ಡೈರೆಕ್ಟರ್ ಗುರುಪ್ರಸಾದ್ ವಿರುದ್ಧ ದೂರು ದಾಖಲು
ಮಠ, ಎದ್ದೇಳು ಮಂಜುನಾಥ ಮತ್ತಿತರ ಸಿನಿಮಾಗಳ ನಿರ್ದೇಶಕ, ನಟ ಗುರುಪ್ರಸಾದನ ವಂಚನಾ ಪುರಾಣ ಬಗೆದಷ್ಟೂ ತೆರೆದುಕೊಳ್ಳುತ್ತಾ ಹೋಗುತ್ತಿದೆ. ತಮ್ಮ ಜೊತೆಯಲ್ಲಿದ್ದ ಸಹಾಯಕ ನಿರ್ದೇಶಕ ಶ್ರೀನಿವಾಸ್ ಎಂಬುವವರಿಗೆ ಗುರು ಮಾಡಿದ ಮಹಾ ಮೋಸದ ವಿಚಾರವನ್ನು ಇತ್ತೀಚೆಗೆ ತಾನೆ ಪ್ರಕಟಿಸಲಾಗಿತ್ತು. ಈಗ ಮತ್ತೊಬ್ಬರು ಗುರು ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಟೋಟಲ್ ಕನ್ನಡ ಹೆಸರಿನಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿ. ಲಕ್ಷ್ಮೀಕಾಂತ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ಗುರುಪ್ರಸಾದ್ ವಿರುದ್ಧ ಕಂಪ್ಲೇಂಟು ನೀಡಿದ್ದಾರೆ. ಅದರ ಯಥಾವತ್ತು ವಿವರ ಇಲ್ಲಿದೆ…
ಇಂದ,
ವಿ. ಲಕ್ಷ್ಮೀಕಾಂತ್
ಟೋಟಲ್ ಕನ್ನಡ ಮಳಿಗೆ
ಗೆ,
ಮುಖ್ಯ ಠಾಣಾಧಿಕಾರಿ
ಜಯನಗರ ಪೋಲಿಸ್ ಠಾಣೆ
ಬೆಂಗಳೂರು 560011
ಶ್ರೀಯುತರೇ,
ನಮಸ್ತೆ. ನಿಮಗೆ ತಿಳಿದಿರುವಂತೆ ಟೋಟಲ್ ಕನ್ನಡ ಮಳಿಗೆಯು ಕನ್ನಡ ಸಾಹಿತ್ಯ ಮತ್ತು ಸಿನಿಮಾ ಸೀ.ಡಿ.ಗಳ ಸಮಗ್ರ ಮಳಿಗೆಯಾಗಿದ್ದು, ನಮ್ಮಲ್ಲಿ ಸಿನಿಮಾಗಳಿಗೆ ವಿಶೇಷ ಅದ್ಯತೆ ನೀಡುತ್ತಿದ್ದೇವೆ. ಸಿನಿಮಾಗಳಿಗೆ ಸಂಬಂಧ ಪಟ್ಟ ಪುಸ್ತಕಗಳ ಸಂಗ್ರಹ ನಮ್ಮಲ್ಲಿ ಇದೆ.
ನಮ್ಮ ಮಳಿಗೆಯ ಪರಿಚಯವನ್ನು ಚೆನ್ನಾಗಿ ಬಲ್ಲವರಾಗಿರುವ ನಿರ್ದೇಶಕ ಗುರುಪ್ರಸಾದ್ ಅವರು ನಮ್ಮ ಮಳಿಗೆಗೆ 2019 ವರ್ಷ ಜನವರಿ ತಿಂಗಳಿನಲ್ಲಿ ಅವರ ಸ್ನೇಹಿತರೊಡನೆ ಭೇಟಿ ನೀಡಿದರು. ಅವರು ವಿಜಯನಗರದಲ್ಲಿ ನಡೆಸುತ್ತಿದ್ದ ಸಿನಿಮಾ ತರಬೇತಿ ಶಾಲೆ ವಿದ್ಯಾರ್ಥಿಗಳಿಗೆ “ಓದಲೇ ಬೇಕಾದ ೧೦೦ ಪುಸ್ತಕಗಳ” ನ್ನು ಪರಿಚಯಸಿಬೇಕೆಂದು ನಮ್ಮ ಮಳಿಗೆಗೆ ಬಂದು ಸುಮಾರು ೩ ಗಂಟೆಗಳ ಕಾಲ ಮಳಿಗೆಯಲ್ಲಿದ್ದು ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡರು. ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂದು ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕೆಂದು ಕೇಳಿಕೊಂಡರು. ಅವರು ಕೇಳಿದ ೧೦೦ ಪುಸ್ತಕಗಳಲ್ಲಿ ಎಲ್ಲವೂ ನಮ್ಮಲ್ಲಿ ಲಭ್ಯವಿರಲಿಲ್ಲ. ನಾನು ೧ ವಾರ ಸಮಯ ತೆಗೆದುಕೊಂಡು ೭೫ ಪುಸ್ತಕಗಳನ್ನು ಸಂಗ್ರಹಿಸಿ ೫ ಸೆಟ್ ಗಳನ್ನು ಸಿದ್ದಪಡಿಸಿ ನಾನೇ ಸ್ವತಃ ಅವರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ೫ ಸೆಟ್ ಗಳನ್ನು ನೀಡಿದೆನು.
ಪ್ರತಿ ಸೆಟ್ ನ ಬೆಲೆ 13,151 ರೂಗಳಾಗಿದ್ದು ರಿಯಾಯಿತಿ ನೀಡಿ 11,000 ಗಳನ್ನು ನೀಡುವಂತೆ ಕೇಳಿಕೊಂಡೆ. ಅವರು ಹಣವನ್ನು ಶೀಘ್ರವೇ ಪಾವತಿಸುವೆ ಎಂದು ತಿಳಿಸಿದರು. ನಂತರ ನಾನು ಸಾಕಷ್ಟು ಬಾರಿ ಕರೆ ಮಾಡಿದರೂ ಹಣ ಪಾವತಿಸಲೇ ಇಲ್ಲ. ಕೊನೆಗೆ ಅವರ ಕಛೇರಿಗೆ ನಮ್ಮ ಸಿಬ್ಬಂದಿಯನ್ನ ಕಳುಹಿಸಿದೆ. ಆದರೆ ಅವರು ಅಲ್ಲಿ ತರಬೇತಿಯನ್ನು ನಿಲ್ಲಿಸಿದ್ದರು. ಅವರ ವಿಳಾಸ ನನಗೆ ಸಿಗಲಿಲ್ಲ.
2019 ಸೆಪ್ಟೆಂಬರ್ ತಿಂಗಳಿನಲ್ಲಿ ನಮ್ಮ ತಂದೆಗೆ ಕ್ಯಾನ್ಸರ್ ಇದೆ ಎಂದು ತಿಳಿಯಿತು. ಸುಮಾರು ೮ ತಿಂಗಳುಗಳ ಕಾಲ ನಮ್ಮ ತಂದೆಗೆ ಸಾಕಷ್ಟು ಹಣ ಖರ್ಚು ಮಾಡಿದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ದುರದೃಷ್ಟವಶಾತ್ ನಮ್ಮ ತಂದೆಯವರು 2020 ಏಪ್ರಿಲ್ 22 ರಂದು ದೈವಾಧೀನರಾದರು. ನಮ್ಮ ತಂದೆ ಆಸ್ಪತ್ರೆಯಲ್ಲಿ ಇರುವಷ್ಟು ಕಾಲ , ಗುರುಪ್ರಸಾದ್ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದೆ, ಮೆಸೇಜ್ ಕಳುಹಿಸಿದೆ. ಹಣ ಪಾವತಿಸುಂತೆ ಬೇಡಿಕೊಂಡೆ ಅಥವಾ ಪುಸ್ತಕ ಹಿಂತಿರುಗಿಸುವಂತೆ ಕೇಳಿಕೊಂಡೆ. ಆದರೆ ಅವರು ನನ್ನ ಕರೆಗೆ ಉತ್ತರವನ್ನೇ ನೀಡಲಿಲ್ಲ.
ಗುರುಪ್ರಸಾದ್ ಅವರು ನನ್ನಿಂದ ಪಡೆದಿರುವ ಪುಸ್ತಕಗಳ ಹಣ ( 5 ಸೆಟ್ ಗಳಿಗೆ 13151 * 5 = 65,755 ರೂ ಗಳನ್ನು ) ನೀಡಲಿ. ದಯವಿಟ್ಟು ನಿಮ್ಮಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ , ನನಗೆ ಆಗಿರುವ ಮೋಸ ಮತ್ಯಾರಿಗೂ ಆಗದಿರಲಿ, ಗುರುಪ್ರಸಾದ್ ಅವರು ಮತ್ತೆ ಯಾರಿಗೂ ಈ ರೀತಿ ಮಾಡದಂತೆ ಸಾರ್ವಜನಿಕರು, ಸಿನಿಮಾಸಕ್ತರು ಎಚ್ಚರವಹಿಸಿ ಈ ಪತ್ರದೊಂದಿಗೆ ನಾನು ಗುರುಪ್ರಸಾದ್ ಗೆ ನೀಡಿದ್ದ ಪುಸ್ತಕಗಳ ರಸೀದಿಯ ಕಾಪಿಯನ್ನು ಸಹ ಲಗತ್ತಿಸಿರುವೆ. ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನೀಡಲು ನಾನು ಸಿದ್ದನಿದ್ದೇನೆ. ಧನ್ಯವಾದಗಳು,
ಲಕ್ಷ್ಮೀಕಾಂತ್.ವಿ
ಟೋಟಲ್ ಕನ್ನಡ
No Comment! Be the first one.