ಮಲಯಾಳಂ ಮತ್ತು ತಮಿಳು ಚಿತ್ರಗಳ ಜನಪ್ರಿಯ ನಟಿ ಕನಿ ಕುಸ್ರುತಿ. ಮಲಯಾಳಂನ ಈ ನಟಿ ಮೂಲತಃ ರಂಗಭೂಮಿ ಕಲಾವಿದೆ. ಹಾಗಾಗಿ ಕೆಲವು ವಿಶಿಷ್ಟ ಪಾತ್ರಗಳು ಆಕೆಯನ್ನು ಅರಸಿಬಂದವು. ’ಪಿಸಾಸು’ ಮತ್ತು ’ಬರ್ಮಾ’ ತಮಿಳು ಚಿತ್ರಗಳು ಕನಿ ಅವರಿಗೆ ದೊಡ್ಡ ಜನಪ್ರಿಯ ತಂದುಕೊಟ್ಟವು. ’ಮಾ’ ಕಿರುಚಿತ್ರದಲ್ಲಿ ಟೀನೇಜ್ ಹುಡುಗಿಯ ತಾಯಿಯಾಗಿ ಅವರ ನಟನೆ ಅತ್ಯಂತ ಪ್ರಭಾವಶಾಲಿಯಾಗಿತ್ತು. ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತನಾಡುತ್ತಾ ಅವರು ತಾವು ಎದುರಿಸಿದ ಅಡ್ಡಿ-ಆತಂಕಗಳನ್ನು ನೆನಪು ಮಾಡಿಕೊಂಡಿದ್ದಾರೆ. ಚಿತ್ರನಿರ್ಮಾಪಕರಿಂದ ಸಾಕಷ್ಟು ಬಾರಿ ಕಿರುಕುಳ ಅನುಭವಿಸಬೇಕಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನಗೆ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮನಸ್ಸಿತ್ತು. ಕೆಲವು ಉತ್ತಮ ಚಿತ್ರ, ಪಾತ್ರಗಳು ಒದಗಿಬಂದಿದ್ದವು. ಆದರೆ ಈ ಚಿತ್ರಗಳ ನಿರ್ಮಾಪಕರು ನನ್ನಿಂದ ಬೇರೆ ಏನೇನೋ ಅಪೇಕ್ಷಿಸುತ್ತಿದ್ದರು. ನನ್ನನ್ನು ಇದಕ್ಕೆ ಕನ್ವಿನ್ಸ್ ಮಾಡುವಂತೆ ನನ್ನ ತಾಯಿ ಮೇಲೂ ಒತ್ತಡ ತರುತ್ತಿದ್ದರು! ಇದರಿಂದಾಗಿ ಉತ್ತಮ ಅವಕಾಶಗಳಿಂದ ವಂಚಿತಳಾಗಬೇಕಾಯ್ತು” ಎಂದಿದ್ದಾರೆ ಕನಿ. ಈ ಕೆಟ್ಟ ಸಂಪ್ರದಾಯಕ್ಕೆ ಬೇಸತ್ತು ಒಂದು ಹಂತದಲ್ಲಿ ಕನಿ ಸಿನಿಮಾರಂಗದಿಂದ ಹೊರಗುಳಿದು ರಂಗಭೂಮಿಗೆ ಹಿಂದಿರುಗಿದ್ದರು. ಆದರೆ ಅಲ್ಲಿ ಆರ್ಥಿಕ ಅನುಕೂಲತೆಗಳು ಇಲ್ಲದ ಕಾರಣ ಮತ್ತೆ ಸಿನಿಮಾಗೆ ಮರಳಬೇಕಾಯ್ತು ಎಂದಿದ್ದಾರೆ. ’ಮೀಟೂ’ ಚಳುವಳಿ ನಂತರ ಮಾಲಿವುಡ್ನಲ್ಲಿ ವುಮೆನ್ ಇನ್ ಸಿನಿಮಾ ಕಲೆಕ್ಟೀವ್ (ಡಬ್ಲ್ಯೂಸಿಸಿ) ಸಂಸ್ಥೆ ತಲೆಎತ್ತಿದೆ. ತಾವು ಧೈರ್ಯದಿಂದ ಕೆಲಸ ನಿರ್ವಹಿಸಲು ಈ ಸಂಸ್ಥೆ ನೆರವಾಗಿದೆ ಎನ್ನುತ್ತಾರೆ ಕನಿ.
No Comment! Be the first one.