷ್ಟಗಳೆಲ್ಲಾ ನೂರು ಸಿನಿಮಾಗೆ ಆಗಿ ಮಿಗಬಹುದಾದಷ್ಟು ಮೆಟೀರಿಯಲ್ಲು ಹೊಂದಿದೆ. ಅದನ್ನೆಲ್ಲಾ ಬಿಟ್ಟು ʻಕಲಿವೀರʼ ತಂಡ ಇತಿಹಾವನ್ನು ಕೆದಕಿ, ಮುಸ್ಲಿಮರನ್ನು ದುಷ್ಟರನ್ನಾಗಿಸುವ ಹಳೇ ಕೆಲಸವನ್ನೇ ಮುಂದುವರೆಸಿದ್ದಾರಾ ಅಂತಾ ಅನ್ನಿಸುತ್ತಿದೆ.
ಹಾಗೆ ನೋಡಿದರೆ ಈಚೆಗೆ ಭಾರತದಲ್ಲಿ ಮುಸ್ಲಿಂ ಟೆರರಿಸಮ್ಮಿಗಿಂತಾ ಹೆಚ್ಚಾಗಿ ಹಿಂದೂ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿವೆ. ಈ ಹೊತ್ತಿನಲ್ಲಿ ಸಿನಿಮಾವೊಂದರ ಮೂಲಕ ಮತ್ತೆ ಕೋಮು ವಿಷ ಬೀಜ ಬಿತ್ತುವುದೆಲ್ಲಾ ಬೇಕಿತ್ತಾ? ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳಲ್ಲಿ ಈ ತನಕ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎನ್ನುವಂತಾ ವಾತಾವರಣ ಹುಟ್ಟುಹಾಕಿದ್ದಾರೆ. ಬಹುಶಃ ಕಲಿವೀರ ಅದರ ಮುಂದುವರಿದ ಅಧ್ಯಾಯವಿರಬೇಕು!
ನಿಜಕ್ಕೂ ಈ ಸಿನಿಮಾದ ಕಂಟೆಂಟು ಅದೇನಿದೆಯೋ ಗೊತ್ತಿಲ್ಲ. ʻಕಲಿವೀರʼ ಮೂಲಕ ಏಕಲವ್ಯ ಎನ್ನುವ ಅಪ್ಪಟ ದೇಸೀ ಪ್ರತಿಭೆಯೊಂದು ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ. ನಟನೆ ಹೇಗಿದೆಯೋ ಗೊತ್ತಿಲ್ಲ. ಈ ವರೆಗೆ ಇಂಡಿಯಾದ ಸಿನಿಮಾಗಳಲ್ಲೇ ಬರದ ರೋಚಕ ಸ್ಟಂಟುಗಳನ್ನು ಈ ಯುವಕ ಮಾಡಿದ್ದಾನೆ. ಬುಗುರಿಯಂತೆ ತಿರುಗಿ ಎದುರಾಳಿಯ ಎದೆಗೆ ಎಗರೆಗರಿ ಹೊಡೆಯುವ ನೈಜ ದೃಶ್ಯಗಳು ಎದೆಯಲ್ಲಿ ಧಿಮಿಧಿಮಿ ಅನಿಸುತ್ತದೆ. ಈ ಕಾರಣಕ್ಕೇ ಓಟಿಟಿಗೆ ಒಳ್ಳೇ ರೇಟಿಗೆ ಸೇಲ್ ಆಗಿದೆಯಂತೆ.
ಏನೇ ಇರಲಿ, ಟ್ರೇಲರಿನಲ್ಲಿರುವ ಕೆಟ್ಟ ಅನುಮಾನಗಳನ್ನು ಹುಟ್ಟಿಸಿರುವಂತೆ ಕಲಿವೀರದ ಒಳಗಿನ ತಿರುಳು ನಿಜವಾಗಿಸದಿರಲಿ!!
Leave a Reply
You must be logged in to post a comment.