ಕಿರಿಕ್ ಪಾರ್ಟಿ, ಬೆಲ್ ಬಾಟಮ್, ಸರ್ಕಾರಿ ಪ್ರಾಥಮಿಕ ಶಾಲೆ ಖ್ಯಾತಿಯ ರಿಷಭ್ ಶೆಟ್ಟಿ ಮುಖ್ಯಸ್ಥಿಕೆಯಲ್ಲಿ ಕಥಾ ಸಂಗಮ ಚಿತ್ರ ಡಿಸೆಂಬರ್ ೬ ಕ್ಕೆ ತೆರೆಗೆ ಬರುತ್ತಿದೆ. ಸದ್ಯಕ್ಕೀಗ ಸ್ಯಾಂಡಲ್ವುಡ್ ರಿಲೀಸ್ ಸಿನಿಮಾಗಳ ಅತಿವೃಷ್ಟಿಗೆ ಸಿಲುಕಿದೆ. ಡಿಸೆಂಬರ್ ೬ಕ್ಕೆ ಕೂಡಾ ಸಾಕಷ್ಟು ಸಿನಿಮಾಗಳು ರಿಲೀಸಾಗುತ್ತಿವೆ. ಅಷ್ಟೊಂದು ಸಿನಿಮಾಗಳ ನಡುವೆ ಕಥಾ ಸಂಗಮವೂ ಬಿಡುಗಡೆ ಆಗುತ್ತಿದೆ. ಈ ಪ್ರವಾಹದಲ್ಲಿ ತಾವು ಕೊಚ್ಚಿಕೊಂಡು ಹೋಗುವ ಅಪಾಯದಿಂದ ಪಾರಾಗಲು ನಿರ್ಮಾಪಕರಲ್ಲಿ ಒಬ್ಬರಾದ ರಿಷಭ್ ಶೆಟ್ಟಿ ಈ ಚಿತ್ರವನ್ನು ತಮ್ಮದೇ ಲೆಕ್ಕಾಚಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅವರ ಪ್ರಕಾರ ಡಿಸೆಂಬರ್ ೬ ಕ್ಕೆ ಕಥಾ ಸಂಗಮಮಲ್ಟಿಪ್ಲೆಕ್ಸ್ ಹಾಗೂ ಜಿಲ್ಲಾ ಕೇಂದ್ರದಲ್ಲಿನ ಚಿತ್ರಮಂದಿರಗಳು ಸೇರಿದಂತೆ ಸರಿ ಸುಮಾರು ೬೦ ರಿಂದ ೭೦ ಚಿತ್ರಮಂದಿರಗಳಲ್ಲಿ ಮಾತ್ರ ತೆರೆಗೆ ಬರಲಿದೆ. ಆನಂತರ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ತಾಲೂಕು ಕೇಂದ್ರಗಳಿಗೂ ಕಾಲಿಡುವ ಯೋಚನೆ ಅವರದು.
ಅವರದೇ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೂ ಅವರು ಇದೇ ತಂತ್ರ ಬಳಸಿದ್ದರು. ಅವರ ಲೆಕ್ಕಾಚಾರ ಅಲ್ಲಿ ವರ್ಕೌಟ್ ಆಗಿತ್ತು. ಚಿತ್ರಕ್ಕೆ ನಿರೀಕ್ಷೆ ಮೀರಿದ ಬೆಂಬಲವೂ ಸಿಕ್ಕಿತ್ತು. ಜನ ಮೆಚ್ಚುಗೆಯ ಜತೆಗೆ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆಯೂ ಮಾಡಿತ್ತು. ಈಗ ಅದೇ ಫಾರ್ಮುಲಾವನ್ನು ಕಥಾ ಸಂಗಮ ಚಿತ್ರಕ್ಕ ಬಳಸಲು ಹೊರಟಿದ್ದಾರೆ ರಿಷಭ್ ಶೆಟ್ಟಿ. ಸದ್ಯದ ಪರಿಸ್ಥಿತಿ ಭೀಕರವಾಗಿದೆ. ಇಷ್ಟೆಲ್ಲ ಸಿನಿಮಾ ಬಿಡುಗಡೆಯಾದ್ರೆ, ಯಾರಿಗೆ ಎಷ್ಟು ಚಿತ್ರಮಂದಿರಗಳು ಸಿಗಬಹುದು? ಪ್ರೇಕ್ಷಕರು ಯಾವ ಸಿನಿಮಾಕ್ಕೆ ಬರಬೇಕು? ನೆನಪಿಸಿಕೊಂಡರೆ ಭಯ ಆಗುತ್ತಿದೆ. ನಮಗೆ ನಮ್ಮ ಚಿತ್ರಗಳ ಪ್ರೇಕ್ಷಕರು ಯಾರು ಎನ್ನುವುದು ಗೊತ್ತಾಗಿದೆ. ಅದಕ್ಕೆ ತಕ್ಕಂತೆಯೇ ಚಿತ್ರವನ್ನು ತೆರೆಗೆ ತರಲು ನಿರ್ಧರಿಸಿದ್ದೇವೆ. ದೊಡ್ಡ ಮಟ್ಟದಲ್ಲಿ ತೆರೆಗೆ ಬರಬೇಕೆನ್ನುವ ಆಲೋಚನೆ ನಮಗಿಲ್ಲ.
ಮಲ್ಟಿಪ್ಲೆಕ್ಸ್ ಮತ್ತು ಜಿಲ್ಲಾ ಕೇಂದ್ರದ ಕೆಲವು ಚಿತ್ರಮಂದಿರಗಳಲ್ಲಿ ಮೊದಲು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಅಲ್ಲಿ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ತಾಲೂಕು ಕೇಂದ್ರ ಮತ್ತು ಗ್ರಾಮೀಣ ಪ್ರದೇಶದ ಚಿತ್ರಮಂದಿರಗಳಿಗೆ ಹೋಗುವುದು ನಮ್ಮ ನಿರ್ಧಾರ ಎನ್ನುತ್ತಾರೆ ರಿಷಭ್ ಶೆಟ್ಟಿ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಮಾಧ್ಯಮದ ಮುಂದೆ ಬಂದಾಗ ತಮ್ಮ ರಿಲೀಸ್ ಪ್ಲಾನ್ ವಿವರಿಸಿದರು. ಬರಬರುತ್ತಾ ಕಥಾ ಸಂಗಮ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ ಸಿನಿಮಾ. ಏಳು ಕತೆಗಳ ಸಿನಿಮಾ ಎನ್ನುವುದು ಒಂದೆಡೆಯಾದರೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು ಹಾಗೂ ಏಳು ಮಂದಿ ಛಾಯಾಗ್ರಾಹಕರ ಕೆಲಸ ಮಾಡಿರುವುದು ಕಥಾಸಂಗಮದ ಸ್ಪೆಷಲ್ಲು!