ನಾವು ಮಾಡುವ ಪ್ರತಿಯೊಂದು ಪಾಪವು ಶಾಪವಾಗಿ ಹಿಂಬಾಲಿಸುತ್ತದೆ. ಪಾಪ ಮಾಡುತ್ತಿರುವಾಗ ಹಾಯಾಗಿ, ಸುಖವಾಗಿ ಇರುತ್ತದೆ. ಆದರೆ ಪ್ರತಿಫಲ ಮಾತ್ರ ಘೋರ ಎನ್ನುವುದು ಖನನ ಸಿನಿಮಾದ ಒನ್ ಲೈನ್ ಸ್ಟೋರಿ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಕನ್ನಡದಲ್ಲಿ ಖನನ, ತೆಲುಗಿನಲ್ಲಿ ಖನನಂ, ತಮಿಳಿನಲ್ಲಿ ದಗನಂ ಎಂಬ ಟೈಟಲ್ ನಲ್ಲಿ ನಿರ್ಮಾಣವಾಗಿ ರಿಲೀಸ್ ಗೆ ರೆಡಿಯಾಗಿರುವ ಈ ಸಿನಿಮಾ ಹಾರರ್ ಕಮ್ ಥ್ರಿಲ್ಲರ್ ಸ್ಟೋರಿ.
ಇಲ್ಲಿಯವರೆಗೂ ಬಹುತೇಕ ಹಿಟ್ ಚಿತ್ರಗಳಿಗೆ ಫ್ರೀ ಲ್ಯಾನ್ಸರ್ ಸ್ಕ್ರೀನ್ ಪ್ಲೇ ಬರಹಗಾರರಾಗಿ ಕಾರ್ಯನಿರ್ವಹಿಸಿದ್ದ ರಾಧಾ ಅಲಿಯಾಸ್ ರಾಧಾಕೃಷ್ಣ ಅವರು ಚೊಚ್ಚಲ ಬಾರಿಗೆ ಖನನ ಮೂಲಕ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ. ಅಲ್ಲದೇ ಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಇನ್ನು ಖನನ ಸಿನಿಮಾದ ಪಾತ್ರಗಳ ಆಯ್ಕೆಯ ವಿಚಾರಕ್ಕೆ ಬಂದರೆ ಆಯಾ ಪಾತ್ರಕ್ಕೆ ಸೂಟ್ ಆಗುವಂತಹ ವ್ಯಕ್ತಿಗಳನ್ನೇ ಹೆಕ್ಕಿ ತೆಗೆದಿರುವ ರಾಧಾ ಅವರು ಎಲ್ಲಿಯೂ ಪಾತ್ರದ ಆಯ್ಕೆಯಲ್ಲಿ ರಾಜಿಯಾಗಿಲ್ಲ. ಇಂದಿನ ಟ್ರೆಂಡಿಗೆ ತಕ್ಕಂತೆ ಜನ ಬಯಸುವ ಮಟ್ಟಿಗೆ ಸಿನಿಮಾ ಮಾಡಬೇಕೆಂಬ ಬಯಕೆಯಲ್ಲಿರುವ ರಾಧಾ ಅವರು ಒಂದು ದೊಡ್ಡ ಸಿನಿಮಾ ಗ್ರಂಥಾಲಯದಲ್ಲಿ ತನ್ನದೊಂದು 5 ಯೋಗ್ಯ ಸಿನಿಮಾಗಳಿರಬೇಕೆಂಬ ಕನಸನ್ನೊತ್ತಿದ್ದಾರೆ.
ಇನ್ನು ಈ ಚಿತ್ರಕ್ಕೆ ಶ್ರೀನಿವಾಸ್ ರಾವ್. ಬಿ ಎಂಬುವವರು ಬಂಡವಾಳ ಹೂಡುತ್ತಿದ್ದು, ಅವರ ಪುತ್ರ ಆರ್ಯವರ್ಧನ್ ರನ್ನು ಖನನ ಮೂಲಕ ನಾಯಕ ನಟನಾಗಿ ಲಾಂಚ್ ಮಾಡುತ್ತಿದ್ದಾರೆ. ಲಂಡನ್ ನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಆರ್ಯವರ್ಧನ್ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಕಥೆ ಕೇಳಿದಾಗ ಮೊದಲಿಗೆ ಅವರಿಗೂ ಅರ್ಥವಾಗಿರಲಿಲ್ಲವಂತೆ. ಆನಂತರದಲ್ಲಿ ನಿರ್ದೇಶಕರು ಅವರಿಗೆ ಸೀನ್ ಟು ಸೀನ್ ವಿವರಿಸಿದ್ದಾರೆ. ಚಿತ್ರದಲ್ಲಿ ಆರ್ಯವರ್ಧನ್ ಹೆಸರಾಂತ ಆರ್ಕಿಟೆಕ್ಟ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಸಂದರ್ಭಕ್ಕೆ ತಕ್ಕಂತೆ ಅವರ ರೂಪುರೇಷೆಗಳು ಬದಲಾಗುತ್ತವೆಯಂತೆ. ನಟನೆಯಲ್ಲಿನ್ನು ಮಾಗಬೇಕಿರುವ ಆರ್ಯವರ್ಧನ್ ನಿರ್ದೇಶಕರು ಅಣತಿಯ ಮೇರೆಗೆ ಮೈ ಮರೆತು ಅಭಿನಯಿಸಿದ್ದಾರೆ ಎನ್ನುತ್ತಾರೆ ರಾಧಾ.
ಕರಿಷ್ಮಾ ಬರುಹಾ ಖನನಂ ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರಮೇಶ್ ತಿರುಪತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಕುನ್ನಿ ಗುಡಿಪಾಟಿ ಸಂಗೀತ ಸಂಯೋಜಿಸಿದ್ದಾರೆ. ಯುವ ಕಿಶೋರ್, ಅವಿನಾಶ್, ಓಂ ಪ್ರಕಾಶ್ ರಾವ್, ಬ್ಯಾಂಕ್ ಜನಾರ್ದನ್, ಬೇಬಿ ಐಶ್ವರ್ಯ, ವಿನಯ್ ಪ್ರಸಾದ್, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ, ಮಹೇಶ್, ಮೋಹನ್ ಜುನೇಜಾ ತಾರಾಂಗಣದಲ್ಲಿದ್ದಾರೆ. ಮೇ 10ರಂದು 400ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.
No Comment! Be the first one.