ಇಪ್ಪತ್ತೊಂಬತ್ತನೇ ಸಿನಿಮಾ ತೆರೆಗೆ ಬಂದಮೇಲೆ ಪವರ್ ಸ್ಟಾರ್ ಫುಲ್ ಸ್ಪೀಡಾದಂತೆ ಕಾಣುತ್ತಿದೆ. ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ರಿಲೀಸಾಗಿದೆ. ಸಿನಿಮಾ ನೋಡಿದವರು ಒಬ್ಬೊಬ್ಬರು ಒಂದೊಂದು ಥರಾ ಮಾತಾಡುತ್ತಿದ್ದಾರೆ. ಮಿಶ್ರ ಪ್ರತಿಕ್ರಿಯೆ, ಥೇಟರ್ ಸಮಸ್ಯೆಗಳ ನಡುವೆಯೂ ಯುವರತ್ನ ಉತ್ತಮ ಪ್ರದರ್ಶನ ಕಾಣುತ್ತಿದೆ.
ಸದ್ಯ ಪುನೀತ್ ನಟನೆಯ ಜೇಮ್ಸ್ ಶೂಟಿಂಗ್ ಚಾಲನೆಯಲ್ಲಿದೆ. ಎಲ್ಲ ವರ್ಗದ ಪ್ರೇಕ್ಷಕರು ನೋಡಿ ಎಂಜಾಯ್ ಮಾಡಬೇಕು ಅನ್ನೋದನ್ನೇ ಪರಮ ಗುರಿಯನ್ನಾಗಿಸಿಕೊಂಡು ಚೇತನ್ ಕುಮಾರ್ ಈ ಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ.
ರಾಮ ರಾಮ ರೇ ಸಿನಿಮಾ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶನದಲ್ಲಿ, ತಮ್ಮದೇ ಪಿ ಆರ್ ಕೆ ಬ್ಯಾನರಿನಿಂದ ನಿರ್ಮಿಸಿ ಪುನೀತ್ ನಟಿಸಬೇಕಿತ್ತು. ಪವರ್ ಸ್ಟಾರ್ ಯಾಕೆ ಮನಸು ಬದಲಿಸಿದರೋ ಗೊತ್ತಿಲ್ಲ. ಆ ಸಿನಿಮಾ ಸದ್ಯಕ್ಕೆ ಡ್ರಾಪ್ ಔಟ್ ಆಗಿದೆಯಂತೆ. ಒಂದು ಸಿನಿಮಾ ಶುರುವಾಗಿ ಅದು ತೆರೆಗೆ ಬರುವ ತನಕ ಅಪ್ಪು ಮತ್ತೊಂದು ಚಿತ್ರದ ಶೂಟಿಂಗ್ ಆರಂಭಿಸುತ್ತಿರಲಿಲ್ಲ. ಕೊರೋನಾ ಎಫೆಕ್ಟು ಬಾಧಿಸಿದ ನಂತರ ಪುನೀತ್ ಪಥ ಬದಲಿಸಿದಂತಿದೆ. ಈಗ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾ ಒಪ್ಪಿಕೊಂಡಿರೋದರ ಜೊತೆಗೆ ಹೊಂಬಾಳೆ ಸಂಸ್ಥೆಗೂ ಚಿತ್ರವೊಂದನ್ನು ಫೈನಲ್ ಮಾಡಿದ್ದಾರೆ. ಏಕಕಾಲದಲ್ಲಿ ಎರಡೂ ಚಿತ್ರಗಳು ಶೂಟ್ ಆಗುವಂತೆ ಡೇಟ್ಸ್ ಹಂಚಿದ್ದಾರಂತೆ. ಇದರ ಜೊತೆಗೆ ಲೂಸಿಯಾ ಪವನ್ ನಿರ್ದೇಶನದ ಸಿನಿಮಾದಲ್ಲೂ ಅಪ್ಪು ನಟಿಸಲಿದ್ದಾರೆ. ಜೊತೆಗೆ ಹೆಬ್ಬುಲಿ ಕೃಷ್ಣ ಅವರ ಕಥೆಯನ್ನೂ ಒಪ್ಪಿ ಡೇಟ್ಸ್ ನೀಡಿದ್ದಾರಂತೆ. ಅಲ್ಲಿಗೆ ಇನ್ನು ಒಂದೂವರೆ ವರ್ಷದೊಳಗೆ ಪುನೀತ್ ನಟನೆಯ ನಾಲ್ಕೈದು ಚಿತ್ರಗಳು ತಯಾರಾಗಿ ನಿಲ್ಲಲಿವೆ.
ಪವರ್ ಸ್ಟಾರ್ ಮನವೊಲಿಸಿ, ಕಾಲ್ ಶೀಟ್ ಪಡೆದು, ಡುಬಾಕ್ ಸಿನಿಮಾಗಳನ್ನು ಕೊಟ್ಟ ಮಹಾನುಭಾವ ನಿರ್ದೇಶಕರು ಬಂದು ಏನೇ ನೈಸು ಮಾಡಿದರೂ ಇನ್ಯಾವತ್ತೂ ಅವರನ್ನು ಹತ್ತಿರ ಬಿಟ್ಟುಕೊಳ್ಳಬಾರದು ಅಂತಾ ತೀರ್ಮಾನಿಸಿದ್ದಾರಂತೆ. ಕೆಲವು ಕಹಿ ಅನುಭವಗಳ ಕಾರಣಕ್ಕೆ, ಅಪ್ಪು ಸಿನಿಮಾ ಒಪ್ಪಿಕೊಳ್ಳುವ ಮುನ್ನ ಚಿತ್ರತಂಡದ ಬಗ್ಗೆ ತಿಳಿದುಕೊಂಡು, ಅಳೆದೂ ತೂಗಿ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ.
ಈಗ ದಿನಕರ್ ತೂಗುದೀಪ, ಪವನ್ ಕುಮಾರ್ ಮತ್ತು ಎಸ್. ಕೃಷ್ಣರಂಥ ಅನುಭವೀ ನಿರ್ದೇಶಕರು ಪುನೀತ್ ರಾಜ್ ಕುಮಾರ್ ಸಿನಿಮಾಗಳನ್ನು ನಿರ್ದೇಶಿಸಲು ತಯಾರಾಗಿರುವುದರಿಂದ, ಅಪ್ಪು ಮತ್ತೊಂದು ಸುತ್ತಿನ ಗೆಲುವು ಸಾಧಿಸೋದು ಗ್ಯಾರೆಂಟಿ. ಒಂದಕ್ಕಿಂತಾ ಒಂದು ಸಬ್ಜೆಕ್ಟುಗಳು ಅದ್ಭುತವಾಗಿವೆಯಂತೆ. ಇವೆಲ್ಲದರ ಜೊತೆಗೆ ಇನ್ನು ಮುಂದೆ ಪುನೀತ್ ಅಭಿನಯದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗೆ ಬರೋದರಿಂದ ಅವರ ಅಭಿಮಾನಿಗಳೂ ಖುಷಿ ಪಡಬಹುದು.
No Comment! Be the first one.