ವಿಜಯಲಕ್ಷ್ಮಿಗೆ ನೆರವಾದ ಕಿಚ್ಚಾ ಸುದೀಪ್!


ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರೋದು, ಚಿಕಿತ್ಸಾ ವೆಚ್ಚವನ್ನೂ ಭರಿಸಲಾಗದೆ ಸಹಾಯಕ್ಕಾಗಿ ಚಿತ್ರರಂಗದ ಮುಂದೆ ಅಂಗಲಾಚಿದ್ದೆಲ್ಲ ಗೊತ್ತೇ ಇದೆ. ಇದೀಗ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಪ್ರಸಿದ್ಧಿ ಪಡೆದಿದ್ದ ಈ ನಟಿಗೆ ನಾನಾ ದಿಕ್ಕುಗಳಿಂದ ಸಹಾಯಹಸ್ತ ಚಾಚಿಕೊಳ್ಳುತ್ತಿದೆ.

ಕಿಚ್ಚಾ ಸುದೀಪ್ ಕೂಡಾ ಈಗ ವಿಜಯಲಕ್ಷ್ಮಿ ಅವರ ಸಂಕಟಕ್ಕೆ ಮಿಡಿದಿದ್ದಾರೆ. ಒಂದು ಲಕ್ಷ ರೂಪಾಯಿಗಳ ನೆರವನ್ನು ಸುದೀಪ್ ನೀಡಿದ್ದಾರೆ. ಈ ವಿಚಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಭಾ ಮಾ ಹರೀಶ್ ಅವರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಅನಾರೋಗ್ಯಕ್ಕೀಡಾಗಿದ್ದ ನಟಿಗೆ ನೆರವಾದ ಸುದೀಪ್ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಈಗೊಂದಷ್ಟು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ವಿಜಯಲಕ್ಷ್ಮಿ ಆರ್ಥಿಕವಾಗಿಯೂ ಅಸಹಾಯಕರಾಗಿದ್ದರು. ಇತ್ತೀಚೆಗೆ ಅವರು ಆಸ್ಪತ್ರೆಗೆ ದಾಖಲಾದಾಗಲಂತೂ ಆಸ್ಪತ್ರೆ ಹಾಗೂ ಔಷಧದ ವೆಚ್ಚ ಭರಿಸಲೂ ಸಾಧ್ಯವಾಗದೆ ಕುಟುಂಬಿಕರು ಕಂಗಾಲಾಗಿದ್ದರು. ಆದ್ದರಿಂದಲೇ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡು ನೆರವಾಗುವಂತೆ ಮನವಿ ಮಾಡಿದ್ದರು. ಈ ವಿಚಾರವನ್ನು ತಿಳಿದಾಕ್ಷಣವೇ ಸುದೀಪ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದರ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.


Posted

in

by

Tags:

Comments

Leave a Reply