ಕುರಿಗಳು ಸಾರ್ ಕುರಿಗಳು ಮತ್ತು ಕುರಿ ಬಾಂಡ್ ಎಂಬ ಟೀವಿ ಕಾರ್ಯಕ್ರಮಗಳಿಂದ ಹೊರಬಂದಿರೋ ಪ್ರತಿಭಾವಂತರು ಒಬ್ಬಿಬ್ಬರಲ್ಲ. ಕುರಿ ಪ್ರತಾಪ, ಕುರಿ ರಂಗ, ಕುರಿ ಸುನಿಲ, ಕುರಿ ಪ್ರಕಾಶ, ಕುರಿ ಸಾಗರ್… ಹೀಗೆ ಕುರಿ ಬ್ರಾಂಡಿನ ಹುಡುಗರು ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.
ನೋಡೋಕೆ ಮಜಾ ಕೊಡುವ, ಸಲೀಸಾಗಿ ತಯಾರಾಗಿಬಿಡುವಂಥಾ ಕುರಿ ಕಾರ್ಯಕ್ರಮವನ್ನು ರೂಪಿಸೋದು ಅಷ್ಟು ಸುಲಭವಲ್ಲ. ಅದೊಂದು ದಿನ ಕುರಿ ಟೀಮು ಬೆಂಗಳೂರಿನ ಏರಿಯಾವೊಂದಕ್ಕೆ ನುಗ್ಗಿತ್ತು. ವ್ಯಕ್ತಿಯೊಬ್ಬನನ್ನು ಕುರಿ ಮಾಡಲು ಅಖಾಡಕ್ಕಿಳಿದಿದ್ದು ನಟ ಕುರಿ ರಂಗ. ರಂಗ ಏನೋನೋ ವೇಷ ಹಾಕಿ, ಡ್ರಾಮಾ ಮಾಡಿ ಅಲ್ಲಿರೋ ವ್ಯಕ್ತಿಯನ್ನು ಕುರಿ ಮಾಡಲು ಪ್ರಯತ್ನಿಸುತ್ತಿದ್ದ. ಆದರೆ ಅಲ್ಲಿದ್ದ ಮಂದಿಗೆ ಇಲ್ಲಿ ಬೇರೇನೋ ನಡೆಯುತ್ತಿದೆ ಅನ್ನೋ ಗುಮಾನಿ. ಇವನ್ಯಾರೋ ಆಗಂತುಕ ಅಂತಾ ಭಾವಿಸಿದ ಅಲ್ಲಿದ್ದ ಗ್ಯಾಂಗು ರಂಗನನ್ನು ಸುತ್ತುವರೆದಿತ್ತು. ಒಬ್ಬರಿಗೊಬ್ಬರು ಕಣ್ಣು ಕಣ್ಣಲ್ಲೇ ಸನ್ನೆ ಮಾಡಿಕೊಂಡು ಸಿಗ್ನಲ್ ಪಾಸ್ ಮಾಡಿಕೊಂಡಿದ್ದರು. ಒಳಗೊಳಗೇ ಅದೇನು ಸ್ಕೆಚ್ಚು ಹಾಕಿದ್ದರೋ ಗೊತ್ತಿಲ್ಲ. ಒಬ್ಬೊಬ್ಬರ ಬಾಯಲ್ಲೂ ಕೆಟ್ಟಾ ಕೊಳಕು ಮಾತುಗಳು ಉದುರುತ್ತಿದ್ದವು. ಕುರಿ ರಂಗಣ್ಣನಿಗೆ ಇಲ್ಲಿ ಬೇರೇನೋ ಸ್ಕೀಮು ನಡೆಯುತ್ತಿದೆ. ವಾತಾವರಣ ಯಾಕೋ ಸರಿಯಿಲ್ಲ ಅಂತಾ ಅನುಮಾನ ಶುರುವಾಗಿತ್ತು. ಮಹಡಿಯ ಮೇಲೊಬ್ಬ ವ್ಯಕ್ತಿ ಎಲ್ಲವನ್ನೂ ಗಮನಿಸುತ್ತಿದ್ದವನು ಓಡೋಡಿ ಕೆಳಗಿಳಿದುಬಂದು ‘ಲೋ ಬಿಡ್ರೋ ಬಿಡ್ರೋ… ಇವ್ರು ಕುರಿ ಪ್ರೋಗ್ರಾಮ್ನೋರು’ ಅಂತಾ ಅಂದಿದ್ದ.
ಹಾಗೆ ಓಡಿ ಬಂದು ಕುರಿ ರಂಗನನ್ನು ಕಾಪಾಡಿದವನು ಬೇರೆ ಯಾರೂ ಅಲ್ಲ, ಮೊನ್ನೆಮೊನ್ನೆಯಷ್ಟೇ ನಡುರಸ್ತೆಯಲ್ಲಿ ಮರ್ಡರ್ ಆದ, ನಟೋರಿಯಸ್ ರೌಡಿ ಲಕ್ಷ್ಮಣ! ಇದಾದ ಒಂದಷ್ಟು ದಿನಗಳ ನಂತರ ಆರ್.ಆರ್. ನಗರದ ಗೋಪಾಲನ್ ಮಾಲ್ ನಲ್ಲಿ ಮತ್ತೆ ರಂಗನಿಗೆ ಎದುರಾದ ಲಕ್ಷ್ಮಣ ‘ಸಾರಿ ಬ್ರದರ್ ಆವತ್ತು ನಮ್ ಹುಡುಗ್ರು ನಿಮ್ ಹತ್ರಾ ರಫ್ಫಾಗಿ ನಡಕೊಂಡುಬಿಟ್ರು’ ಅಂದನಂತೆ. ಲಕ್ಷ್ಮಣನ ದಯೆಯಿಂದ ರಂಗಣ್ಣ ಸೇಫಾಗಿ ಬಂದಿದ್ದೇನೋ ಆಯಿತು. ಆದರೆ ಸ್ವತಃ ಲಕ್ಷ್ಮಣನನ್ನು ಯಾರೋ ಪುಡಿ ಹುಡುಗರು ಕೊಂದುಬಿಸಾಡಿದ್ದಾರೆ. ಈತನ ಜೀವ ಉಳಿಸಲು ಯಾವ ಪಟಾಲಮ್ಮೂ ಇರದಿದ್ದುದು ದುರಂತ!