ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ್ದ ನಿರ್ದೇಶಕ ಕೋಡಿ ರಾಮಕೃಷ್ಣ ನೆನ್ನೆ ವಿಧಿವಶರಾಗಿದ್ದಾರೆ. ಈ ವ್ಯಕ್ತಿ ಈ ವರೆಗೆ ನಿರ್ದೇಶಿಸಿರುವುದು ಹತ್ತಿರತ್ತಿರ ನೂರೈವತ್ತು ಸಿನೆಮಾಗಳು. ಇತ್ತೀಚೆಗೆ ಒಂದೆರಡು ಸಿನಿಮಾಗಳು ದಾಟುವ ಹೊತ್ತಿಗೇ ಆಯಾಸಗೊಳ್ಳೋ ನಿರ್ದೇಶಕರ ನಡುವೆ ಕೋಡಿ ರಾಮಕೃಷ್ಣ ಎಂದಿಗೂ ಬತ್ತದ ಚಿಲುಮೆಯಂತಿದ್ದವರು. ೧೯೮೨ ರಲ್ಲಿ ಬಂದ ಇಂಟಿಲೋ ರಾಮಯ್ಯ ವೀದಿಲೊ ಕೃಷ್ಣಯ್ಯ ಅನ್ನೋ ಸಿನಿಮಾದಿಂದ ನಿರ್ದೇಶನ ಆರಂಭಿಸಿದ ರಾಮಕೃಷ್ಣ ಆನಂತರ ಗ್ಯಾಪು ಕೊಡದೇ ಸಿನಿಮಾಗಳನ್ನು ಹೊಸೆಯುತ್ತಾ ಬಂದವರು. ಹಲವಾರು ಬಗೆಯ ನೂರಾರು ಸಿನಿಮಾಗಳನ್ನು ಮಾಡುತ್ತಾ ಬಂದ ಕೋಡಿ ರಾಮಕೃಷ್ಣ ಜಗತ್ ಪ್ರಸಿದ್ದವಾಗಿದ್ದು ಗ್ರಾಫಿಕ್ಸ್ ಸಿನೆಮಾಗಳಿಂದ. ಅಮ್ಮೋರು, ದೇವುಲು, ದೇವಿ ಪುತ್ರುಡು, ಮಾ ಬಾಲಾಜಿ, ಆಂಜಿ, ಅರುಂಧತಿ ಮುಂತಾದ ಚಿತ್ರಗಳು ಕೋಡಿ ರಾಮಕೃಷ್ಣ ಅವರನ್ನು ಖ್ಯಾತಿಯ ಶಿಖರವೇರುವಂತೆ ಮಾಡಿದ್ದವು. ಕೋಟಿಗಳ ಲೆಕ್ಕವಿಲ್ಲದ ಬಜೆಟ್ನ ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ಹೆಸರು ಮಾಡಿರುವ ಕೋಡಿ ರಾಮಕೃಷ್ಣ ಆರಂಭದ ದಿನಗಳಲ್ಲಿ ಸಿಕ್ಕಾಪಟ್ಟೆ ಸೈಕಲ್ ಹೊಡೆದಿದ್ದರಂತೆ. ತಮ್ಮ ಮೊದಲ ಚಿತ್ರ ತೆರೆಗೆ ಬರುವ ಮುಂಚೆ ಆ ಚಿತ್ರದ ನಿರ್ಮಾಪಕರಿಂದ ಐನೂರು ರುಪಾಯಿ ಪಡೆದು ಬಂದು ಸೀದಾ ಬೆಂಗಳೂರಿಗೆ ಬಸ್ ಹತ್ತುತ್ತಿದ್ದದ್ದರಂತೆ. ಹಾಗೆ ಬೆಂಗಳೂರಿಗೆ ಬಂದವರೇ ಮಯೂರ ಲಾಡ್ಜ್ನಲ್ಲಿ ದಿನಕ್ಕೆ ಹನ್ನೆರಡು ರುಪಾಯಿ ಬಾಡಿಗೆಗೆ ರೂಮು ಪಡೆದು, ಕೆ.ಜಿ. ರಸ್ತೆಯಲ್ಲಿ ರಿಲೀಸಾದ ಸಿನಿಮಾಗಳನ್ನು ದಿನಕ್ಕೊಂದರಂತೆ ವೀಕ್ಷಿಸಿ, ಸೀದಾ ವಿಧಾನಸೌಧದ ಎದುರಿಗಿದ್ದ ಪಾರ್ಕಿನಲ್ಲಿ ಕೂತು ತಾವು ನಿರ್ದೇಶಿಸಲು ಉದ್ದೇಶಿಸಿದ ಸಿನೆಮಾಗಳಿಗೆ ಕಥೆ ಬರೆಯುತ್ತಿದ್ದರಂತೆ… ಹೀಗೆ ಹೈದ್ರಾಬಾದಿಂದ ಬೆಂಗಳೂರಿಗೆ ಬಂದು, ಕನ್ನಡ ಸಿನೆಮಾಗಳನ್ನು ನೋಡುತ್ತಾ, ವಿಧಾನಸೌಧದ ಎದುರಿಗಿನ ಪಾರ್ಕ್ನಲ್ಲಿ ಕಳೆದ ದಿನಗಳು ಲೆಕ್ಕವಿಲ್ಲ ಅಂತಾ ಕೋಡಿ ರಾಮಕೃಷ್ಟ ಎಷ್ಟೋ ಸಾರಿ ಹೇಳಿಕೊಂಡಿದ್ದರು.
ಇಂಥ ಕೋಡಿ ರಾಮಕೃಷ್ಣ ಅವರಿಗೆ ಬದುಕಿನಲ್ಲೊ ಮಹದಾಸೆಯೊಂದಿತ್ತು. ಅದೇನೆಂದರೆ, ಕನ್ನಡದ ಅದ್ಭುತ ನಟ ವಿಷ್ಣುವರ್ಧನ್ ಅವರಿಗಾಗಿ ಸಿನೆಮಾವೊಂದನ್ನು ನಿರ್ದೇಶಿಸಬೇಕು ಅನ್ನೋದು.
ಅದು ೧೯೯೧ ರ ಸಮಯ. ಆಗಷ್ಟೇ ಕೋಡಿ ರಾಮಕೃಷ್ಣ ಅವರ ಭಾರತ್ ಬಂದ್ ಸಿನೆಮಾ ರಿಲೀಸಾಗಿ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದ ದಿನಗಳವು. ಅಂಥ ಸಂದರ್ಭದಲ್ಲಿ ರಾಮಕೃಷ್ಣರ ಮನೆಯ ಲ್ಯಾಂಡ್ಲೈನ್ಗೆ ಕರೆಯೊಂದು ಬರುತ್ತದೆ. ಈ ಕಡೆಯಿಂದ ‘ನಾನು ವಿಷ್ಣುವರ್ಧನ್ ಮಾತಾಡ್ತಿರೋದು?’ ಹೀಗೆ ಮಾತು ಶುರುವಾಗುತ್ತದೆ. ರಾಮಕೃಷ್ಣರಿಗೆ ಪರಮಾಶ್ಚರ್ಯ! ನಂತರ ಭಾರತ್ ಬಂದ್ ಕುರಿತು ಮಾತು ಹೊರಳಿಕೊಳ್ಳುತ್ತದೆ? ಇಂಥದ್ದೊಂದು ಸಿನೆಮಾದಲ್ಲಿ ನಾನು ನಟಿಸಬೇಕು. ನೀವೇ ಅದನ್ನು ಡೈರೆಕ್ಟ್ ಮಾಡಬೇಕು ಎಂದುಬಿಡೋದೆ? ಕಂಡ ಕನಸು ಹುಡುಕಿಕೊಂಡು ಬಂದು ಕೈ ಸೇರಿದಷ್ಟು ಖುಷಿಗೊಂಡಿದ್ದರು ರಾಮಕೃಷ್ಣ. ಇದಾದ ನಂತರ ಕೋಡಿ ರಾಮಕೃಷ್ಣ ಮತ್ತು ವಿಷ್ಣು ನಡುವಿನ ಬಾಂಧವ್ಯ ಗಟ್ಟಿಯಾಗುತ್ತಾ ಹೋಯಿತು. ಈ ನಡುವೆ ರಾಮಕೃಷ್ಣ ಹಲವು ಕಥೆಗಳನ್ನು ವಿಷ್ಣುಗೆ ಹೇಳಿದ್ದರು. ಆದರೆ ವಿಷ್ಣು ಮಾತ್ರ ಯಾವ ಕಥೆಯನ್ನೂ ಓಕೆ ಅನ್ನಲೇಇಲ್ಲ. ಸರಿ ಸುಮಾರು ಹತ್ತು ವರ್ಷಗಳ ನಂತರ ವಿಷ್ಣು ಕೋಡಿ ರಾಮಕೃಷ್ಣರ ಕಥೆಯೊಂದನ್ನು ಬಹಳ ಇಷ್ಟಪಟ್ಟು ಸ್ಕ್ರಿಪ್ಟ್ ಫೈನಲ್ ಮಾಡಿಕೊಂಡು ಬನ್ನಿ ಎಂದಿದ್ದರು. ವಿಷ್ಣು ಹೇಳಿದಂತೆ ಕೋಡಿ ರಾಮಕೃಷ್ಣ ಇಷ್ಟದ ನಟನಿಗಾಗಿ ಚಿತ್ರಕಥೆ ಮುಗಿಸುವ ಹಂತರದಲ್ಲಿದ್ದರು. ಅದೊಂದು ದಿನ ಕನಸುಮನಸಿನಲ್ಲೂ ನಿರೀಕ್ಷಿಸದ ಸುದ್ದಿಯೊಂದು ರಾಮಕೃಷ್ಣರ ಕಿವಿ ತಲುಪಿತ್ತು; ‘ವಿಷ್ಣು ಹೊರಟುಹೋದರು’ ಎಂದು? ವಿಷ್ಣು ವಿಧಿವಶರಾದ ನಂತರ ತಿಂಗಳುಗಳ ಕಾಲ ಕೋಡಿ ರಾಮಕೃಷ್ಣರನ್ನು ಖಿನ್ನತೆ ಆವರಿಸಿತ್ತು. ‘ಕಡೆಗೂ ವಿಷ್ಣುಗಾಗಿ ಒಂದು ಸಿನೆಮಾ ನಿರ್ದೇಶಿಸಲು ಸಾಧ್ಯವಾಗಲಿಲ್ಲ’ ಅನ್ನೋದೇ ಕೊರಗಾಗಿಬಿಟ್ಟಿತ್ತು. ಈ ಸಮಯದಲ್ಲೇ ಕೋಡಿ ರಾಮಕೃಷ್ಣ ಅವರ ತಲೆಗೆ ಬಂದಿದ್ದು, ‘ವಿಷ್ಣು ಅವರು ತೆರೆಯ ಮೇಲೆ ಮರುಹುಟ್ಟು ಪಡೆಯುವಂತೆ ಮಾಡಬೇಕು’ ಅನ್ನೋ ಅಲೋಚನೆ. ಇದರ ಫಲವೆಂಬಂತೆ ಈಗ ‘ನಾಗರಹಾವು’ ಚಿತ್ರದಲ್ಲಿ ಗ್ರಾಫಿಕ್ಸ್ ಮೂಲಕ ಅದನ್ನು ಸಾಧ್ಯವಾಗಿಸಿದ್ದರು ಕೋಡಿ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೋಡಿ ರಾಮಕೃಷ್ಟ ಹೈದ್ರಾಬಾದಿನ ಗಚಿಬೌಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಮಕೃಷ್ಣ ಇಲ್ಲವಾದರೂ ಅವರ ನೂರಾರು ಸಿನಿಮಾಗಳು ಯಾವತ್ತಿಗೂ ಜನರ ಮನಸ್ಸಿನಲ್ಲಿ ಅವರನ್ನು ಜೀವಂತವಾಗಿರಿಸುತ್ತದೆ
No Comment! Be the first one.