ಕನ್ನಡ ಸಿನಿಮಾರಂಗದ ಎವರ್ ಗ್ರೀನ್ ಲವರ್ ಬಾಯ್ ಅಂತಾ ಅನ್ನಿಸಿಕೊಂಡಿರುವ ನಟ ಅಜಯ್ ರಾವ್. ಇವರೀಗ ಹಾರರ್ ಎಲಿಮೆಂಟು ಇರುವ ಸಿನಿಮಾದಲ್ಲಿ ನಟಿಸಿ ಥ್ರಿಲ್ ನೀಡಿದ್ದಾರೆ.
ಸಿಟಿಯಲ್ಲಿ ಆರಂಭವಾಗುವ ಕಥೆ ಪ್ರಯಾಣ ಬೆಳೆಸಿ ದೂರದ ನದಿಗೆ ಹೋಗಿ ಇಳಿಯುತ್ತದೆ. ಅಲ್ಲೊಂದು ಕೈಮರವಿರುತ್ತದೆ. ಅದರಡಿ ಕಲ್ಮಡಿ ಜಂಕ್ಷನ್ ಎನ್ನುವ ಬೋರ್ಡು. ಆ ಬೋರ್ಡು ತೆರೆಮೇಲೆ ಬಂದಾಗ ಅದಕ್ಕೆ ತಗುಲಿಕೊಂಡ ಟ್ಯೂಬ್ ಲೈಟು ಮಿಣಕಮಿಣಕ ಅನ್ನುತ್ತದೆ. ಆ ಜಂಕ್ಷನ್ನಿನಲ್ಲಿ ತಿಂಗಳಿಗೊಂದರಂತೆ ಹೆಣ ಉರುಳುತ್ತಿರುತ್ತವೆ. ಸತ್ತವರೆಲ್ಲಾ ಅದೇ ದಾರಿಯಲ್ಲಿದ್ದ ಕೃಷ್ಣ ಟಾಕೀಸಿನಲ್ಲಿ ಸಿನಿಮಾ ನೋಡಿಕೊಂಡು ಬಂದವರು. ಅದೂ, ಎಫ್13 ನಂಬರಿನ ಸೀಟಿನಲ್ಲೇ ಕೂತುಬಂದಿರುತ್ತಾರೆ. ಪ್ಯಾರಾ ನಾರ್ಮಲ್ ಕೇಸುಗಳ ಜೊತೆಗೆ ಭಯಾನಕ ಕ್ರೈಮ್ ಸ್ಟೋರಿ ಕೂಡಾ ಈ ಸಿನಿಮಾದ ಕಥೆಯಲ್ಲಿ ಬೆಸೆದುಕೊಂಡಿದೆ.
ಈ ಸಿನಿಮಾದಲ್ಲಿ ಹೀರೋ ಕ್ರೈಮ್ ವರದಿಗಾರ. ಸಣ್ಣ ಸುಳಿವಿನ ಬೆನ್ನತ್ತಿ ಅಪರಾಧ ಪ್ರಕರಣಗಳನ್ನು ಭೇದಿಸುವ ಚಾಣಾಕ್ಷ. ಇಂಥವನ ಊರಿನಲ್ಲೇ ನಿಗೂಢ ಸಾವುಗಳು ಸಂಭವಿಸುತ್ತಿರುತ್ತವೆ. ಜೊತೆಗಾತಿಯ ಗೆಳತಿ ನಾಪತ್ತೆಯ ಕಾರಣವನ್ನು ಹುಡುಕಹೊರಟವನು ತನ್ನ ಗೆಣೆಕಾರನನ್ನೂ ಕಳೆದುಕೊಳ್ಳುತ್ತಾನೆ. ಪೊಲೀಸರಿಗೇ ಗೈಡ್ ಮಾಡುವ ಮೂಲಕ ತನಿಖೆ ಆರಂಭಿಸುತ್ತಾನೆ. ಹಾಗೆ ಹುಡುಕಹೊರಟವನ ಎದುರು ಸತ್ತವಳ ನೆರಳು ಹಿಂಬಾಲಿಸುತ್ತದೆ. ಕೆದಕುತ್ತಾ ಹೋದಷ್ಟೂ ಪ್ರಕರಣ ಜಟಿಲವಾಗುತ್ತದೆ. ಇದು ದೆವ್ವದ ಕೈವಾಡವಾ? ಕೇಡುಗರ ಕೃತ್ಯವಾ ಅನ್ನೋ ಗೊಂದಲ ಮೂಡುತ್ತದೆ. ಸೆಕ್ಸ್, ಡ್ರಗ್ಸ್ ಮಾಫಿಯಾಗಳ ಗುರುತು ಕಾಣಸಿಗುತ್ತದೆ. ಅದರ ಜೊತೆಗೇ ಅಮಾಯಕ ಆತ್ಮದ ಆರ್ತನಾದ ಕೇಳಿಸುತ್ತದೆ. ಕೊಲೆಗಳ ಕಾರಣ ಹುಡುಕುವುದರ ಜೊತೆಗೆ ನೊಂದ ಆತ್ಮಕ್ಕೆ ನ್ಯಾಯ ದೊರಕಿಸುವ ಜವಾಬ್ದಾರಿ ಮತ್ತು ಸವಾಲುಗಳು ಹೀರೋಗೆ ಎದುರಾಗುತ್ತದೆ.
– ಇದು ಕೃಷ್ಣ ಟಾಕೀಸ್ ಚಿತ್ರದ ಪ್ರಧಾನ ಎಳೆ. ಚಿಕ್ಕಣ್ಣ ಮತ್ತು ಅಜಯ್ ನಡುವಿನ ಕಾಮಿಡಿ ದೃಶ್ಯಗಳು, ಹೀರೋಯಿನ್ ಎಂಟ್ರಿ, ಬಸ್ ಜರ್ನಿಯೊಂದಿಗೆ ಆರಂಭವಾಗುವ ಕಥೆ, ಕ್ಷಣಕ್ಷಣಕ್ಕೂ ರೋಚಕ ತಿರುವುಗಳೊಂದಿಗೆ ಸಾಗುತ್ತದೆ. ಮಿಸ್ಸಿಂಗ್ ಕೇಸುಗಳನ್ನು ಹುಡುಕಹೋದರೆ ಮಿಷಿನ್ ಕೇಸು ಅನಾವರಣಗೊಳ್ಳುತ್ತದೆ!
ಈಗಾಗಲೇ ಹಲವು ಸಿನಿಮಾಗಳಿಗೆ ಕೆಲಸ ಮಾಡಿ, ನಿರ್ದೇಶನದ ಅನುಭವವನ್ನೂ ಪಡೆದಿರುವ, ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರನೂ ಆಗಿರುವ ವಿಜಯಾನಂದ್ ನಿರ್ದೇಶನದ ಸಿನಿಮಾವಿದು. ತೀರಾ ಶ್ರದ್ಧೆ ವಹಿಸಿ, ಎಲ್ಲೂ ಚಿತ್ರದ ಅಂತಿಮ ಗುಟ್ಟನ್ನು ಬಿಟ್ಟುಕೊಡದೆ, ಪ್ರತೀ ದೃಶ್ಯವನ್ನೂ ಕೌತುಕಮಯವಾಗಿಸಿದ್ದಾರೆ. ಒಂದು ಹಂತದಲ್ಲಿ ನಾಯಕನಿಗೆ ಈ ರಹಸ್ಯವನ್ನು ಹಿಂಬಾಲಿಸುವ ಹಾದಿಯಲ್ಲಿ ಬರೀ ಪ್ರಶ್ನೆಗಳೇ ಹುಟ್ಟುತ್ತವಾ? ಹುಟ್ಟಿರುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತವಾ? ಎನ್ನುವ ಅನುಮಾನ ಶುರುವಾಗುತ್ತದೆ. ನೋಡುಗರಿಗೂ ಹಾಗೇ ಅನ್ನಿಸುತ್ತದೆ. ಕಣ್ಮುಂದಿರೋ ಮರ್ಮ ನೂರೆಂಟು ಸಂದೇಹಗಳನ್ನು ಮೂಡಿಸುತ್ತಾ ಎಲ್ಲ ದಿಕ್ಕಿನಲ್ಲೂ ಸಾವಿರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಉದ್ಭವಿಸಿದ ಪ್ರತೀ ಪ್ರಶ್ನೆಗಳಿಗೂ ನಿರ್ದೇಶಕರು ಅಂತಿಮವಾಗಿ ಉತ್ತರ ದೊರಕಿಸಿದ್ದಾರೆ ಅನ್ನೋದೇ ಸಮಾಧಾನ.
ಕರಾವಳಿಯ ಜೊತೆಗೆ ಇತರೆ ಭಾಗದ ಮಾತಿನ ಶೈಲಿಯನ್ನೂ ಅಭ್ಯಾಸ ಮಾಡಿಕೊಂಡರೆ ಯಶ್ ಶೆಟ್ಟಿ ಬೇರೆ ಲೆವೆಲ್ಲಿಗೆ ನಿಲ್ಲಬಹುದಾದ ನಟ. ಅಪಾರ ದೈವಭಕ್ತಿಯೊಂದಿಗೆ ಪ್ರತೀ ವಿಚಾರವನ್ನೂ ಜ್ಯೋತಿಷ್ಯದೊಂದಿಗೆ ತಾಳೆ ಹಾಕುವ ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ರಂಜಿಸುತ್ತಾರೆ. ನಡ ಮುರಿದು ಇಡ ಹೊಡೆಯುವ ಅವರ ಮಾತುಗಳು ಮಜಬೂತಾಗಿವೆ!
ಮೊದಲೇ ಲಕಲಕ ಹೊಳೆಯುವ ಹೀರೋ ಅಜಯ್ ರಾವ್ ಮುಖದ ಮೇಲೆ ಆಗಾಗ ಫಳಕು ಫಳಕು ಬೆಳಕು ಬಿಟ್ಟು ಮತ್ತಷ್ಟು ಸುಂದರವಾಗಿಸಿರುವ ಅಭಿಷೇಕ್ ಜಿ.ಕಾಸರಗೋಡು ಅವರ ಛಾಯಾಗ್ರಹಣ ಬ್ಯೂಟಿಫುಲ್. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಮನಮೋಹನ ಹಾಡು ಹದ್ದುಮೀರಿ ಖುಷಿ ಕೊಡುತ್ತದೆ. ಸಸ್ಪೆನ್ಸ್, ಹಾರರ್ ಕಂ ಥ್ರಿಲ್ಲರ್ ಕಥೆಯ ಈ ಚಿತ್ರದಲ್ಲಿ ಅಪೂರ್ವ ಮತ್ತು ಸಿಂಧೂ ಲೋಕನಾಥ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ಮಂಡ್ಯ ರಮೇಶ್, ಪ್ರಕಾಶ್ ತುಮ್ಮಿನಾಡು, ಶೋಭ್ ರಾಜ್ ಮುಂತಾದವರು ನಿರ್ದೇಶಕರು ಸೂಚಿಸಿದಷ್ಟು ನಟಿಸಿದ್ದಾರೆ.
No Comment! Be the first one.