ಅವನೊಬ್ಬ ರಾಜ. ಸಮೃದ್ಧವಾದ ರಾಜ್ಯ. ಅವನ ಖುಷಿಯೇ ತಮ್ಮ ಖುಷಿ ಅಂತಾ ಭಾವಿಸಿದ ಜನರು. ಎಲ್ಲವೂ ಇದ್ದ ಆ ರಾಜನಿಗೆ ಕೊರತೆ ಅಂತಾ ಇದ್ದಿದ್ದು ಒಂದೇ. ಅದು ನೆಮ್ಮದಿ. ನಾಲ್ಕಾರು ದೇವಸ್ಥಾನ ತಿರುಗಿ, ಹತ್ತಾರು ದೀಪಸ್ನಾನ ಮಾಡಿದ. ದೇವರಿಗೆ ತುಲಾಭಾರ, ಪಿತೃಗಳಿಗೆ ಪಿಂಡ ಇಟ್ಟರೂ ರಾಜನ ಕಣ್ಣಿಗೆ ನೆಮ್ಮದಿಯ ನಿದ್ರೆ, ಮನಸ್ಸಿಗೆ ಶಾಂತಿ ಮಾತ್ರ ಸಿಗೋಗಲೇಇಲ್ಲ.
ನೆಮ್ಮದಿಯನ್ನು ಅರಸಿ ಹೋದ ರಾಜನಿಗೆ ಅದೊಂದು ದಿನ ಭೂತಾರಾಧಕರು ಸಿಗುತ್ತಾರೆ. ನನ್ನ ಕೂಗು ಎಲ್ಲಿಯವರೆಗೆ ಕೇಳಿಸುತ್ತದೋ ಅಲ್ಲಿಯವರೆಗೆ ಜಾಗವನ್ನು ಕಾಡಿನ ಮಕ್ಕಳಿಗೆ ಬಿಟ್ಟುಕೊಡು ಅಂತಾ ಅಜ್ಞಾಪಿಸುತ್ತಾರೆ.
ರಾಜ ದೈವ ಹೇಳಿದ ಭೂಮಿಯನ್ನು ಕಾಡು ಮಕ್ಕಳಿಗೆ ಕೊಟ್ಟು ನೆಮ್ಮದಿಯ ಬದುಕು ಸಾಗಿಸುತ್ತಾನೆ. ಆದರೆ, ಅದೇ ರಾಜನ ಮುಂದಿನ ಪೀಳಿಗೆ ಕಾಡುಮಕ್ಕಳಿಗೆ ಕೊಟ್ಟ ನೆಲದ ಮೇಲೆ ಕಣ್ಣಿಡಲು ಬಂದರೆ ಏನಾಗುತ್ತದೆ ಅನ್ನೋದು ಕಾಂತಾರದ ತಿರುಳು.
ಇಲ್ಲಿ ಕಾಯಲು ನಿಂತವನು ಕೊಲ್ಲುವ ಸಂಚು ಮಾಡುತ್ತಾನೆ. ಕೊಲ್ಲಲೆಂದೇ ಬಂದವನು ಕಾಯಲು ನಿಲ್ಲುತ್ತಾನೆ. ಯಾವುದನ್ನೂ ನಿಖರವಾಗಿ ಹೀಗೇ ಆಗುತ್ತದೆ ಅಂತಾ ಹೇಳಲಿಕ್ಕಾಗುವುದಿಲ್ಲ. ಜನಪದ ಕತೆಗಳ ಜೊತೆಗೆ ಆದಿವಾಸಿ ಜನಾಂಗವನ್ನು ಒಕ್ಕಲೆಬ್ಬಿಸುವ ಸರ್ಕಾರಿ ನೀತಿಗಳು, ಅಧಿಕಾರಿಯ ದರ್ಪ, ನೆಲದ ಕ್ರೀಡೆಯಾದ ಕಂಬಳ, ಕೋಲ, ಭೂತಾರಾಧನೆ, ದೈವಾರಾಧನೆಗಳೆಲ್ಲಾ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.
ದೈವ ಎನ್ನುವ ರೂಪಕವನ್ನಿಟ್ಟುಕೊಂಡು ವಾಸ್ತವದ ಚಿತ್ರಣವನ್ನು ತೆರೆದಿಟ್ಟಿರುವ ರಿಷಬ್ ಶೆಟ್ಟಿ ಕಸುಬುದಾರಿಕೆ ನಿಜಕ್ಕೂ ಮೆಚ್ಚುವಂಥದ್ದು. ಇದು ಕರಾವಳಿಯ ಸಂಸ್ಕೃತಿ ಮತ್ತು ಬದುಕನ್ನು ಎತ್ತಿಹಿಡಿಯುವ ಚಿತ್ರ. ರಿಷಬ್ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡಾ ಬರಬಹುದು. ಪ್ರಕಾಶ್ ತುಮಿನಾಡ್ ಹಾಸ್ಯ ನಗು ಬರಿಸುತ್ತದೆ. ಸಪ್ತಮಿ ಗೌಡ ಸೀರಿಯುಟ್ಟು ಮಾದಕವಾಗಿ ಕಾಣಿಸುತ್ತಾರೆ. ಖಾಕಿ ತೊಟ್ಟಾಗ ಮೋಹಕವಾಗಿ ನಟಿಸಿದ್ದಾರೆ.
ತಾಂತ್ರಿಕವಾಗಿ ಚಿತ್ರ ತುಂಬಾ ಚೆನ್ನಾಗಿದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್ ಆಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜೊತೆಗೆ ವಿಕ್ರಂ ಮೋರ್ ಸಂಯೋಜಿಸಿರುವ ಫೈಟ್ಗಳು ಕಾಂತಾರದ ಜೀವಾಳ. ಇದು ಕರಾವಳಿಯದ್ದೇ ಕಥೆಯಾಗಿರುವುದರಿಂದ ಅಲ್ಲಿನ ಭಾಷೆಯನ್ನೇ ಬಳಸಿದ್ದಾರೆ. ಬೇರೆ ಭಾಗದ ಜನರಿಗೆ ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಈಗ ಕನ್ನಡದ ಪ್ರೇಕ್ಷಕರು ಜಗತ್ತಿನ ಎಲ್ಲ ಭಾಷೆಯ ಸಿನಿಮಾವನ್ನು ನೋಡುವ ಅಭ್ಯಾಸ ಮಾಡಿಕೊಂಡಿರುವುದರಿಂದ ಕಾಂತಾರದ ಕರಾವಳಿ ಕನ್ನಡವನ್ನು ಅರಗಿಸಿಕೊಳ್ಳುವುದು ಅಂಥಾ ಕಷ್ಟವೆನಿಸುವುದಿಲ್ಲ.
No Comment! Be the first one.