ಕೆ.ಜಿ.ಎಫ್: ಇದು ಯಾರ ಗೆಲುವು? ನೂರಾರು ಮಂದಿ ಅಗೆಯದಿದ್ದ ಚಿನ್ನ ಸಿಗಲು ಸಾಧ್ಯವೇ?

ಕೆ.ಜಿ.ಎಫ್ ಎನ್ನುವ ಸಿನಿಮಾ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಕನ್ನಡ ಸಿನಿಮಾವೊಂದು ಭಾರತದಾದ್ಯಂತ ಮಾರುಕಟ್ಟೆ ಸ್ಥಾಪಿಸಿಕೊಂಡಿದೆ. ಈ ಹಿಂದೆ ಒಂದಷ್ಟು ಸಿನಿಮಾಗಳು ಹೊರರಾಜ್ಯಗಳಲ್ಲಿ ಬಿಡುಗಡೆಗೊಂಡು ಖಾತೆ ತೆರೆದಿದ್ದವಾದರೂ ಈ ಮಟ್ಟಿಗೆ ಸೌಂಡು ಮಾಡಿರಲಿಲ್ಲ ಅನ್ನೋದು ನಿಜ. ಆದರೆ ಇಂಥಾ ಒಂದು ಗೆಲುವಿನಿಂದ ಈಗ ಸಿಕ್ಕ ಸ್ಥಾನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆಂದುಕೊಂಡರೆ ಅದಕ್ಕಿಂತ ಸಿನಿಕತನ ಬೇರೊಂದಿಲ್ಲ. ಹಾಗೆ ಸಿಕ್ಕ ಜಾಗವನ್ನು ನಮ್ಮದಾಗಿಸಿಕೊಳ್ಳಲು ಇಂಥಾ ಇನ್ನೊಂದಷ್ಟು ಗೆಲುವುಗಳು ಖಂಡಿತಾ ಬೇಕೇಬೇಕು. ಅಂಥಾ ಎರಡನೇ ಪ್ರಯತ್ನಕ್ಕೆ ಕೆಜಿಎಫ್ ಎರಡನೇ ಅಧ್ಯಾಯದ ಮೂಲಕ ಪ್ರಯತ್ನಿಸಲಾಗುತ್ತದೆ ಎಂಬ ನಂಬಿಕೆ ಈ ವರೆಗಿತ್ತು. ಆದರೆ ಚಿತ್ರತಂಡದೊಳಗಿನ ಈ ಕ್ಷಣದ ವಾತಾವರಣ ಮಾತ್ರ ಅದಕ್ಕೆ ಪಕ್ಕಾ ತದ್ವಿರುದ್ಧವಾಗಿದೆ!

ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದಂತೇ ಇದು ಯಾರ ಗೆಲುವು ಎಂಬಂಥ ಪ್ರಶ್ನೆ ಏಳುತ್ತದೆ. ಸಾಮಾನ್ಯವಾಗಿ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಾದಮೇಲೆ ಆ ಸಿನಿಮಾ ಟೀಮುಗಳು ಚೂರು ಚೂರಾಗಿಬಿಡುತ್ತದೆ. ಅದಕ್ಕೆ ಕಾರಣ ಗೆಲುವಿಗೆ ನಾನು ಕಾರಣ ಅನ್ನೋ ಈಗೋ ಕ್ಲ್ಯಾಶುಗಳು. ಅಂಥಾದ್ದೇ ಸ್ಥಿತಿ ಕೆಜಿಎಫ್ ಸಿನಿಮಾ ತಂಡವನ್ನೂ ಬಾಧಿಸುತ್ತಿದೆಯೇ. ಒಂದು ಅದ್ಭುತ ದೃಷ್ಯಕಾವ್ಯ ಕಟ್ಟಲು ಎರಡು ವರ್ಷಗಳ ಕಾಲ ಶ್ರಮಿಸಿದ ಮನಸುಗಳೆಲ್ಲ ಸದ್ದದಿಲ್ಲದೆ ದೂರ ಸರಿಯುತ್ತಿವೆಯಾ… ಹೊರಜಗತ್ತಿನಲ್ಲಿ ಇಂಥಾ ಹತ್ತಾರು ಪ್ರಶ್ನೆಗಳು ಹೊಗೆಯಾಡಲಾರಂಭಿಸಿವೆಯೆಂದರೆ, ಕೆಜಿಎಫ್ ಟೀಮಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದೇ ಅರ್ಥ!

ಎರಡ್ಮೂರು ಮಂದಿ ಸೇರಿ ಮಾಡೋ ಸಣ್ಣಪುಟ್ಟ ಕೆಲಸ ಕಾರ್ಯ, ಪುಟ್ಟದೊಂದು ಗೆಲುವಲ್ಲಿಯೂ ಕ್ರೆಡಿಟ್ಟಿಗಾಗಿ ಕದನ ನಡೆಯುತ್ತೆ. ಈ ಅಸಮಾಧಾನವೆಂಬುದು ಒಳಗೊಳಗೇ ಕುದ್ದು ಜ್ವಾಲಾಮುಖಿಯಾಗುತ್ತೆ. ಅದು ಅಲ್ಲಿಗೇ ತಣ್ಣಗಾಗದಿದ್ದರೆ ಪುಟ್ಟ ಟೀಮೂ ನಾಮಾವಶೇಷಗೊಳ್ಳುತ್ತೆ. ಹಾಗಿರೋವಾಗ ಎರಡು ವರ್ಷಗಳ ಕಾಲ ಕೆಜಿಎಫ್ ಎಂಬ ಚಿತ್ರವನ್ನು ಕಟ್ಟಿ ನಿಲ್ಲಿಸಿದ ಅಷ್ಟು ದೊಡ್ಡ ತಂಡದಲ್ಲಿನ ಮನಸುಗಳು ಕ್ರೆಡಿಟ್ಟಿಗಾಗಿ, ಸಣ್ಣ ಮೆಚ್ಚುಗೆಗಾಗಿ, ಗೆಲುವಿನಲ್ಲಿ ತಮ್ಮದೂ ಪಾಲಿದೆ ಎಂಬುದನ್ನು ನಿರೂಪಿಸೋದಕ್ಕಾಗಿ ತಹತಹಿಸದಿರುತ್ತವಾ? ಇಂಥಾ ಹೊತ್ತಲ್ಲಿ ಗೆಲುವಿನ ಎಲ್ಲ ಕ್ರೆಡಿಟ್ಟೂ ಒಬ್ಬರ ಟ್ಯಾಲೆಂಟಿನ ಗೋಡೌನಿಗೇ ಜಮೆಯಾಗುತ್ತಾ ಹೋದರೆ ರೋಶಾಗ್ನಿ ಧಗಧಗಿಸಿಯೇ ತೀರುತ್ತದೆ ಎಂಬುದು ಕೆಜಿಎಫ್ ಗರ್ಭದಲ್ಲಿರೋ ಚಿನ್ನದ ನಿಕ್ಷೇಪದಂಥಾದ್ದೇ ಪರಮ ಸತ್ಯ.

ಅಷ್ಟಕ್ಕೂ ಒಂದು ಸಿನಿಮಾ ಎಂಬುದು ಯಾರೋ ಒಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವಂಥಾದ್ದಲ್ಲ. ಅದರಲ್ಲಿ ಡೈರೆಕ್ಟರ್, ಹೀರೋ, ಕ್ಯಾಮೆರಾದಿಂದ ಮೊದಲ್ಗೊಂಡು ಲೈಟ್ ಬಾಯ್‌ಗಳ ತನಕ ನೂರಾರು ಮಂದಿಯ ಶ್ರಮವಿರುತ್ತೆ. ಎರಡು ವರ್ಷಗಳ ಕಾಲ ಯಶ್ ಗಡ್ಡ ಬಿಟ್ಟುಕೊಂಡು ಶ್ರಮ ವಹಿಸಿದ್ದು ಹೇಗೆ ಮುಖ್ಯವೋ, ಆ ನೂರಾರುಇ ಮಂದಿಯ ಎರಡು ವರ್ಷಗಳ ಧ್ಯಾನವೂ ಅಷ್ಟೇ ಮುಖ್ಯ. ಈವತ್ತಿಗೆ ಇಡೀ ಕೇಜಿಎಫ್ ಒಂದು ದೃಷ್ಯ ಕಾವ್ಯವಾದುದ್ದರ ಹಿಂದೆ ಅಂಥಾ ಬಿಡಿ ಬಿಡಿ ಕೆಲಸಗಳ ಬಾಬತ್ತಿದೆ. ನಿರ್ದೇಶನ, ಕ್ಯಾಮೆರಾ, ಕಲಾ ನಿರ್ದೇಶನ, ಎಡಿಟಿಂಗ್, ಸಂಗೀತ, ಸಾಹಸ ನಿರ್ದೇಶನ… ಇಂಥಾ ಅದೆಷ್ಟೋ ವಿಭಾಗಗಳ, ಅದೆಷ್ಟೋ ಜನರ ಬೆವರ ಹನಿಗಳು ತಾಕದಿದ್ದರೆ ಕೆಜಿಎಫ್ ಮಾತ್ರವಲ್ಲ ಯಾವ ಚಿತ್ರವೂ ತಯಾರಾಗೋದಿಲ್ಲ. ಈ ಪಾಟಿ ಗೆಲುವು ದಕ್ಕೋದಂತೂ ದೂರದ ಮಾತು.

ಕೆಜಿಎಫ್‌ನ ಭಿನ್ನವಾದ ಕಥೆಯೊಂದಿಗೆ ಚಿನ್ನದ ಗಣಿಯ ಗರ್ಭಕ್ಕಿಳಿದು ರೋಚಕ ಕಥೆಗಳನ್ನು ಹೆಕ್ಕಿ ತೆಗೆದವರು ನಿರ್ದೇಶಕ ಪ್ರಶಾಂತ್ ನೀಲ್. ಒಟ್ಟಾರೆ ಚಿತ್ರದ ಅಸಲೀ ಶಕ್ತಿಯಂತಿರುವವರು ಪ್ರಶಾಂತ್. ಇದರ ಹಿಂದೆ ಯಾರ ಶ್ರಮವಿದ್ದರೂ, ಎಲ್ಲ ವಿಭಾಗಗಳು ಪಾಲ್ಗೊಂಡಿದ್ದರೂ ಕೂಡಾ ಅಂಥಾದ್ದೊಂದು ಕೆಲಸ ತೆಗೆಸಿದ್ದರ ಹಿಂದೆ ಅವರ ಶ್ರಮವಿದೆ. ಆದರೆ ತನ್ನ ಕಥೆ, ಸಿನಿಮಾ ಬಿಟ್ಟರೆ ಬೇರ್‍ಯಾವುದರತ್ತಲೂ ಗಮನ ಹರಿಸದ ಪ್ರಶಾಂತ್ ನೀಲ್ ಸಿನಿಮಾ ಜಗತ್ತಿಗೆ ಅಪರಿಚಿತವಾಗಿರೋ ಅಂತರ್ಮುಖಿ ಗುಣ ಹೊಂದಿರುವವರು. ಬಹುಶಃ ಅವರು ಈ ಥರದ್ದೊಂದು ಸಮರ್ಪಣಾ ಭಾವದಿಂದ ಎರಡು ವರ್ಷಗಳನ್ನು ಮೀಸಲಿಡದೇ ಇದ್ದಿದ್ದರೆ ಖಂಡಿತಾ ಕೆಜಿಎಫ್ ಕಣ್ತೆರೆಯುತ್ತಿರಲಿಲ್ಲ.

ಇನ್ನು ಕೆಜಿಎಫ್ ಚಿತ್ರ ನೋಡಿದವರೆಲ್ಲ ಬೆರಗಾಗಿದ್ದು ಅದರಲ್ಲಿನ ಕ್ಯಾಮೆರಾ ವರ್ಕ್ ಬಗ್ಗೆ. ಇಡೀ ಚಿತ್ರವನ್ನು ಬಾಲಿವುಡ್, ಹಾಲಿವುಡ್ ರೇಂಜಿಗೆ ಕಟ್ಟಿ ನಿಲ್ಲಿಸುವಲ್ಲಿ ಛಾಯಾಗ್ರಾಹಕ ಭುವನ್ ಗೌಡ ಪರಿಶ್ರಮ ಕಡಿಮೆಯದ್ದೇನಲ್ಲ. ಪ್ರತೀ ಫ್ರೇಮುಗಳಲ್ಲಿಯೂ ಜೀವಂತಿಕೆ ನಳನಳಿಸುವಂತೆ ಮಾಡಿದ್ದು ಭುವನ್ ಕಸುಬುದಾರಿಕೆ. ಆ ದೃಷ್ಯಾವಳಿಗಳನ್ನು ಒಪ್ಪ ಓರಣವಾಗಿಸುವಲ್ಲಿ ಕೆಲಸ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ. ಸಂಕಲನವನ್ನೂ ಕೂಡಾ ಕುಸುರಿ ಕೆಲಸದಂತೆ ಮಾಡಿರೋ ಶ್ರೀಕಾಂತ್ ಕೂಡಾ ಒಟ್ಟಾರೆ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಪ್ರತೀ ದೃಷ್ಟಗಳಿಗೂ ಮಿಳಿತವಾದಂಥಾ ಸಂಗೀತ ನೀಡಿರೋ ರವಿ ಬಸ್ರೂರ್ ಕೆಜಿಎಫ್‌ಗಾಗಿ ಹೊಸಾ ಮ್ಯಾಜಿಕ್ಕನ್ನೇ ಮಾಡಿದ್ದಾರೆ. ಇವರ ಜೊತೆ ಕೆಲಸ ಮಾಡಿದವರೂ ಸೇರಿದಂತೆ ಒಂದರ್ಥದಲ್ಲಿ ಎಲ್ಲರೂ ಹೀರೋಗಳೇ.

ಎಲ್ಲಕ್ಕಿಂತಾ ಮುಖ್ಯವಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ, ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ಇಡೀ ಚಿತ್ರದ ಮೇಲ್ವಿಚಾರಣೆ ನಡೆಸಿದ ಕಾರ್ತಿಕ್ ಗೌಡ ಎಲ್ಲರದ್ದೂ ಶ್ರಮ ಇದೆ. ಹೊಂಬಾಳೆ ಸಂಸ್ಥೆ ದೊಡ್ಡದಾಗಿ ಕನಸು ಕಂಡು ಅಷ್ಟೇ ದೊಡ್ಡ ಮಟ್ಟದಲ್ಲಿ ಕಾಸನ್ನು ಪಣಕ್ಕಿಡದೇ ಹೋಗಿದ್ದರೆ ಈಗ ಕಣ್ಣ ಮುಂದಿರೋ ಯಾವ ಅಚ್ಚರಿಗಳೂ ಘಟಿಸುತ್ತಲೇ ಇರಲಿಲ್ಲ. ಟ್ರೈgಲರ್ ಬಿಡುಗಡೆಯೂ ಸೇರಿದಂತೆ ಪ್ರತಿಯೊಂದು ಹಂತದಲ್ಲಿಯೂ ಬೇರೆ ಭಾಷೆಗಳವರೇ ಕಣ್ಣರಳಿಸಿ ನೋಡುವಂತೆ ಮಾಡಿದ್ದು ಹೊಂಬಾಳೆ ಸಂಸ್ಥೆ. ಅದರ ಫಲವೇ ಕೆಲಿಎಫ್‌ಗೆ ಸಿಕ್ಕ ಅಭೂತಪೂರ್ವ ಗೆಲುವು.

ಹಾಗೆ ನೋಡಿದರೆ ಯಶ್ ಕೂಡಾ ಈ ಚಿತ್ರಕ್ಕಾಗಿ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಛಲ ಬಿಡದೆ ನೀಳವಾದ ಗಡ್ಡ ಬೆಳೆಸಿ ವರ್ಷಗಟ್ಟಲೆ ಅದನ್ನೇ ಮೇಂಟೇನು ಮಾಡುತ್ತಾ ಕಾದಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರಂಥವರೇ ಗಡ್ಡ ಬೋಳಿಸು ಅಂತ ಗದರಿದರೂ ಹುಲುಸಾಗಿ ಬೆಳೆದ ಗಡ್ಡದ ಒಂದೆಳೆಗೂ ಕತ್ತರಿ ಸೋಕಿಸದ ಅವರ ಛಲ ಮೆಚ್ಚುವಂಥಾದ್ದೇ. ಅಷ್ಟಕ್ಕೂ ಒಂದು ಹದಿನೈದು ದಿನ ಶೇವ್ ಮಾಡದಿದ್ದರೆ, ಟ್ರಿಮ್ ಮಾಡದಿದ್ದರೆ ಗಡ್ಡ ಎಂಥಾ ಕಿರಿಕಿರಿ ಹುಟ್ಟಿಸುತ್ತದೆ ಎಂಬುದು ಒಂದಷ್ಟು ಜನರಿಗಾದರೂ ಗೊತ್ತಿರುತ್ತದೆ. ಅಂಥಾದ್ದರಲ್ಲಿ ಆ ರೇಂಜಿಗೆ ಗಡ್ಡ ಬಿಟ್ಟು ಎರಡು ವರ್ಷ ಹಾಗೇ ಇದ್ದ ಯಶ್ ಆತ್ಮಶಕ್ತಿ ಸ್ತುತ್ಯಾರ್ಹವೇ. ಇಂಥಾ ಸಮರ್ಪಣಾ ಭಾವದಿಂದಲೇ ಕೈತುಂಬಾ ಸಂಭಾವನೆಯನ್ನೂ ಪಡೆದು ಯಶ್ ನಟಿಸಿದ್ದಾರೆ. ಆದರೆ ಈವತ್ತಿಗೆ ಕೆಜಿಎಫ್ ಅಂದ್ರೆ ಯಶ್, ಗೆಲುವೆಲ್ಲ ಅವರೊಬ್ಬರದ್ದೇ ಎಂಬಂತೆ ಉತ್ಸವ ಹೊರಟಿದೆ. ಈ ಮೆರವಣಿಗೆ ಹೊರಡಿಸಲು ವರ್ಷಗಟ್ಟಲೆ ಮಣ್ಣ ಹೊತ್ತ ಮನಸುಗಳು ನೋಯದಿರುತ್ತವಾ?

#


Posted

in

by

Tags:

Comments

Leave a Reply