ಕಾರ್ತಿ ನಟನೆಯ ಕೈದಿ, ವಿಜಯ್ ಮತ್ತು ವಿಜಯ್ ಸೇತುಪತಿ ನಟನೆಯ ಮಾಸ್ಟರ್, ಮಹಾನಗರಂ ಮುಂತಾದ ಚಿತ್ರಗಳನ್ನು ನೀಡಿರುವ ನಿರ್ದೇಶಕ ಲೋಕೇಶ್ ಕನಕರಾಜ್. ಸದ್ಯ ಕಮಲ್ ಹಾಸನ್ ಅವರ ವಿಕ್ರಂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟರುಗಳೆಲ್ಲಾ ನಟಿಸುತ್ತಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಡಬ್ ಆಗಿ ಬಿಡುಗಡೆಯಾಗಲಿದೆ.
ವಿಕ್ರಂ ಚಿತ್ರದಲ್ಲಿ ಮಲಯಾಳಂ ಹೀರೋ ಫಹಾದ್ ಫಾಸಿಲ್ ಖಳನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಜನ ವಿಲನ್ ಗಳಿದ್ದು, ನಾಲ್ಕೂ ಪಾತ್ರಗಳು ಪವರ್ ಫುಲ್ ಆಗಿವೆಯಂತೆ. ಅದರಲ್ಲೂ ಒಂದು ಪಾತ್ರವಂತೂ ನೋಡುಗರನ್ನು ಬೆಚ್ಚಿಬೀಳಿಸುವಂತಿದೆಯಂತೆ. ಆ ಪಾತ್ರದಲ್ಲಿ ನಟಿಸಲು ಕಿಚ್ಚ ಸುದೀಪ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎನ್ನುವ ವಿಚಾರವೊಂದು ಕೇಳಿಬಂದಿದೆ.
ಕನ್ನಡದಲ್ಲಿ ಸುದೀಪ್ ಟಾಪ್ ಹೀರೋ ಆಗಿದ್ದರೂ, ಭಾರತದ ಇತರೆ ಭಾಷೆಗಳಲ್ಲಿ ಅವರು ವಿಲನ್ ಆಗಿಯೇ ಹೆಚ್ಚು ಪರಿಚಿತ. ಹಿಂದಿಯ ಫೂಂಕ್, ರಣ್, ದಬಾಂಗ್3, ತೆಲುಗಿನ ಈಗ, ಸೈರಾ ನರಸಿಂಹ ರೆಡ್ಡಿ ಮತ್ತು ತಮಿಳಿನ ಪುಲಿ ಚಿತ್ರಗಳಲ್ಲಿ ಕಿಚ್ಚ ನೆಗೆಟೀವ್ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. ಹೀರೋಗಳನ್ನು ಮೆರೆಸುವಂತೆ ಅಲ್ಲಿನ ಜನ ಖಳನಟರನ್ನೂ ಆರಾಧಿಸುತ್ತಾರೆ. ಹೀಗಾಗಿ ಸುದೀಪ್ ಅವರೇ ಪಾತ್ರ ನಿರ್ವಹಿಸಬೇಕು ಅನ್ನೋದು ನಿರ್ದೇಶಕ ಲೋಕೇಶ್ ಕನಕರಾಜ್ ಬಯಕೆಯಂತೆ.
ಕಮಲ್ ಹಾಸನ್ ʻಉಲಗ ನಾಯಕನ್ʼ ಅಂತಾ ಹೆಸರು ಮಾಡಿರುವ ನಟ. ಭಾರತ ಮಾತ್ರವಲ್ಲದೆ, ಜಗತ್ತಿನ ಎಲ್ಲ ಭಾಷೆಯ ಜನರಿಗೂ ಕಮಲ್ ಪರಿಚಿತ. ಕಮಲ್ ಎದುರು ಪಾತ್ರ ನಿರ್ವಹಿಸೋದು ಎಂತಾ ಪಳಗಿದ ನಟನಿಗೂ ಕಷ್ಟಸಾಧ್ಯ ಅನ್ನೋ ಮಾತಿದೆ. ಅಂಥಾ ಮಹಾನ್ ಕಲಾವಿದನ ಎದುರು ವಿಲನ್ ಪಾತ್ರದಲ್ಲಿ ನಿಲ್ಲಬೇಕು ಅಂದರೆ, ಶಕ್ತಿಶಾಲಿ ನಟರಿಂದ ಮಾತ್ರ ಸಾಧ್ಯ. ಅದನ್ನು ಕಿಚ್ಚ ಸಲೀಸಾಗಿ ನಿಭಾಯಿಸುತ್ತಾರೆ ಅನ್ನೋದು ಹಲವರ ಅಭಿಪ್ರಾಯ. ಈ ಕಾರಣಕ್ಕೆ, ಹೇಗಾದರೂ ಕಿಚ್ಚನನ್ನು ಒಪ್ಪಿಸುವ ಪ್ರಯತ್ನವಾಗುತ್ತಿದೆ. ಭಾರತದ ಟಾಪ್ ಹೀರೋಗಳಾದ ಅಮಿತಾಭ್, ಚಿರಂಜೀವಿ, ಇಳಯ ದಳಪತಿ ವಿಜಯ್, ಸಲ್ಮಾನ್ ಖಾನ್ ಮುಂತಾದವರ ಎದುರು ನಟಿಸಿ ಗೆದ್ದ ಕನ್ನಡದ ಹೆಮ್ಮೆಯ ನಟ ಸುದೀಪ. ʼಈಗʼ ಸಿನಿಮಾದಲ್ಲಿ ನೊಣದ ವಿರುದ್ಧ ಸೆಣೆಸಾಡಿ, ಎಸ್.ಎಸ್. ರಾಜಮೌಳಿಯಂಥಾ ನಿರ್ದೇಶಕನ ಮುಂದೆ ಸೈ ಎನಿಸಿಕೊಂಡವರು ಕಿಚ್ಚ. ಒಂದು ವೇಳೆ ಕಮಲ್ ನಟನೆಯ ವಿಕ್ರಂ ಸಿನಿಮಾದಲ್ಲಿ ಸುದೀಪ್ ನಟಿಸಿದ್ದೇ ಆದಲ್ಲಿ ಅದು ಕೂಡಾ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ.
ಕಿಚ್ಚನಿಗೂ ಕಮಲ್ ನಂಥಾ ನಟನ ಜೊತೆ ನಟಿಸುವ ಇರಾದೆ ಇದೆ. ಆದರೆ, ವಿಪರೀತ ಬ್ಯುಸಿ ಇರುವ ಸುದೀಪ್ ಡೇಟ್ಸ್ ಹೊಂದಿಸೋದು ಕಷ್ಟವಾಗುತ್ತಿದೆ ಎನ್ನುವ ಮಾಹಿತಿಯಿದೆ. ಸುದೀಪ್, ಕಮಲ್ ಥರದ ನಟರು ಭಾಷೆಯನ್ನು ಮೀರಿದ ಕಲಾವಿದರು. ಬೇರೆ ಯಾವ ಗಿಮಿಕ್ಕೂ ಇಲ್ಲದೆ, ತಮ್ಮ ಅಸಾಧಾರಣ ನಟನೆಯಿಂದಲೇ ಬೆಳೆದವರು. ಈ ಇಬ್ಬರೂ ಕಲಾವಿದರು ಪರದೆ ಹಂಚಿಕೊಳ್ಳುವ ಕಾಲ ಬೇಗ ಕೂಡಿಬರಲಿ..
No Comment! Be the first one.