ಥೇಟರಲ್ಲಿ ಐವತ್ತು ಪರ್ಸೆಂಟ್ ಜನರನ್ನು ಮಾತ್ರ ತುಂಬಿಸಿಕೊಳ್ಳಬೇಕು ಅಂತಾ ಸರ್ಕಾರ ಆಜ್ಞೆ ಹೊರಡಿಸಿದೆ. ವರ್ಷಾನುಗಟ್ಟಲೆ ಶ್ರಮ ಪಟ್ಟು, ಸಾಲ-ಸೂಲ ತಂದು ಸಿನಿಮಾ ಮಾಡಿ ಐವತ್ತು ಪರ್ಸೆಂಟ್ ಸೀಟುಗಳಿಗೆ ಸ್ಟಿಕ್ಕರು ಮೆತ್ತಿಸುವ ಸಾಹಸ ಮಾಡಿದರೆ, ನಿರ್ಮಾಪಕನ ಪಾಲಿಗೆ ಲಾಭ ಕೈ ಸೇರುವ ಬದಲು ಕಂಟಕ ಸುತ್ತಿಕೊಳ್ಳುತ್ತದೆ.
ಬಿಸಿಲು, ಬಸ್ ಸ್ಟ್ರೈಕುಗಳ ಜೊತೆಗೆ ಕೊರೋನಾದ ಎರಡನೇ ಅಲೆಯ ಬಗೆಗಿನ ಮಾಹಿತಿ ಕೇಳಿ ಜನ ಕಂಗಾಲಾಗಿದ್ದಾರೆ. ಇದರ ನಡುವೆ, ಸರ್ಕಾರದ ಒಳಲೆಕ್ಕಾಚಾರಗಳು ಏನೇನಿವೆಯೋ? ದಿನಕ್ಕೊಂದು ರೂಲ್ಸು, ಘಳಿಗೆಗೊಂದು ಸ್ಕೆಚ್ಚು ಹಾಕುವ ಗೌರ್ಮೆಂಟು ಅದ್ಯಾವ ಕ್ಷಣದಲ್ಲಿ ಲಾಕ್ ಡೌನು ಅನೌನ್ಸು ಮಾಡುತ್ತದೋ ಎನ್ನುವ ಆತಂಕ ಬೇರೆ… ಇವೆಲ್ಲದರಿಂದ ಯಾವ್ಯಾವ ಉದ್ಯಮಗಳು ಏನೇನಾಗುತ್ತಿವೆಯೋ ಗೊತ್ತಿಲ್ಲ. ಕನ್ನಡ ಚಿತ್ರರಂಗ ಮಾತ್ರ ಭಯಾನಕವಾಗಿ ತತ್ತರಿಸಿಹೋಗಿದೆ. ಕನ್ನಡ ಸಿನಿಮಾಗೆ ಹೂಡಿಕೆ ಮಾಡಿರುವ ಎಷ್ಟೋ ಜನ ನಿರ್ಮಾಪಕರು ಅಕ್ಷರಶಃ ಬೀದಿಗೆ ಬೀಳುವ ಭಯದಲ್ಲಿದ್ದಾರೆ.
ಶತಾಯ ಗತಾಯ ಈ ತಿಂಗಳ ಇಪ್ಪತ್ತೊಂಭತ್ತನೇ ತಾರೀಖಿಗೆ ಕೋಟಿಗೊಬ್ಬ-3 ಚಿತ್ರವನ್ನು ತೆರೆಗೆ ತರುತ್ತೇನೆ ಅಂತಾ ನಿರ್ಮಾಪಕ ಸೂರಪ್ಪ ಬಾಬು ದೃಢ ನಿರ್ಧಾರ ಮಾಡಿದ್ದರು. ಸಲಗ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸರ್ವರೀತಿಯ ತಯ್ಯಾರಿಯನ್ನೂ ಮಾಡಿ ಮುಗಿಸಿದ್ದರು. ಆದರೆ ಈಗ ಸೃಷ್ಟಿಯಾಗಿರುವ ಭೀತಿ ಮತ್ತು, ಸರ್ಕಾರದ ನೀತಿಗಳ ನಡುವೆ ಯಾವುದೇ ಕಾರಣಕ್ಕೂ ಈ ಚಿತ್ರಗಳು ಅಂದುಕೊಂಡ ಡೇಟಿಗೆ ತೆರೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ.
ಕೋಟಿಗೊಬ್ಬ-3 ಶುರುವಾಗಿದ್ದು 2018ರಲ್ಲಿ. ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟ ಸುದೀಪ್. ಇಂಥಾ ಹೀರೋ ಸಿನಿಮಾವೊಂದು ಶುರುವಾಗಿ ಮೂರೂವರೆ ವರ್ಷ ಕಳೆದಿದೆ. ಕಳೆದೊಂದು ವರ್ಷದಿಂದ ಕೊರೋನಾ ಬೇರೆ ಕೊಡಬಾರದ ಕಾಟ ಕೊಟ್ಟಿದೆ. ಈ ಚಿತ್ರವನ್ನು ನಿರ್ಮಿಸಿರುವ ಸೂರಪ್ಪ ಬಾಬು ಚಿತ್ರರಂಗಕ್ಕೆ ಹೊಸಬರೇನೂ ಅಲ್ಲ. ಏನಿಲ್ಲವೆಂದರೂ ಮೂವೈತ್ತೈದು ವರ್ಷಗಳಿಂದ ಬಿಟ್ಟೂ ಬಿಡದೆ ಸಿನಿಮಾರಂಗದಲ್ಲಿ ಮಣ್ಣು ಹೊತ್ತಿದ್ದಾರೆ. ಅದೆಲ್ಲೆಲ್ಲಿಂದ ದುಡ್ಡು ಹೊಂಚಿಕೊಂಡು ಬಂದಿದ್ದಾರೋ ಭಗವಂತನೇ ಬಲ್ಲ. ಸಿನಿಮಾ ಶುರುವಾಗಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟರೂ ಕಾಸು ಸುರಿಯುತ್ತಲೇ ಇದ್ದಾರೆ.
ಇನ್ನು, ಟಗರು, ಈಗ ಸಲಗದಂಥ ಸಿನಿಮಾವನ್ನು ನಿರ್ಮಿಸಿರುವ ಕೆ.ಪಿ. ಶ್ರೀಕಾಂತ್ ಕಳೆದ ಇಪ್ಪತ್ತೂ ಚಿಲ್ಲರೆ ವರ್ಷಗಳಿಂದ ಸಿನಿಮಾರಂಗದ ದಿಕ್ಕುದೆಸೆಗಳನ್ನು ಅರಿತಿರುವವರು. ಈಗ ದುನಿಯಾ ವಿಜಯ್ ಪಾಲಿಗೆ ಮರುಜನ್ಮ ನೀಡಲೆಂದೇ ರೂಪುಗೊಂಡಿರುವ ಸಲಗ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸ್ವತಃ ವಿಜಿ ಅವರೇ ನಿರ್ದೇಶಿಸಿರುವ ಈ ಚಿತ್ರಕ್ಕೆ ಲವಲೇಶದ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ಮೂಲಕ ಸಿನಿಮಾಗಳನ್ನು ವಿತರಣೆ ಮಾಡುತ್ತಲೇ ದೊಡ್ಡ ಮಟ್ಟದ ಸಿನಿಮಾಗಳನ್ನೂ ಕೊಟ್ಟವರು ನಿರ್ಮಾಪಕ ಜಯಣ್ಣ-ಭೋಗೇಂದ್ರ. ಇವರ ನಿರ್ಮಾಣದ ಭಜರಂಗಿ-೨ ಕೂಡಾ ತೆರೆಗೆ ಬರಲು ತಯಾರಾಗಿದೆ. ಅವತಾರ ಪುರುಷ, 777 ಚಾರ್ಲಿ, ಶುಗರ್ ಲೆಸ್, ರಾಬಿನ್ ಹುಡ್, ಸಪ್ತಸಾಗರದಾಚೆ ಮುಂತಾದ ಮುಕ್ಕಾಲು ಡಜನ್ ಸಿನಿಮಾಗಳನ್ನು ಪುಷ್ಕರ್ ಮಲ್ಲಿಕಾರ್ಜುನ್ ಹರಡಿಕೊಂಡು ಕೂತಿದ್ದಾರೆ.
ಆದರೇನು ಮಾಡೋದು ಪರಿಸ್ಥಿತಿಯೇ ಸರಿಯಿಲ್ಲವಲ್ಲಾ? ಈ ಚಿತ್ರಗಳಿಗೆ ಹಣ ಹೂಡಿರುವ ನಿರ್ಮಾಪಕರ ಬದುಕು ಏನಾಗಬೇಡ? ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ? ಅವರ ಕಷ್ಟ ಏನು ಅಂತಾ ಯಾವ ಹೀರೋ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ಬಾಕಿ ದುಡ್ಡು ಮಡಗಿದಮೇಲೆ ಸಿನಿಮಾ ರಿಲೀಸು ಮಾಡಿಕೊಳ್ಳಿ ಅನ್ನುವ ಮನಸ್ಥಿತಿಯೇ ಬಹುತೇಕ ಹೀರೋಗಳದ್ದು. ಇಷ್ಟರ ನಡುವೆಯೂ ಯಾರಾದರೂ ಹೀರೋ ನಿರ್ಮಾಪಕನ ನರಳಾಟಕ್ಕೆ ಸ್ಪಂದಿಸಿದರೆ ಆತ ನಿಜಕ್ಕೂ ದೇವರಿಗಿಂತ ದೊಡ್ಡವನು!
ಹೀರೋಗಳನ್ನು ಮೇಂಟೇನು ಮಾಡಲು ನಿರ್ಮಾಪಕರು ಪಡಬಾರದ ಪಾಡು ಪಡುತ್ತಿದ್ದರೆ, ಸಿನಿಮಾಗೆ ಕೆಲಸ ಮಾಡಿದ ಇತರೆ ಕಲಾವಿದರು, ತಂತ್ರಜ್ಞರೂ ಕೆಲವೊಮ್ಮೆ ನಿರ್ಮಾಪಕರ ಎದೆಮೇಲೆ ದಿದ್ದಿರಿದಿದ್ದಿರಿ ಅಂತಾ ಸ್ಟೆಪ್ಪು ಹಾಕುತ್ತಿರುತ್ತಾರೆ.
ಸ್ಟಾರ್ ನಟರ ಸಿನಿಮಾಗಳನ್ನು ತಯಾರು ಮಾಡಿ ತೆರೆಗೆ ತರೋದು ಸುಮ್ಮನೇ ಮಾತಲ್ಲ. ದುಡ್ಡು ಅನ್ನೋದು ನಿಜಕ್ಕೂ ನೀರಿನಂತೆ ಖರ್ಚಾಗುತ್ತಿರುತ್ತದೆ. ಆದರೂ ಯಾವತ್ತೂ ಧೃತಿಗೆಡದೆ, ತಾವು ನಂಬಿದ ನಾಯಕನಟ ಮತ್ತು ಅವರ ಅಭಿಮಾನಿಗಳು ಕೈ ಹಿಡಿಯುತ್ತಾರೆ ಅನ್ನೋ ಗ್ಯಾರೆಂಟಿಯಿಂದ ನಿರ್ಮಾಪಕರು ಹಣ ವ್ಯಯಿಸುತ್ತಲೇ ಇದ್ದಾರೆ. ಕೊರೋನಾ ಮೊಳಗಿಸಿರುವ ಮರಣ ಮೃದಂಗದ ನಡುವೆ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಸಂತತಿಯನ್ನು ಉಳಿಸಿಕೊಳ್ಳುವ ಜರೂರತ್ತಿದೆ…!!
No Comment! Be the first one.