ಇಲ್ಲಿ ಕಾಣ್ತಿರೋ ಯಂಗ್’ಸ್ಟರ್ಸ್ ಮತ್ತವರ ಟೀಮ್ ಕಟ್ಟಿಕೊಟ್ಟಿರೋ ‘ಕಂಬ್ಳಿಹುಳ’ ಚಿತ್ರದ ಬಗ್ಗೆ ಬಹಳಷ್ಟು ಹೇಳಲಿಕ್ಕಿದೆ. ಈ ಚಿತ್ರ ಬರೀ ಒಂದು ಲವ್’ಸ್ಟೋರಿಯಾಗಿದ್ರೆ ನೋಡಿದವ್ರನ್ನ ಇಷ್ಟೆಲ್ಲ ಕಾಡ್ತಿರಲಿಲ್ಲ. ಇದು ಲವ್ ಸ್ಟೋರಿ ಫಾರ್ಮಟ್ಟನ್ನು ಜಂಪ್ ಮಾಡಿದ ಸಿನಿಮಾ. ಕನ್ನಡ ಸಿನಿಮಗಳಲ್ಲಿ ಹತ್ತತ್ತಿರ ಮಾಯವಾಗಿಯೇ ಹೋಗಿರುವ ‘ಸ್ಥಳೀಯ ಪರಿಸರ, ಜನಜೀವನ, ಹುಲುಮಾನವರು, ಸಣ್ಣ ಊರುಗಳ ಸಣ್ಣ ಬದುಕು ಬದುಕುವ ಜನಗಳ ನಡುವೆ ಈ ಕಥೆ ನಡೆಯುತ್ತದೆ.
ಇಲ್ಲೊಮ್ಮೆ ಬರುವ ಹಾವಾಡಿಸುವ ವೃತ್ತಿಯವ ತನ್ನ ಕೆಲಸವೇ ಅಕ್ರಮವೆಂದಾಗಿ ಅವರಿವರನ್ನು ಅನ್ನಕ್ಕೆ ಕಾಸು ಕೇಳುವ ಸ್ಥಿತಿಗೆ ನೂಕಲ್ಪಟ್ಟಿದ್ದಾನೆ, ಅಮ್ಮನೊಡನೆ ಮುನಿಸಿಕೊಂಡ ನಾಗೇಶನೆಂಬ ಎಲೆಕ್ಟ್ರಿಷಿಯನ್ ಮಗನೊಬ್ಬನಿದ್ದಾನೆ, 40 ದಾಟಿದರೂ ಮದುವೆಗೆ ಹೆಣ್ಣು ಸಿಗದೆ ನೊಂದಿರುವ ವಾಸಣ್ಣ ಇದ್ದಾನೆ, ಮಕ್ಕಳ ಸ್ಕೂಲ್ ಫೀಸಿಗೆ ದುಡಿದ ಹಣ ಸಾಲದೆ ಸೆರಗು ಹಾಸುವ ವೃತ್ತಿಯಂಚಿಗೆ ತಳ್ಳಲ್ಪಟ್ಟ ತಾಯಿಯೊಬ್ಬಳಿದ್ದಾಳೆ..

ಜಗತ್ತು ಹೇಗೆ ನಡೆಯುತ್ತಿದೆಯೋ ಅದು ಅರ್ಥವೇ ಆಗದವನಂತೆ ಬದುಕುತ್ತಿರುವ ಆಟೋ ಡ್ರೈವರ್ ಚೋಂಗಿ, ನಾಯಕನ ಜೊತೆ ತುಂಡುಗುತ್ತಿಗೆ ಕೆಲಸ ಮಾಡುವ ಇಬ್ಬರು ಅಸಾಧ್ಯ ತಂಟೆಕೋರರು, ಜೊತೆಗಿದ್ದು ಸತ್ತವರ ನಂಬರಿಗೆ ಫೋನ್ ಮಾಡಿ ಮಾತಾಡುವಷ್ಟು ಭಾವುಕ ಗೆಳೆಯರು, ಗೂಳಿಕಪ್ಪೆ ಹುಡುಕುವ ಮಾಫಿಯಾದವರು, ಹುಡುಗ ಹುಡುಗಿ ಜೊತೆ ಕಂಡರೆ ಮದುವೆ ಮಾಡಿಸುವ ಮಾರಲ್ ಪೊಲೀಸ್ ಆಫೀಸರ್ಸ್, ಅಡಿಕೆಕೊನೆ ಕೊಯ್ಯುತ್ತಲೇ ಜೀವ ಬಿಡುವ ಬಡವರು.. ಹುಫ್.. ಪಟ್ಟಿ ಮುಗಿಯಲಿಕ್ಕಿಲ್ಲ..

ಇವರೆಲ್ಲರೂ ನಟರಾಜ ಮತ್ತು ಸ್ವಾತಿ ಎಂಬ ಹುಡುಗಿಯ ಪ್ರೇಮಪ್ರಕರಣದಲ್ಲಿ ಬಹುಮುಖ್ಯ ತಿರುವುಗಳನ್ನು ತರುವ ಜುಜುಬಿ ಮನುಷ್ಯ ಜೀವಗಳು. ಮೊದಲೇ ಹೇಳಿದಂತೆ ಇದು ಜಸ್ಟ್ ನಾಟ್ ಎ ಲವ್ ಸ್ಟೋರಿ. ಅದನ್ನು ದಾಟಿಕೊಂಡ ಪ್ರಯತ್ನ. ಕನ್ನಡಕ್ಕಂತೂ ಇದು ತೀರಾ ಹೊಸದು. ನೀವು ಇವತ್ತು ಚಿತ್ರ ನೋಡಿದರೆ ಈ ಪ್ರತಿಭಾವಂತ ಯುವಚೇತನಗಳು ಈ ಇಂಡಸ್ಟ್ರಿಯಲ್ಲಿ ಉಳಿದು ಮತ್ತಷ್ಟು ಅಶ್ಚರ್ಯ ಹುಟ್ಟಿಸುವ ಸಿನಿಮ ಮಾಡಬಲ್ಲರು. ನಾವೇ ಇವರನ್ನು ಕೈ ಬಿಟ್ಟರೆ ಈ ಹುಡುಗರು ತಮ್ಮೂರುಗಳಿಗೆ ವಾಪಸ್ ಹೋಗಿಬಿಡುತ್ತಾರೆ. ಅದು ನಮಗೆ ನಿಮಗೆ ಕನ್ನಡ ಚಿತ್ರರಂಗಕ್ಕಾಗುವ ನಷ್ಟ. ದಯವಿಟ್ಟು ಇಂದು ಸಿನಿಮ ನೋಡಿ.
No Comment! Be the first one.