ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಾದರೂ ಅದರದೇ ಜಿಲ್ಲೆಗಳಲ್ಲಿ ಆಯಾ ಭಾಗಕ್ಕೆ ತಕ್ಕಂತಹ ಕನ್ನಡ ಸ್ಲಾಂಗ್ ರೂಢಿಯಲ್ಲಿದೆ. ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು, ಉಡುಪಿ, ಉತ್ತರ ಕನ್ನಡ, ರಾಯಚೂರು ಹೀಗೆ ಎಲ್ಲವೂ ಕನ್ನಡಮಯವಾದರೂ ಧಾಟಿ ಬದಲಿರುತ್ತದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಬರುವ ಕುಂದಾಪುರ ಕನ್ನಡ ಈಗೀಗ ಹೆಚ್ಚು ಫೇಮಸ್ ಆಗುತ್ತಿದ್ದು, ಸಿನಿಮಾ, ಧಾರವಾಹಿ, ನಾಟಕ, ರಿಯಾಲಿಟಿ ಶೋಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಇತ್ತೀಚಿಗೆ ವಿಶ್ವ ಕುಂದಾಪುರ ಕನ್ನಡ ದಿನದ ನಿಮಿತ್ತ ಯೂಟ್ಯೂಬ್ ನಲ್ಲಿ ಕುಂದಾಪುರ ಕನ್ನಡದ ನನ್ನೂರೆ ಚಂದ ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಸಖತ್ ಸೌಂಡು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಕಂಡಿರುವ ಈ ಹಾಡನ್ನು ಸಚಿನ್ ಬಸ್ರೂರ್ ನಿರ್ದೇಶನ ಮಾಡುವ ಜೊತೆಗೆ ಸಂಗೀತ ಸಂಯೋಜಿಸಿ ಹಾಡಿಗೆ ದನಿಗೂಡಿಸಿದ್ದಾರೆ. ಅಲ್ಲದೆ ಪಲ್ಲವಿ ಐಥಾಲ್ ಹಾಗೂ ಪ್ರಮೋದ್ ಅವರ ಜೊತೆ ಸೇರಿ ಸಾಹಿತ್ಯ ವನ್ನು ಬರೆದಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಅಳಿಯನಾಗಿರುವ ಸಚಿನ್ ಬಸ್ರೂರ್ ಅವರ ಗರಡಿಯಲ್ಲಿಯೇ ಪಳಗಿದವರು. ಸಂಗೀತ, ಗಾಯನ, ಛಾಯಾಗ್ರಹಣದಲ್ಲಿ ಹಿಡಿತ ಸಾಧಿಸಿರುವ ಸಚಿನ್ ಕೆಜಿಎಫ್ ಚಿತ್ರದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.
No Comment! Be the first one.